Advertisement

ರೊಹಿಂಗ್ಯಾ ಸಮಸ್ಯೆಗಿದೆ ಹಲವು ಆಯಾಮ

10:56 AM Sep 16, 2017 | |

ಸೂಕಿಯವರನ್ನು ದೂಷಿಸುತ್ತಾ ಅಂತಾರಾಷ್ಟ್ರೀಯ ಸಮುದಾಯ ಒಂದು ಸಂಗತಿಯನ್ನು ಕಡೆಗಣಿಸುತ್ತಿದೆ. ಮ್ಯಾನ್ಮಾರ್‌ನ ರಾಜಕೀಯ ವ್ಯವಸ್ಥೆ ಇಂದಿಗೂ ಬಹುಪಾಲು ಅಲ್ಲಿನ ಮಿಲಿಟರಿ ಹಿಡಿತದಲ್ಲಿಯೇ ಇದೆ. ಆ ದೇಶದ ಪ್ರಮುಖ ಮೂರು ಸಚಿವಾಲಯಗಳಾದ ಗೃಹ, ರಕ್ಷಣೆ ಮತ್ತು ಗಡಿ ವ್ಯವಹಾರವಿರುವುದು ಮಿಲಿಟರಿಯ ಕೈಯಲ್ಲಿಯೇ!

Advertisement

ಕಳೆದ ಶುಕ್ರವಾರದೊಳಗೆ ಸುಮಾರು 2 ಲಕ್ಷ 70 ಸಾವಿರ ರೊಹಿಂಗ್ಯಾಗಳು ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಮ್ಯಾನ್ಮಾರ್‌ನ ಗಡಿ ದಾಟಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆ. ಅರಾಕನ್‌ ರೋಹಿಂಗ್ಯಾ ಸಾಲ್ವೇಷನ್‌ ಆರ್ಮಿ(ಎಆರ್‌ಎಸ್‌ಎ) ಎಂಬ ಬಂಡುಕೋರ ಗುಂಪು ಕೆಲವು ಪೊಲೀಸ್‌ ಪೋಸ್ಟ್‌ಗಳ ಮೇಲೆ ದಾಳಿ ಮಾಡಿದ ನಂತರದಿಂದ ಆ ದೇಶದ ಭದ್ರತಾ ಪಡೆ ಮ್ಯಾನ್ಮಾರ್‌ನ ರಖೈನ್‌ ರಾಜ್ಯದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿವೆ. 

ಆದಾಗ್ಯೂ ಎಷ್ಟು ಸಂಖ್ಯೆಯಲ್ಲಿ ರೊಹಿಂಗ್ಯಾಗಳು ದೇಶ ತೊರೆದಿದ್ದಾರೆ ಎನ್ನುವ ಅಧಿಕೃತ ಅಂಕಿಸಂಖ್ಯೆಯನ್ನು ಮ್ಯಾನ್ಮಾರ್‌ ಸರ್ಕಾರ ಬಿಡುಗಡೆಗೊಳಿಸಿಲ್ಲವಾದರೂ ವಿಶ್ವಸಂಸ್ಥೆಯ ವರದಿಯ ಆಧಾರದಲ್ಲಿ ಹೇಳುವುದಾದರೆ ಈಗಾಗಲೇ ಮ್ಯಾನ್ಮಾರ್‌ನ ರೊಹಿಂಗ್ಯಾ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಜನ ದೇಶ ತೊರೆದಿದ್ದಾರೆ ಎಂದಾಯಿತು.  ಇನ್ನು ಆ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರವು ಕೇವಲ ರೊಹಿಂಗ್ಯಾಗಳನ್ನಷ್ಟೇ ಅಲ್ಲ ಸಾವಿರಾರು ರಖೈನ್‌ ಬೌದ್ಧರು ಮತ್ತು ಹಿಂದೂಗಳು ತಮ್ಮ ಮನೆಮಠ ತೊರೆಯುವಂತೆ ಮಾಡಿದೆ. 

