Advertisement

ಖನಿಜ ಬಳಕೆಗೆ ರಾಜಧನ ಕಡಿತ ಕಡ್ಡಾಯ

07:50 AM Jan 26, 2019 | Team Udayavani |

ಹಾಸನ: ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಮರಳು ಮತ್ತು ಉಪ ಖನಿಜಗಳಿಗೆ ನಿಯಮಾನುಸಾರ ರಾಜಧನ ಮತ್ತು ಜಿಲ್ಲಾ ಖನಿಜ ನಿಧಿ ತೆರಿಗೆ ಕಡ್ಡಾಯವಾಗಿ ಕಡಿತಗೊಳಿಸಿ ಪಾವತಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ಇತರೆ ಸರ್ಕಾರಿ ಕಾಮಗಾರಿಗೆ ಅನುಗುಣವಾಗಿ ರಾಜಧನ, ಡಿಎಂಎಫ್ ಹಾಗೂ ಇತರೆ ತೆರಿಗೆಗಳನ್ನು ಕಟಾಯಿಸುತ್ತಿರುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ ಅವರು, ಸರ್ಕಾರಿ ಕಾಮಗಾರಿಗಳಲ್ಲಿ ಹೆಚ್ಚಾಗಿ ಎಂ ಸ್ಯಾಂಡ್‌ ಬಳಕೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಕಡ್ಡಾಯ ಕ್ರಮ: ಲೋಕೋಪಯೋಗಿ ಇಲಾಖೆ, ಜಿಪಂ ಎಂಜಿನಿಯರಿಂಗ್‌ ವಿಭಾಗ, ರಾಷ್ಟ್ರೀಯ ಹೆದ್ದಾರಿ, ಎತ್ತಿನ ಹೊಳೆ ಯೋಜನೆ ಸೇರಿದಂತೆ ಸರ್ಕಾರಿ ಕಾಮಗಾರಿಗೆ ಬಳಸಲಾಗುತ್ತಿರುವ ಮರಳು ಮತ್ತು ಇತರ ಖನಿಜಗಳಿಗೆ ನಿಖರವಾಗಿ ರಾಜಧನ ಕಡಿತಗೊಳಿಸದೇ ಇರುವುದು ಮತ್ತು ಜಿಲ್ಲಾ ಖನಿಜ ನಿಧಿಗೆ ಹಣ ಪಾವತಿ ಮಾಡದೆ ಇರುವುದನ್ನು ಗಮನಿಸಲಾಗಿದೆ. ಎಲ್ಲಾ ಇಲಾಖೆಗಳು ಈ ಬಗ್ಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಿಂಧೂರಿ ನಿರ್ದೇಶನ ನೀಡಿದರು.

ರಾಜಧನ ಸಂದಾಯ: ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ಮರಳು ಬಳಸಿ ರಾಜಧನವನ್ನು ಚಿತ್ರದುರ್ಗ ಕಚೇರಿಯಲ್ಲಿ ಕಡಿತ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಆಯಾಯಾ ಜಿಲ್ಲೆಗೆ ಅದು ಸಂದಾಯವಾಗಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಲೋಪ ಸರಿಪಡಿಸಿ: ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳೀಯ ಆಡಳಿತದ ಗಮನಕ್ಕೆ ತಾರದೆ, ಸಾಮಗ್ರಿಗಳನ್ನು ಸಂಗ್ರಹಿಸದೆ ನಗರದ ಮಧ್ಯಭಾಗದಲ್ಲಿ ಅಗೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದು ಸಮರ್ಪಕವಲ್ಲ. ಕೂಡಲೇ ಲೋಪ ಸರಿಪಡಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Advertisement

ರಾಜಧನ ಸಂದಾಯ ಮಾಡಿ: ಸಭೆಯಲ್ಲಿ 2016-17 ರಿಂದ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಸರ್ಕಾರಿ ಕಾಮಗಾರಿಗಳಿಗೆ ಉಪಯೋಗಿಸುತ್ತಿರುವ, ನಿರ್ವಹಿಸುತ್ತಿರುವ ಹಾಗೂ ಪ್ರಾರಂಭವಾಗಬೇಕಿರುವ ಸರ್ಕಾರಿ ಕಾಮಗಾರಿಗಳಿಗೆ ಅವಶ್ಯವಿರುವ ಉಪಖನಿಜಗಳ ಕುರಿತು ಚರ್ಚೆ ನಡೆಯಿತು. ಉಪಖನಿಜ ಸಾಗಾಣಿಕಾ ಪರವಾನಗಿಯನ್ನು ಪಡೆಯದೆ ಸರ್ಕಾರಿ ಕಾಮಗಾರಿಗಳಲ್ಲಿ ಒಳಸುವ ಉಪಖನಿಜಗಳ ಗಾತ್ರಕ್ಕೆ ಕರ್ನಾಟಕ ಉಪಖನಿಜ ರಿಯಾಯ್ತಿ ನಿಯಮಾವಳಿ-1994ರ ತಿದ್ದುಪಡಿ ಅಧಿನಿಯಮ 2017ರ ನಿಯಮ 44(4)ರಂತೆ ರಾಜಧನದ ಐದುಪಟ್ಟು ದಂಡದ ಮೊತ್ತವನ್ನು ಕಟಾಯಿಸಿ ಸರ್ಕಾರಕ್ಕೆ ಸಂದಾಯ ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕೆಎಂಎಂಸಿಆರ್‌ 1994ರ ತಿದ್ದುಪಡಿ ಆಧಿನಿಯಮ 2016 ನಿಯಮ 36ರಲ್ಲಿ ಕಡ್ಡಾಯವಾಗಿ ಉಪಖನಿಜ ಅಂದರೆ ಮಣ್ಣು, ಜೆಲ್ಲಿ, ಕಟ್ಟಡಕಲ್ಲು, ಮರಳಿಗೆ ಕಡ್ಡಾಯವಾಗಿ ಉಪಖನಿಜ ಸಾಗಾಣಿಕಾ ಪರವಾನಗಿಯನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು. ಲೋಕೋಪಯೋಗಿ, ಜಿಪಂ ಎಂಜಿನಿಯರಿಂಗ್‌ ವಿಭಾಗ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಗಣಿ ಮತ್ತು ಭೂಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next