ಮುಂಬಯಿ: ತುಳು- ಕನ್ನಡಿಗರಾದ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿಯ 6ನೇ ವಾರ್ಷಿಕ ಮಂಥನ್-2023 ಸಂಭ್ರಮವು ಮೇ. 28 ರಂದು ಬೋರಿವಲಿ ಪಶ್ಚಿಮದ ಪ್ರಭೊಧನ್ಕರ್ ಠಾಕ್ರೆ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಕಳೆದ ಹಲವಾರು ವರ್ಷಗಳಿಂದ ಬೊರಿವಲಿ ಪಶ್ಚಿಮದಲ್ಲಿ ಡಾನ್ಸ್ ತರ ಗತಿ ನಡೆಸುತ್ತಾ ಸಾವಿರಾರು ಮಂದಿ ಆಸಕ್ತರಿಗೆ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ ಮೂಲಕ ನೃತ್ಯ ಕಲಿಸುತ್ತಿರುವ, ಕಿರುತೆರೆಯಲ್ಲಿ ನೃತ್ಯ ಹಾಗೂ ಎ.ಬಿ.ಸಿ.ಡಿ. ಯಂತಹ ಚಲನಚಿತ್ರ ದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ ರೋಹಿತ್ ಪೂಜಾರಿ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೋಹಿತ್ ಪೂಜಾರಿ ಹಾಗೂ ಅವರ ವಿದ್ಯಾರ್ಥಿಗಳು ಕೋವಿಡ್ ಮಹಾಮಾರಿ ಅಧಾರಿತ ನೂತನ ಶೈಲಿಯ ನೃತ್ಯ ಪ್ರದರ್ಶನ ನೀಡಿ ಸೇರಿದ ನೃತ್ಯಾಭಿಮಾನಿಗಳ ಗಮನ ಸೆಳೆದರು.
ಟಿ. ವಿ. ಪೂಜಾರಿಯವರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಸುರೇಂದ್ರ ಪೂಜಾರಿ, ಅತಿಥಿಗಳಾಗಿ ಸಮಾಜ ಸೇವಕಿ, ತುಳು ಸಂಘ ಬೊರಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮಾ ವೈದ್ಯ ಮತ್ತು ಸಮಾಜ ಸೇವಕಿ ಶೀತಲ್ ಮ್ಹಾತ್ರೆ ಭಾಗವಹಿಸಿ ಅಕಾಡಮಿಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸುನಿಲ್ ರಾಣೆ ಅವರು ರೋಹಿತ್ ಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಡಾನ್ಸ್ ಅಕಾಡೆಮಿಗೆ ಶುಭ ಹಾರೈಸಿ, ಮಂಥನ್-2023 ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.
ನೃತ್ಯದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಾಗೂ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರೋಹಿತ್ ಪೂಜಾರಿ ವಂದಿಸಿದರು.