ಆರಂಭದಿಂದಲೂ ಹಿಂಸಾಚಾರದ ತೀವ್ರತೆ ಮತ್ತು ಅಮಾಯಕ ನಾಗರಿಕರ ಪರದಾಟಗಳು ಅಂತಾರಾಷ್ಟ್ರೀಯ ಸುದ್ದಿಯಾಗಿ ಸದ್ದು ಮಾಡಿವೆ. ಮುಖಪುಟಗಳಲ್ಲಿ ಕಾಣಿಸಿಕೊಂಡಿವೆ. ಆದರೆ ಅದೃಷ್ಟವಶಾತ್‌(ಅಥವಾ ದುರದೃಷ್ಟವಶಾತ್‌) ಹೆಚ್ಚು ಒತ್ತು ಸಿಗುತ್ತಿರುವುದು ರೊಹಿಂಗ್ಯಾಗಳು ಎದುರಿಸುತ್ತಿರುವ ಕಷ್ಟಕ್ಕೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಈಗಾಗಲೇ ನೋಬೆಲ್‌ ಪುರಸ್ಕೃತ ಡೆಸ್ಮಂಡ್‌ ಟುಟು, ಮಲಾಲಾ ಯೂಸೂಫ್ಝಾಯ್‌ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳ ನಾಯಕರು ಮತ್ತು ರಾಜಕಾರಣಿಗಳು ಮಾತನಾಡಿದ್ದಾರೆ. 

ರೊಹಿಂಗ್ಯಾಗಳ ಸಮಸ್ಯೆಗೆ ಎರಡು ಮುಖ್ಯ ಆಯಾಮಗಳಿವೆ: ಒಂದು ಅಂತಾರಾಷ್ಟ್ರೀಯ ಸಮುದಾಯದ ಆಯಾಮ ಇನ್ನೊಂದು ಮ್ಯಾನ್ಮಾರ್‌ ಸರ್ಕಾರದ ಆಯಾಮ. ರೊಹಿಂಗ್ಯಾ ಸಮಸ್ಯೆಯ ಮೂಲವಿರುವುದು ಆ ಜನರ ಅಸ್ಮಿತೆಯಲ್ಲಿ. ಆದಾಗ್ಯೂ ಇವರೆಲ್ಲ ತಮ್ಮನ್ನು ರೊಂಹಿಂಗ್ಯಾಗಳೆಂದು ಕರೆದುಕೊಳ್ಳುತ್ತಾರಾದರೂ ಮ್ಯಾನ್ಮಾರ್‌ ಸರ್ಕಾರ ಮತ್ತು ಅಲ್ಲಿನ ಬಹುಪಾಲು ಜನರು(ರಖೈನ್‌ ಬೌದ್ಧರನ್ನೊಳಗೊಂಡು)  ಈ ವಾದವನ್ನು ಒಪ್ಪುವುದಿಲ್ಲ. ಬದಲಾಗಿ ಇವರನ್ನೆಲ್ಲ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಎಂದೇ ಕರೆಯಲಾಗುತ್ತದೆ.    

Advertisement

ಆದರೆ ಇವರನ್ನು ತಮ್ಮ ದೇಶದವರು ಎಂದು ಒಪ್ಪಿಕೊಳ್ಳಲು ಬಾಂಗ್ಲಾದೇಶವೂ ತಯಾರಿಲ್ಲ. ಬದಲಾಗಿ “ಇವರೆಲ್ಲ ರೊಹಿಂಗ್ಯಾ ಮುಸಲ್ಮಾನರು’ ಎನ್ನುವುದು ಬಾಂಗ್ಲಾದೇಶದ ವಾದ. ಬಹಳಷ್ಟು ಸಂದರ್ಭಗಳಲ್ಲಿ ತಮ್ಮ ತೀರಕ್ಕೆ ಬಂದಿಳಿದ ರೊಹಿಂಗ್ಯಾಗಳನ್ನು ಬಾಂಗ್ಲಾದೇಶಿ ಭದ್ರತಾ ಪಡೆಗಳು ವಾಪಾಸ್‌ ಮ್ಯಾನ್ಮಾರ್‌ಗೆ ಅಟ್ಟಿವೆ. ಬಾಂಗ್ಲಾದೇಶಿ ಸರ್ಕಾರ ಈಗ ತಾತ್ಕಾಲಿಕವಾಗಿ ಈ ನಿರಾಶ್ರಿತರನ್ನೆಲ್ಲ ಒಂದು ದ್ವೀಪದಲ್ಲಿ ಉಳಿಸುವ ಯೋಚನೆ ಮಾಡುತ್ತಿದೆ. ಈ ಯೋಚನೆಗೆ ವಿರೋಧವೂ ವ್ಯಕ್ತವಾಗುತ್ತಿದೆ. 

