ಮೈಸೂರು: ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ವರ್ಗಾವಣೆಯಾಗಿ ಹೋದರೂ ಅವರ ವಿರುದ್ಧದ ಆರೋಪಗಳು ನಿಂತಿಲ್ಲ. ಮಾಜಿ ಸಚಿವ ಸಾ.ರಾ.ಮಹೇಶ್ ಅವರು ರಾಜಕಾಲುವೆ ಮೇಲೆ ಸಭಾಂಗಣ ನಿರ್ಮಿಸಿದ್ದಾರೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ ಬಳಿಕ, ಸಾ.ರಾ.ಮಹೇಶ್ ಆರೋಪಗಳನ್ನು ಅಲ್ಲಗಳೆದಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಸಾ.ರಾ.ಮಹೇಶ್, ನಮ್ಮ ಎಲ್ಲ ದಾಖಲೆಗಳು ಕ್ರಮಬದ್ಧವಾಗಿವೆ. ನಮ್ಮ ದಾಖಲೆಯಲ್ಲಿ ಯಾವುದೇ ಲೋಪವಿಲ್ಲ. ಸರಿಯಾಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ರೋಹಿಣಿ ಸಿಂಧೂರಿ ಮಾಡಿರುವ ಆರೋಪವನ್ನು ಅಲ್ಲಗೆಳೆದರು.
ಸರ್ಕಾರ ರೋಹಿಣಿ ಸಿಂಧೂರಿ ಅವರನ್ನೇ ತನಿಖೆಗೆ ನೇಮಕ ಮಾಡಲಿ. ತನಿಖೆಯಲ್ಲಿ ನಾನು ತಪ್ಪಿತಸ್ಥ, ರಾಜಕಾಲುವೆ ಮೇಲೆ ಸಭಾಂಗಣ ನಿರ್ಮಾಣ ಆಗಿದೆ ಎನ್ನುವುದು ಸಾಬೀತಾದರೆ ಸರ್ಕಾರಕ್ಕೆ ಸಭಾಂಗಣವನ್ನು ಬರೆದು ಕೊಡುತ್ತೇನೆ. ಒಂದು ವೇಳೆ ಸಭಾಂಗಣ ಕಾನೂನು ಬದ್ಧವಾಗಿದ್ದರೆ ರೋಹಿಣಿ ಸಿಂಧೂರಿ ವಾಪಸ್ ಆಂಧ್ರಪ್ರದೇಶಕ್ಕೆ ಹೊಗಿ, ಮಕ್ಕಳನ್ನು ಆಟವಾಡಿಸಿಕೊಂಡು ಇರುತ್ತಾರಾ ಎಂದು ಸವಾಲೆಸೆದರು.
ಇದನ್ನೂ ಓದಿ:ಬಿಎಸ್ ವೈ, ನಳಿನ್ ಗೆ ಅರುಣ್ ಅಭಯ: ಬದಲಾವಣೆ ಕುರಿತಂತೆ ಸ್ಪಷ್ಟನೆ,ಹೇಳಿಕೆ ನೀಡದಂತೆ ಎಚ್ಚರಿಕೆ
ಸಾ.ರಾ. ಮಹೇಶ್ ಧರಣಿ ಸ್ಥಳಕ್ಕೆ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆಗಮಿಸಿದರು.ಈ ವೇಳೆ ಕಾನೂನು ವಿರುದ್ದವಾಗಿ ಏನೇ ಮಾಡಿದ್ದರೂ ಕ್ರಮ ಕೈಗೊಳ್ಳಿ ಎಂದು ಸಾ.ರಾಮಹೇಶ್ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದರು.
ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ ದಾಖಲೆಯಲ್ಲಿ ಸತ್ಯವಿದೆಯೇ ಎಂದು ಪರಿಶೀಲಿಸುವೆ. ಈಗಾಗಲೇ ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಎಲ್ಲಾ ರೆವಿನ್ಯೂ ದಾಖಲೆಗಳನ್ನು ಪರಿಶೀಲಿಸಿ ಏನಾದರೂ ರಾಜಕಾಲುವೆ ಒತ್ತವರಿಯಾಗಿದೆಯೇ ಎಂದು ವರದಿ ನೀಡಲು ಸೂಚಿಸಲಾಗಿದೆ. ನಾನೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಇನ್ನು ಮೂರು ದಿನದಲ್ಲಿ ಸಮಿತಿಯಿಂದ ವರದಿ ಪಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಅಯುಕ್ತ ಜಿ.ಸಿ. ಪ್ರಕಾಶ್ ಹೇಳಿಕೆದರು.