Advertisement

ಬಾಯಿ ಮುಚ್ಚಿಕೊಂಡಿರಿ…: ರೋಹಿಣಿ ಮತ್ತು ರೂಪಾಗೆ ಮುಖ್ಯ ಕಾರ್ಯದರ್ಶಿ ಖಡಕ್‌ ಸೂಚನೆ

12:50 AM Feb 21, 2023 | Team Udayavani |

ಬೆಂಗಳೂರು: “ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ, ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು…’
ಇದು ಬೀದಿ ರಂಪಾಟದಲ್ಲಿ ತೊಡಗಿರುವ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ರೂಪಾ ಅವರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನೀಡಿರುವ ಖಡಕ್‌ ಎಚ್ಚರಿಕೆ.

Advertisement

ರವಿವಾರ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಮತ್ತು ವೈಯಕ್ತಿಕ ವರ್ತನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆರೋಪಗಳ ಸುರಿಮಳೆ ಮಾಡುವುದರೊಂದಿಗೆ ಆರಂಭಗೊಂಡಿದ್ದ ಇವರಿಬ್ಬರ ಕಿತ್ತಾಟ ಸೋಮವಾರ ಶಕ್ತಿ ಕೇಂದ್ರವನ್ನು ತಲುಪಿತ್ತು. ಹಿರಿಯ ಅಧಿಕಾರಿಗಳ ನಡುವಿನ ಕಾಳಗ ಸರಕಾರಕ್ಕೆ ಭಾರೀ ಮುಜುಗರ ತಂದಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಸಿಎಸ್‌ ವಂದಿತಾ ಶರ್ಮಾ ಇಬ್ಬರು ಅಧಿಕಾರಿಗಳನ್ನು ಕರೆಸಿಕೊಂಡು ವಿವರಣೆ ಪಡೆದಿದ್ದಾರೆ.

ಮಾಧ್ಯಮಗಳಿಂದ ದೂರ ಇರುವಂತೆ ತಾಕೀತು ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾ ಬಳಕೆಗೂ ಕಡಿವಾಣ ಹಾಕಿದ್ದಾರೆ. ಆದರೂ ಆ ಬಳಿಕವೂ ಇಬ್ಬರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ತೆರಳಿದ್ದಾರೆ.

ಮೊದಲಿಗೆ ರೋಹಿಣಿ ಅವರು ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಿರ್ಗಮನ ಪೂರ್ವದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಈ ವಿಚಾರವನ್ನು ಇಲ್ಲಿಗೆ ಬಿಡಲು ಸಾಧ್ಯವಿಲ್ಲ, ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದರು. ಪತ್ರಕರ್ತರು ರೂಪಾ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ “ಆಕೆ ಬೇಗ ಚೇತರಿಸಿಕೊಳ್ಳಲಿ’ (ಗೆಟ್‌ ವೆಲ್‌ ಸೂನ್‌) ಎಂದಷ್ಟೇ ಹೇಳಿದರು.