ಇನ್ನು, ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾದ ಇಂಡೋನೇಷ್ಯಾ ಮತ್ತು ಮಲೇಷ್ಯಾವನ್ನೇ ನೋಡಿ. ಮೊದಲಿನಿಂದಲೂ ಮ್ಯಾನ್ಮಾರ್‌ ಸರ್ಕಾರವನ್ನು ಇವೆರಡೂ ರಾಷ್ಟ್ರಗಳು ದೊಡ್ಡ ಧ್ವನಿಯಲ್ಲಿ ದೂಷಿಸುತ್ತಾ ಬಂದಿವೆಯಾದರೂ, ರೊಹಿಂಗ್ಯಾ ನಿರಾಶ್ರಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಬಿಟ್ಟುಕೊಳ್ಳಲು ಇವು ತಯ್ನಾರಿಲ್ಲ.  

ಇನ್ನು ಭಾರತದ ವಿಷಯಕ್ಕೆ ಬಂದರೆ, ಇದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ. ಹೀಗಾಗಿ ಭಾರತ ನಿರಾಶ್ರಿತರ ಬೆಂಬಲಕ್ಕೆ ಬರಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ ಇದು ಸಾಧ್ಯವಾಗಲಿಕ್ಕಿಲ್ಲ. ಈ ಅಕ್ರಮ ವಿದೇಶಿಯರನ್ನು ಗಡಿಪಾರು ಮಾಡುವ ಕುರಿತು ಈಗಾಗಲೇ ಭಾರತ ಸರ್ಕಾರ ಯೋಚಿಸುತ್ತಿದೆ.  ಒಟ್ಟಲ್ಲಿ ಭಾರತ ರೊಹಿಂಗ್ಯಾಗಳ ವಿಷಯದಲ್ಲಿ ದೃಢ ನಿಲುವು ತಾಳಲು ಮಾತ್ರ ವಿಫ‌ಲವಾಗುತ್ತಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಭಾರತ ಮ್ಯಾನ್ಮಾರ್‌ನೊಂದಿಗಿನ ಸಂಬಂಧವನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿದೆಯೇ ಹೊರತು ಹದಗೆಡಿಸಿಕೊಳ್ಳಲು ಸಿದ್ಧವಿಲ್ಲ. ಇದೇ ಸೆಪ್ಟೆಂಬರ್‌ 5-7ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಮ್ಯಾನ್ಮಾರ್‌ ಪ್ರವಾಸ ಕೈಗೊಂಡಿದ್ದು ಎರಡು ದೇಶಗಳ ನಡುವಿನ ಸಂಬಂಧ ವೃದ್ಧಿಯ ಪ್ರಯತ್ನವಾಗಿತ್ತು.  ಇದಷ್ಟೇ ಅಲ್ಲದೆ, ಇಸ್ಲಾಮಿಕ್‌ ಉಗ್ರವಾದಿಗಳು ಕಟ್ಟರ್‌ ರೊಹಿಂಗ್ಯಾಗಳ ಮೂಲಕ ತಮ್ಮ ಜಾಲ ವಿಸ್ತರಿಸಬಹುದು ಎನ್ನುವ ಕಳವಳವೂ ಭಾರತಕ್ಕಿದೆ.  

