ಗಯಾನಾ: ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಗೆ ಭಾರತ ತಂಡ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿದ ರೋಹಿತ್ ಶರ್ಮಾ ಬಳಗ ಫೈನಲ್ ಗೆ ತಲುಪಿದೆ. ಕೂಟದಲ್ಲಿ ಸೋಲು ಕಾಣದ ಎರಡು ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ನಲ್ಲಿ ಮುಖಾಮುಖಿಯಾಗಲಿದೆ.
ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಅಂತಿಮ ಸುತ್ತು ತಲುಪಿರುವ ಭಾರತ ಬಲಿಷ್ಠವಾಗಿದೆ. ಆದರೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಸದ್ಯದ ಫಾರ್ಮ್ ಟೀಂ ಮ್ಯಾನೇಜ್ ಮೆಂಟ್ ಚಿಂತೆಗೆ ಕಾರಣವಾಗಿದೆ. ಭರ್ಜರಿ ಐಪಿಎಲ್ ಫಾರ್ಮ್ ನೊಂದಿಗೆ ಟಿ20 ವಿಶ್ವಕಪ್ ಗೆ ಬಂದಿದ್ದ ವಿರಾಟ್ ಇಲ್ಲಿ ರನ್ ಕಲೆಹಾಕಲು ಪರದಾಡುತ್ತಿದ್ದಾರೆ. ಆಡಿದ ಏಳು ಪಂದ್ಯಗಳಲ್ಲಿ ವಿರಾಟ್ ಗಳಿಸಿದ್ದು ಕೇವಲ 75 ರನ್. ಇಂಗ್ಲೆಂಡ್ ವಿರುದ್ದವೂ 9 ರನ್ ಮಾಡಿದ ವಿರಾಟ್ ಬೌಲ್ಡ್ ಆಗಿದ್ದರು.
ಪಂದ್ಯದ ಬಳಿಕ ನೇರಪ್ರಸಾರಕರೊಂದಿಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅವರಿಗೆ ವಿರಾಟ್ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಅವರು ಕೊಹ್ಲಿಯನ್ನು ಬೆಂಬಲಿಸಿಯೇ ಮಾತನಾಡಿದ್ದು, ಬಹುಶಃ ಫೈನಲ್ ಪಂದ್ಯಕ್ಕೆ ವಿರಾಟ್ ತನ್ನ ರನ್ ಜೋಪಾನ ಮಾಡಿರಬಹುದು ಎಂದರು.
“ವಿರಾಟ್ ಒಬ್ಬ ಗುಣಮಟ್ಟದ ಆಟಗಾರ. ಯಾವುದೇ ಆಟಗಾರ ಫಾರ್ಮ್ ಸಮಸ್ಯೆಗೆ ಒಳಗಾಗುತ್ತಾನೆ. ಆತನ ಕ್ಲಾಸ್ ಮತ್ತು ಮಹತ್ವದ ಬಗ್ಗೆ ನಮಗೆ ಗೊತ್ತು. ಫಾರ್ಮ್ ನಮಗೆ ಸಮಸ್ಯೆಯಲ್ಲ. ಆದರೆ ರನ್ ಗಳಿಸುವ ಉದ್ದೇಶ ಯಾವಾಗಲೂ ಇದೆ. ಫೈನಲ್ ಗೆ ಅವರಿಗೆ ಬೆಂಬಲ ನೀಡುತ್ತೇವೆ” ಎಂದು ರೋಹಿತ್ ಹೇಳಿದರು.
“ನೀವು 15 ವರ್ಷಗಳ ಕಾಲ ಕ್ರಿಕೆಟ್ ಆಡಿದಾಗ, ಫಾರ್ಮ್ ಎಂದಿಗೂ ಸಮಸ್ಯೆಯಾಗಿರುವುದಿಲ್ಲ. ಅವರು ಉತ್ತಮವಾಗಿ ಕಾಣುತ್ತಿದ್ದಾರೆ, ವಿರಾಟ್ ಬಹುಶಃ ಫೈನಲ್ ಗಾಗಿ ರನ್ ಉಳಿಸುತ್ತಿದ್ದಾನೆ” ಎಂದರು.