ಕಲಬುರಗಿ: ಮುಂಗಾರು ಮೃಗಶಿರ ಮಂಗಳವಾರ ಆರಂಭವಾಗಿದ್ದು, ಕೃಷಿ ಕಾರ್ಯ ಚಟುವಟಿಕೆಗೆಳಿಗೆ ಹಸಿರು ನಿಶಾನೆ ತೋರಿಸಿದಂತಾಗಿದೆ. ರೋಹಿಣಿ ಕೊನೆ ಚರಣದಲ್ಲಿ ಮಳೆ ಸುರಿದಿದ್ದೇ ಇದಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ಮುಂಗಾರು ಆರಂಭವಾದ ಮೇಲೆ ಮಳೆ ಸುರಿಯುತ್ತಿತ್ತು. ಆದರೆ ಈ ಸಲ ರೋಹಿಣಿ ಮಳೆ ಬಿತ್ತನೆಗೆ ಯೋಗ್ಯ ಮಳೆ ಸುರಿದಿದ್ದರಿಂದ ಬಿತ್ತನೆ ಕಾರ್ಯ ಶುರುವಾಗಿದೆ. ಮುಂಗಾರು ಆರಂಭ ಮುಂಚೆಯೇ ಬಿತ್ತನೆ ಶುರುವಾಗಿದ್ದು ಇದೇ ವರ್ಷ ಎನ್ನಬಹುದಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತವಾಗಿ 7.50 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 5.30 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆ ಗುರಿಯಿದೆ. ಅದೇ ರೀತಿ 40 ಸಾವಿರ ಹೆಕ್ಟೇರ್ ಹೆಸರು, 25 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹಾಗೂ 60 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ.
ಬೀಜ ಲಭ್ಯ-ಗೊಬ್ಬರ ಅಭಾವ: ಮುಂಗಾರು ಬಿತ್ತನೆಗೆ ಬೀಜಗಳು ಲಭ್ಯವಿದ್ದು, ಅಷ್ಟೇನು ಕೊರತೆ ಕಾಣುತ್ತಿಲ್ಲ. ತೊಗರಿ ಬೀಜ ವಂತೂ ರೈತರು ಖರೀದಿ ಮಾಡುವುದೇ ಅಪರೂಪ. ಏಕೆಂದರೆ ರಾಶಿ ಮಾಡಲಾಗಿದ್ದ ತೊಗರಿಯಲ್ಲೇ ಉತ್ತಮವಾಗಿದ್ದನ್ನು ತೆಗೆದಿರಿಸಿ ಅದನ್ನೇ ಬಿತ್ತನೆ ಮಾಡಲಾಗುತ್ತಿದೆ. ಆರ್‌ಎಸ್‌ಕೆ ಬೀಜವನ್ನು ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೆಚ್ಚಿಕೊಂಡಿಲ್ಲ. ಉಳಿದಂತೆ ಗೊಬ್ಬರ ಯೋಗ್ಯವಿದ್ದಂತೆ ಇದೆಯಾದರೂ ಮಾರುಕಟ್ಟೆಯಲ್ಲಿ ಭರಪೂರವಾಗಿ ಕಾಣುತ್ತಿಲ್ಲ.
ಎರಡು ದಿನ ಇಲ್ಲವೇ ನಾಲ್ಕು ದಿನಕ್ಕೊಮ್ಮೆ ಎರಡು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬರುತ್ತಿದೆ. ಇಲ್ಲಿಯವರೆಗೆ 13 ಸಾವಿರ ಮೆಟ್ರಿಕ್ ಟನ್ ಗೊಬ್ಬರ ವಿತರಣೆಯಾಗಿದೆ. ಪಿಡಿ ಖಾತೆಯಲ್ಲಿ 80 ಕೋಟಿ ರೂ.: ಮುಂಗಾರು ಹಂಗಾಮಿನಲ್ಲಿ ಜೋರಾದ ಮಳೆಯಾಗಿ ಅತಿವೃಷ್ಟಿಯಾದಲ್ಲಿ ಅದನ್ನು ಎದುರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
ಸೋಮವಾರ ಕಂದಾಯ ಇಲಾಖೆ ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಮುಂಗಾರು ಹವಾಮಾನ, ಕೃಷಿ ಚಟುವಟಿಕೆಗಳ ಕುರಿತಾಗಿ ಸಮಗ್ರವಾದ ಸಭೆಯೊಂದನ್ನು ನಡೆಸಿ ಅಗತ್ಯ ಸಿದ್ದತೆಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 80 ಕೋಟಿ ರೂ. ಇದೆ. ಜಿಲ್ಲಾ ವಿಪತ್ತು ಪ್ರಾಧಿಕಾರ ರಚನೆಗೆಯಾಗಿದೆ. ಕಳೆದ ವರ್ಷ ಮುಂಗಾರು ಪ್ರಾರಂಭ ದಲ್ಲೇ ಮಳೆಯಾಗಿದ್ದರಿಂದ ರೈತರು ಸರಾಸರಿ ಗಿಂತ 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಹೆಚ್ಚಳವಾಗಿತ್ತು. ಈ ಸಲವೂ ಹೆಚ್ಚಳ ವಾಗಲಿದೆ. ಉತ್ತಮ ಮಳೆಯಾಗಿ ರೈತ ವರ್ಗ ಬಿತ್ತನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಗ್ರಾಮೀಣ ಭಾಗದಲ್ಲಿ ಕೊರೊನಾ ಹಾವಳಿ ಕಡಿಮೆ ಆಗುವುದೆಂದು ನಿರೀಕ್ಷಿಸಲಾಗಿದೆ.