ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಪ್ರಸಕ್ತ ಐಪಿಎಲ್ ಟೂರ್ನಿಯ ಕೆಲವು ಪಂದ್ಯಗಳಿಂದ ಹೊರಗುಳಿದು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಆಗ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸಿ ಪ್ರಕಟಿಸಿದೆ.
ಐಪಿಎಲ್ ಮುಗಿದ ಬೆನ್ನಲ್ಲೇ ಭಾರತ ತಂಡ 2021-23ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಲಿದೆ. ಲಂಡನ್ನ ಓವಲ್ ಅಂಗಳದಲ್ಲಿ ಜೂ. 7ರಂದು ಆಸ್ಟ್ರೇಲಿಯ ವಿರುದ್ಧದ ಪ್ರಶಸ್ತಿ ಸಮರ ಮೊದಲ್ಗೊಳ್ಳಲಿದೆ. ಅನಂತರ ಬಹಳಷ್ಟು ಅಂತಾರಾಷ್ಟ್ರೀಯ ಸರಣಿಗಳು ಎದುರಾಗಲಿವೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ರೋಹಿತ್ ಉದ್ದೇಶ.
ಯಾವ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬುದನ್ನು ಸ್ವತಃ ರೋಹಿತ್ ಶರ್ಮ ಅವರೇ ನಿರ್ಧರಿಸಲಿದ್ದಾರೆ. ಅವರಿಗೆ ವಿಶ್ರಾಂತಿ ನೀಡುವುದರಿಂದ ಯಾವುದೇ ಸಮಸ್ಯೆಯಾಗದು ಎಂಬುದಾಗಿ ಕೋಚ್ ಮಾರ್ಕ್ ಬೌಷರ್ ಹೇಳಿದರು.
ವಿಶ್ರಾಂತಿ ತೆಗೆದುಕೊಳ್ಳುವ ಕುರಿತು ರೋಹಿತ್ ಶರ್ಮ ಅಧಿಕೃತವಾಗೇನೂ ತಿಳಿಸಿಲ್ಲ. ಮಾಧ್ಯಮದವರ ಪ್ರಶ್ನೆ ಎದುರಾದಾಗ “ಇದು ಕೋಚ್ ಮಾರ್ಕ್ ಬೌಷರ್ಗೆ ಬಿಟ್ಟ ವಿಷಯ’ ಎಂದರು. ಮಾರ್ಕ್ ಬೌಷರ್ ಪ್ರತಿಕ್ರಿಯಿಸುತ್ತ, “ರೋಹಿತ್ ಬಯಸಿದರೆ ವಿಶ್ರಾಂತಿ ನೀಡಲು ನಮ್ಮದೇನೂ ಅಡ್ಡಿ ಇಲ್ಲ” ಎಂದರು.
Related Articles
ಫಿಟ್ನೆಸ್ ಅತ್ಯಗತ್ಯ
“ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಆಟಗಾರರಿಗೆ ಬಿಟ್ಟ ಸಂಗತಿ. ಎಲ್ಲವನ್ನೂ ತಿಳಿದಿರುವ ಅವರು ತಮ್ಮ ದೇಹದ ಮೇಲೆ ಗಮನ ಹರಿಸಬೇಕು. ಸತತ ಕ್ರಿಕೆಟ್ ಪಂದ್ಯಗಳನ್ನು ಆಡುವುದರಿಂದ ಹೊರೆ ಜಾಸ್ತಿ ಆಗುತ್ತಿದೆ ಎಂದೆನಿಸಿದರೆ ಒಂದೆರಡು ಪಂದ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದೂ ಹೇಳಿದ್ದರು. ಇದೀಗ ಸ್ವತಃ ತಾವೇ ಅನುಸರಿಸುವ ಹಾದಿಯಲ್ಲಿದ್ದಾರೆ ರೋಹಿತ್ ಶರ್ಮ.
ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಯ ಬಳಿಕ ಹೇಳಿಕೆಯೊಂದನ್ನು ನೀಡಿದ್ದ ರೋಹಿತ್ ಶರ್ಮ, “ಭಾರತದ ರಾಷ್ಟ್ರೀಯ ತಂಡದ ಆಟಗಾರರನ್ನು ಮುಂಬರುವ ಅಂತಾರಾಷ್ಟ್ರೀಯ ಸರಣಿಗೆ ಫಿಟ್ ಆಗಿರಿಸುವುದು ಐಪಿಎಲ್ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ” ಎಂದಿದ್ದರು.
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ತೀರಾ ನೀರಸ ಪ್ರದರ್ಶನ ನೀಡಿತ್ತು. ಪ್ಲೇ ಆಫ್ ಕೂಡ ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಶ್ರೇಷ್ಠ ಮಟ್ಟದ ಆಟವನ್ನು ನಿರೀಕ್ಷಿಸಲಾಗಿದೆ.