Advertisement

ರೂಪಾ ಮೌದ್ಗಿಲ್‌ ಮಧ್ಯಾಹ್ನದ ಬಳಿಕ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾದರು. ಅದಕ್ಕೂ ಮುನ್ನ ಮಾಧ್ಯಮಗಳಿಗೆ, “ನಾನು ಈ ಬಗ್ಗೆ ಸರಕಾರದ ಗಮನಕ್ಕೆ ತಂದಿದ್ದೇನೆ. ಅವರಿಗೆ ಯಾರು ರಕ್ಷಣೆ ನೀಡುತ್ತಿದ್ದಾರೆ ಎಂಬುದು ಬಹಿರಂಗವಾಗಬೇಕು. ರೋಹಿಣಿ ವಿರುದ್ಧ ತನಿಖೆಯನ್ನು ಯಾವ ಶಕ್ತಿ ತಡೆಯುತ್ತಿದೆಯೋ ಗೊತ್ತಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಚಾರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ರೋಹಿಣಿ ಕಾಮೆಂಟ್‌; ರೂಪಾ ಕೆಂಡ
ರೋಹಿಣಿ ತಮಗೆ “ಗೆಟ್‌ ವೆಲ್‌ ಸೂನ್‌’ ಎಂದು ಹೇಳಿದ್ದಕ್ಕೆ ಫೇಸ್‌ಬುಕ್‌ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಐಪಿಎಸ್‌ ಅಧಿಕಾರಿ ರೂಪಾ, ಮೊಬೈಲ್‌ನಲ್ಲಿ ಡಿಲೀಟ್‌ ಆಗಿರುವ ಚಿತ್ರಗಳ ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಂಡು, “ಗೆಟ್‌ ವೆಲ್‌ ಸೂನ್‌ ಅಂತ ನನಗೆ ಹೇಳಿದ್ದೀರಲ್ಲ, ರೋಹಿಣಿ ಸಿಂಧೂರಿ ಅವರ ಡಿಲೀಟೆಡ್‌ ಚಿತ್ರಗಳ ಬಗ್ಗೆ ಮಾತನಾಡುತ್ತಾರೆ. ನಂಬರ್‌ ಅವರದೇ ಅಲ್ಲವಾ, ಐಎಎಸ್‌ ಅಧಿಕಾರಿ ನಗ್ನ ಚಿತ್ರ ಕಳುಹಿಸಬಹುದಾ ಎಂದು ಪ್ರಶ್ನಿಸಿದ್ದಾರೆ.

ಪೊಲೀಸರಿಗೆ ದೂರು
ತನ್ನ ವೈಯಕ್ತಿಕ ಫೋಟೋಗಳನ್ನು ವೈರಲ್‌ ಮಾಡಿರುವ ರೂಪಾ ವಿರುದ್ಧ ರೋಹಿಣಿ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ಸುಧೀರ್‌ ರೆಡ್ಡಿ ಮೂಲಕ ದೂರಿನ ಪ್ರತಿಯನ್ನು ಠಾಣೆಗೆ ನೀಡಿರುವ ಸಿಂಧೂರಿ, ತನ್ನ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ಕದ್ದು, ವೈರಲ್‌ ಮಾಡಿ ಮಹಿಳಾ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ರಜೆ ಮೇಲೆ ಕಳುಹಿಸಲು ಸಂಪುಟದಲ್ಲಿ ಚರ್ಚೆ
ರೋಹಿಣಿ, ರೂಪಾ ಹಾಗೂ ಮೌನೀಶ್‌ ಮೌದ್ಗೀಲ್‌ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಎಸ್‌.ಟಿ. ಸೋಮಶೇಖರ್‌ ಸಹಿತ ಹಿರಿಯ ಸಚಿವರು ಈ ಬಗ್ಗೆ ಪ್ರಸ್ತಾವಿಸಿದ್ದಾರೆ. ಕೆಲವು ಸಚಿವರು ಯಾವುದೇ ಹುದ್ದೆ ತೋರಿಸದೇ ಮೂವರನ್ನೂ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು ಎಂದು ತಿಳಿದು ಬಂದಿದೆ. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, “ಅಖೀಲ ಭಾರತ ಸೇವಾ ನಿಯಮದ ಪ್ರಕಾರ ನಡೆದುಕೊಳ್ಳಿ ಎಂದು ಇಬ್ಬರು ಅಧಿಕಾರಿ ಗಳಿಗೂ ಸೂಚನೆ ನೀಡಲಾಗಿದೆ. ಅವರು ಪಾಲಿಸುತ್ತಾರೆಂಬ ವಿಶ್ವಾಸವಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಸ್ಪಷ್ಟನೆ ನೀಡಿದರು.

ಸರಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ವರ್ತಿಸಿದ ಮಹಿಳಾ ಅಧಿಕಾರಿಗಳಿಬ್ಬರ ವಿರುದ್ಧ ಕಾನೂನು ಕ್ರಮದ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next