ಇದೇನೇ ಇದ್ದರೂ ಅಂತಾರಾಷ್ಟ್ರೀಯ ಸಮುದಾಯ ಮ್ಯಾನ್ಮಾರ್‌ ಸರ್ಕಾರವನ್ನು ಟೀಕಿಸುತ್ತಿದೆಯಾದರೂ, ಮುಖ್ಯವಾಗಿ ಅದು ಬೆರಳು ಮಾಡಿ ತೋರಿಸುತ್ತಿರುವುದು ನ್ಯಾಷನಲ್‌ ಲೀಗ್‌ ಆಫ್ ಡೆಮಾಕ್ರಸಿಯ ನಾಯಕಿ ಮತ್ತು ನೊಬೆಲ್‌ ಶಾಂತಿ ಪುರಸ್ಕೃತ ಆಂಗ್‌ ಸಾನ್‌ ಸೂಕಿಯವರತ್ತ. ಸೂಕಿ ಅವರ ನೊಬೆಲ್‌ ಪುರಸ್ಕಾರವನ್ನು ಹಿಂಪಡೆಯಬೇಕು ಎಂದು ಆನ್‌ಲೈನ್‌ ಪಿಟೀಷನ್‌ಗಳು ಕೂಡ ಆರಂಭವಾಗಿವೆ! ಮ್ಯಾನ್ಮಾರ್‌ನಲ್ಲಿ ದಶಕಗಳ ಮಿಲಿಟರಿ ಆಡಳಿತ ಕೊನೆಗೊಂಡ ಮೇಲೆ ಅಧಿಕಾರಕ್ಕೆ ಬಂದ ಎನ್‌ಎಲ್‌ಡಿ ಪಕ್ಷ ಮತ್ತು ಆಂಗ್‌ ಸಾನ್‌ ಸೂಕಿ ಅವರ ಮೇಲೆ ವಿಪರೀತ ಎನಿಸುವಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಆದರೆ ಈಗ ಸೂಕಿ ರೊಹಿಂಗ್ಯಾಗಳ ಅವಸ್ಥೆಯ ಬಗ್ಗೆ ಕನಿಷ್ಠಪಕ್ಷ ಮಾತನಾಡಲೂ ತಯಾರಿಲ್ಲ ಎನ್ನುವ ಟೀಕೆ ಎದುರಿಸಬೇಕಾಗಿದೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ರೊಹಿಂಗ್ಯಾಗಳ ಸಮಸ್ಯೆಯನ್ನು(ಗುರುತು ಮತ್ತು ಪೌರತ್ವ) ಪರಿಹರಿಸಲು ಗಮನಾರ್ಹ ಪ್ರಯತ್ನ ಮಾಡಿಲ್ಲ ಎನ್ನುವುದೂ ಸೂಕಿ ಮೇಲಿರುವ ಇನ್ನೊಂದು ಆರೋಪ.  ಆದರೆ ಅಂತಾರಾಷ್ಟ್ರೀಯ ಸಮುದಾಯ ಒಂದು ಸಂಗತಿಯನ್ನು ಕಡೆಗಣಿಸುತ್ತಿದೆ ಅಥವಾ ಅದಕ್ಕೆ ಮಹತ್ವವನ್ನೇ ಕೊಡುತ್ತಿಲ್ಲ. ಮ್ಯಾನ್ಮಾರ್‌ನ ರಾಜಕೀಯ ವ್ಯವಸ್ಥೆ ಇಂದಿಗೂ ಬಹುಪಾಲು ಅಲ್ಲಿನ ಮಿಲಿಟರಿ ಹಿಡಿತದಲ್ಲಿಯೇ ಇದೆ. ಮೊದಲನೆಯದಾಗಿ ಸೂಕಿ ಅವರಿಗೆ ಅಧ್ಯಕ್ಷೀಯ ಕಚೇರಿಯ ನಿರ್ವಹಣೆಯ ಜವಾ ಬ್ದಾರಿ ಸಿಗುತ್ತಿಲ್ಲ.  ಎರಡನೆಯದಾಗಿ, ಅವರ ಎನ್‌ಎಲ್‌ಡಿ ಸರ್ಕಾರ ಬಲಿಷ್ಠ ಮಿಲಿಟರಿಯೊಂದಿಗೆ ಹಲವು ಒಪ್ಪಂದಗಳನ್ನು ಮಾಡಿ ಕೊಂಡು ಅಧಿಕಾರಕ್ಕೆ ಬಂದಿದೆ. ಅದರನ್ವಯ ಇಂದಿಗೂ ಮ್ಯಾನ್ಮಾರ್‌ನ ಪ್ರಮುಖ ಮೂರು ಸಚಿವಾಲಯಗಳಾದ ಗೃಹ, ರಕ್ಷಣೆ ಮತ್ತು ಗಡಿ ವ್ಯವಹಾರವಿರುವುದು ಮಿಲಿಟರಿಯ ಹಿಡಿತದಲ್ಲಿಯೇ! 

