ದುಬೈ: ಬುಧವಾರದಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟಿ-ಟ್ವೆಂಟಿ ಸರಣಿಯ ನಂತರ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಂಡಿದ್ದು, ಶಿಖರ್ ಧವನ್, ಯುಜುವೇಂದ್ರ ಚಾಹಲ್ ಮತ್ತು ರೋಹಿತ್ ಶರ್ಮಾ ಕುಸಿತ ಕಂಡಿದ್ದರೆ, ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಸೀಸ್ ನ ಗ್ಲೆನ್ ಮ್ಯಾಕ್ಸ್ ವೆಲ್‌ಗೆ ಬಂಪರ್ ಹೊಡೆದಿದ್ದು ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಸರಣಿಗೂ ಮೊದಲು ಆರನೇ ಸ್ಥಾನದಲ್ಲಿದ್ದ ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಮೂರು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನಕ್ಕೇರಿದರು. ಇದು ಮ್ಯಾಕ್ಸ್ ವೆಲ್ ಅವರ ಜೀವನಶ್ರೇಷ್ಠ ರ‍್ಯಾಕಿಂಗ್. ಆದರೆ ಮೂರನೇ ಸ್ಥಾನದಲ್ಲಿದ್ದ ಆಸೀಸ್ ನಾಯಕ ಆರೋನ್ ಫಿಂಚ್ ಒಂದು ಸ್ಥಾನ ಕೆಳಕ್ಕಿಳಿದು ನಾಲ್ಕನೇ ಸ್ಥಾನಕ್ಕೆ ಜಾರಿದರು.
ದ್ವಿತೀಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎರಡು ಸ್ಥಾನ ಪಡೆದರು. ಈ ಹಿಂದೆ 19ನೇ ರ‍್ಯಾಂಕ್ ನಲ್ಲಿದ್ದ ಕೊಹ್ಲಿ 17ನೇ ರ‍್ಯಾಂಕ್ ಗೆ ಏರಿದರು. ರೋಹಿತ್ ಶರ್ಮಾ ಎರಡು ಸ್ಥಾನ ಕಳೆದುಕೊಂಡು12ನೇ ರ‍್ಯಾಂಕ್ ಪಡೆದರೆ, ಶಿಖರ್ ಧವನ್ ಮೂರು ಸ್ಥಾನ ಕಳೆದುಕೊಂಡು 15ನೇ ಸ್ಥಾನಕ್ಕೆ ಜಾರಿದರು.
ಏರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆ.ಎಲ್.ರಾಹುಲ್ ಒಂದು ಸ್ಥಾನ ಮುನ್ನಡೆಯೊಂದಿಗೆ ಆರನೇ ಸ್ಥಾನಕ್ಕೆ ಭಡ್ತಿ ಪಡೆದರೆ, ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮಹೇಂದ್ರ ಸಿಂಗ್ ಧೋನಿ ಒಂಬತ್ತು ಸ್ಥಾನ ಭಡ್ತಿ ಪಡೆದು 56ನೇ ಸ್ಥಾನಕ್ಕೆ ಬಂದರು.
ಉಳಿದಂತೆ ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಕೇವಲ 62 ಎಸೆತಗಳಿಂದ 162 ರನ್ ಬಾರಿಸಿ ವಿಶ್ವ ಕ್ರಿಕೆಟ್ ನ ಗಮನಸೆಳೆದ ಅಫ್ಘಾನಿಸ್ತಾನ ಹಜರುತುಲ್ಲಾಹ್ ಜಜಾಯ್ ಭರ್ಜರಿ 32 ಸ್ಥಾನ ಭಡ್ತಿ ಪಡೆದು ಏಳನೇ ರ‍್ಯಾಂಕಿಂಗ್ ಪಡೆದರು. ಟಿ-ಟ್ವೆಂಟಿ ಬ್ಯಾಟಿಂಗ್ ರ‍್ಯಾಂಕಿಂಗ್ ನ ಮೊದಲೆರಡು ಸ್ಥಾನವನ್ನು ಪಾಕಿಸ್ಥಾನದ ಬಾಬರ್ ಅಜಮ್ ಮತ್ತು ಕಾಲಿನ್ ಮನ್ರೊ ಅಲಂಕರಿಸಿದರು.
ಭುವಿ, ಕುಲದೀಪ್, ಚಾಹಲ್ ಕುಸಿತ: ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್, ಚಾಹಲ್ ಮತ್ತು ಭುವನೇಶ್ವರ್ ಕುಮಾರ್ ಹಿನ್ನಡೆ ಅನುಭವಿಸಿದರು. ಮೂರನೇ ಸ್ಥಾನದಲ್ಲಿದ್ದ ಕುಲದೀಪ್ ನಾಲ್ಕಕ್ಕಿಳಿದರೆ ಯುಜುವೇಂದ್ರ ಚಾಹಲ್ ಎಂಟು ಸ್ಥಾನ ಹಿನ್ನಡೆ ಪಡೆದು 19ನೇ ಸ್ಥಾನಕ್ಕೆ ಇಳಿದರು. ವೇಗಿ ಭುವನೇಶ್ವರ್ ಕುಮಾರ್ ನಾಲ್ಕು ಸ್ಥಾನ ಕಳೆದುಕೊಂಡು 23 ನೇ ಸ್ಥಾನಕ್ಕೆ ಜಾರಿದರು. ಬೌಲಿಂಗ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ಪಾಕ್ ನ ಶಾದಾಬ್ ಖಾನ್ ಇದ್ದಾರೆ.
ತಂಡಗಳ ಪಟ್ಟಿಯಲ್ಲಿ 2-0 ಅಂತರದಿಂದ ಸರಣಿ ಸೋತ ಭಾರತ ಎರಡು ಅಂಕ ಕಳೆದುಕೊಂಡರೂ ಎರಡನೇ ಸ್ಥಾನದಲ್ಲಿದೆ. ಸರಣಿ ಜಯದಿಂದ ಎರಡು ಅಂಕ ಪಡೆದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಮೂರನೇ ಸ್ಥಾನ ತಲುಪಿತು. ಪಾಕಿಸ್ಥಾನ ಮೊದಲ ಸ್ಥಾನದಲ್ಲಿದೆ.