ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ತಂಡ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಜಯಿಸಿದೆ. ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್ ಬ್ಯಾಟಿಂಗ್ ನಲ್ಲಿ ಮತ್ತು ಪ್ರಸಿಧ್ ಕೃಷ್ಣ ಬೌಲಿಂಗ್ ನಲ್ಲಿ ತಂಡಕ್ಕೆ ಸಹಕಾರಿಯಾದರು.
ಭಾರತ ತಂಡದ ನೀಡಿದ 238 ರನ್ ಗಳ ಸಾಧಾರಣ ಗುರಿ ಬೆನ್ನತ್ತಲಾಗದ ವಿಂಡೀಸ್ 193 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಇದರೊಂದಿಗೆ ಭಾರತ ತಂಡ 44 ರನ್ ಅಂತರದ ಗೆಲುವು ಸಾಧಿಸಿತು.
ಅಹಮದಾಬಾದ್ ಅಂಗಳದಲ್ಲಿ ಕರ್ನಾಟಕದ ಯುವ ವೇಗಿ ಪ್ರಸಿಧ್ ಕೃಷ್ಣ ಅಧ್ಭುತ ಬೌಲಿಂಗ್ ನಡೆಸಿದರು. 9 ಓವರ್ ಎಸೆದ ಪ್ರಸಿಧ್ ಮೂರು ಓವರ್ ಮೇಡನ್ ಮಾಡಿ ಕೇವಲ 12 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ:ಮಗಳಿಗೆ “ಈಡನ್’ ಹೆಸರಿಟ್ಟ ಕಾರ್ಲೋಸ್ ಬ್ರಾತ್‌ವೇಟ್!
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, “ನಾನು ಭಾರತದಲ್ಲಿ ಬಹಳ ದಿನಗಳಿಂದ ಅಂತಹ ವೇಗದ ಬೌಲಿಂಗ್ ನೋಡಿಲ್ಲ. ಪ್ರಸಿದ್ಧ್ ಸಾಕಷ್ಟು ವೇಗದಲ್ಲಿ ಬೌಲಿಂಗ್ ಮಾಡಿದರು. ಇತರರು ಅವನಿಗೆ ಪೂರಕವಾಗಿ ಬೌಲಿಂಗ್ ನಡೆಸಿದರು” ಎಂದರು.
ಅಂತಿಮ ಏಕದಿನ ಪಂದ್ಯ ಶುಕ್ರವಾರ (ಫೆ.11) ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.