ಈ ಅಧಿಕಾರ ಹಂಚಿಕೆ ಒಪ್ಪಂದ ಹೇಗಿದೆಯೆಂದರೆ ಅಲ್ಲಿನ ಮಿಲಿಟರಿಯು, ನಾಗರಿಕ ಸರ್ಕಾರದ ಅನುಮತಿಯಿಲ್ಲದೆಯೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಲ್ಲದು. ಸತ್ಯವೇನೆಂದರೆ ಸರ್ಕಾರವನ್ನು ಉರುಳಿಸಿ ಮತ್ತೆ ಮಿಲಿಟರಿಯೇ ಆಡಳಿತ ನಡೆಸುವ ಸಾಧ್ಯತೆಯನ್ನೂ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಮಿಲಿಟರಿ ಮತ್ತು ಬೌದ್ಧ ರಾಷ್ಟ್ರೀಯವಾದಿ ಗುಂಪುಗಳು ಎಷ್ಟೇ ವಿರೋಧ ವ್ಯಕ್ತಪಡಿಸಲಿ, ಸೂಕಿ ಅವರು ರೊಹಿಂಗ್ಯಾಗಳ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದೇ ಬಹುತೇಕರು ಭಾವಿಸಿದ್ದಾರೆ.  ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲರೂ ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಲು ವಿಫ‌ಲರಾಗುತ್ತಿದ್ದಾರೆ. ಸೂಕಿ ಮೊದಲಿನಂತೆ ಈಗ ಹೋರಾಟಗಾರ್ತಿಯಾಗಿ, ಮಾನವ ಹಕ್ಕು ಕಾರ್ಯಕರ್ತೆಯಾಗಿ ಉಳಿದಿಲ್ಲ. ಎಲ್ಲಾ ರಾಜಕಾರಣಿಗಳಂತೆಯೇ ಅವರೂ ಕೂಡ ಈಗ ಅಧಿಕಾರದಲ್ಲಿರಲು ಬಯಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಬಹುಸಂಖ್ಯಾತ ಮತದಾರರ ಭಾವನೆಗಳನ್ನು ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ 2015ರ ಸಾರ್ವತ್ರಿಕ ಚುನಾವಣೆ. ಆ ಚುನಾವಣೆಯಲ್ಲಿ ಸೂಕಿ ಅವರ ಪಕ್ಷ ಒಬ್ಬೇ ಒಬ್ಬ ಮುಸಲ್ಮಾನ ಅಭ್ಯರ್ಥಿಯನ್ನೂ ಕಣಕ್ಕಿಳಿಸಿರಲಿಲ್ಲ.

ವಿಶ್ವಸಂಸ್ಥೆಯನ್ನೊಳಗೊಂಡಂತೆ, ಅಂತಾರಾಷ್ಟ್ರೀಯ ಸಮು ದಾಯ ಮತ್ತು ಬಲಿಷ್ಠ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಕೋಪವನ್ನು ಸೂಕಿ ಮತ್ತು ಎನ್‌ಎಲ್‌ಡಿ ಸರ್ಕಾರದ ವಿರುದ್ಧ ತಿರುಗಿಸುವ ಬದಲು, ಅದನ್ನು ಮ್ಯಾನ್ಮಾರ್‌ನ ಮಿಲಿಟರಿ ನಾಯಕತ್ವದ ಮೇಲೆ(ಮುಖ್ಯವಾಗಿ ಕಮಾಂಡರ್‌ ಇನ್‌ ಚೀಫ್ ಮಿನ್‌ ಆಂಗ್‌ ಹ್ಲಾಗ್‌ ಮೇಲೆ) ಹರಿಸಬೇಕು. ರೊಹಿಂಗ್ಯಾ ಸಮಸ್ಯೆಯನ್ನು ಬಗೆಹರಿಸಿ, ಶಾಂತಿಯುತ ಮಾರ್ಗದತ್ತ ನಡೆಯಿರಿ ಎಂದು ಅವರ ಮೇಲೆ ಒತ್ತಡ ತರುವ ಕೆಲಸ ಯಾರೂ ಮಾಡುತ್ತಲೇ ಇಲ್ಲ.  

ಶಾಂತಿ ಸ್ಥಾಪನೆಯಾಗಬೇಕು ಎಂದರೆ, ಅತ್ತ ರೊಹಿಂಗ್ಯಾ ಸಾಲ್ವೇಷನ್‌ ಆರ್ಮಿಯೂ ಭದ್ರತಾ ಪಡೆಗಳ ಮೇಲೆ ಸಶಸ್ತ್ರ ದಾಳಿ ಮಾಡುವುದನ್ನು ನಿಲ್ಲಿಸಬೇಕು. ಇದೆಲ್ಲದರ ನಡುವೆ ರೊಹಿಂಗ್ಯಾ ಮುಸಲ್ಮಾನರು ಮತ್ತು ರಖೈನ್‌ ಬೌದ್ಧ ಸಮುದಾಯದ ನಾಯಕರು ಪರಸ್ಪರ ನಂಬಿಕೆ ಬೆಳೆಯುವಂಥ ಮತ್ತು ಶಾಂತಿಯುತ ಸಹಬಾಳ್ವೆ ನಡೆಸಲು ಅನುವಾಗುವಂಥ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕಾಗಿದೆ. 

(ಜಪಾನ್‌ ಟೈಮ್ಸ್‌ನಲ್ಲಿ ಪ್ರಕಟಿತ ಲೇಖನ)
ಡಾ. ನೆಹ್ಗಿನ್‌ಪಾವೋ ಕಿಪೆನ್‌

Advertisement

Udayavani is now on Telegram. Click here to join our channel and stay updated with the latest news.

Next