ಲಂಡನ್: ದಾಖಲೆ ಎಂಟನೇ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಸ್ವಿಸ್‌ನ ಸೂಪರ್ ತಾರೆ ರೋಜರ್ ಫೆಡರರ್ ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಬ್ರಿಟನ್‌ನ ಆ್ಯಂಡಿ ಮರ್ರೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದು ಅವರ ಟೆನಿಸ್ ಬಾಳ್ವೆಯ 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ.
ಇದೇ ವೇಳೆ ಯಾವುದೇ ಗ್ರ್ಯಾನ್ ಸ್ಲಾಮ್ ಕೂಟದ ಪ್ರಶಸ್ತಿ ಜಯಿಸದ ಕರೊಲಿನಾ ಪ್ಲಿಸ್ಕೋವಾ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ನೂತನ ವಿಶ್ವದ ನಂಬರ್ ವನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಎರಡನೇ ರ್‍ಯಾಂಕಿನ ಸಿಮೋನಾ ಹಾಲೆಪ್ ವಿಂಬಲ್ಡನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಕಾರಣ ಜೆಕ್ ಗಣರಾಜ್ಯದ 25ರ ಹರೆಯದ ಪ್ಲಿಸ್ಕೋವಾ ಮೂರನೇ ಸ್ಥಾನದಿಂದ ಅಗ್ರಸ್ಥಾನಕ್ಕೇರಿದರು. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಆ್ಯಂಜೆಲಿಕ್ ಕೆರ್ಬರ್ ಮೂರನೇ ಸ್ಥಾನಕ್ಕೆ ಜಾರಿದರು. ತನ್ನ ಎರಡನೇ ವಿಂಬಲ್ಡನ್ ಫೈನಲ್‌ನಲ್ಲಿ ಪ್ರಶಸ್ತಿ ಎತ್ತಿದ ಸ್ಪೇನ್‌ನ ಗಾರ್ಬಿನ್ ಮುಗುರುಜಾ ನೂತನ ರ್‍ಯಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಯುಎಸ್ ಓಪನ್‌ನ ಫೈನಲಿಗೇರಿದ್ದ ಪ್ಲಿಸ್ಕೋವಾ ಈ ವರ್ಷ ಫ್ರೆಂಜ್ ಓಪನ್‌ನ ಸೆಮಿಫೈನಲ್ ತಲುಪಿದ್ದರು. 2017ರಲ್ಲಿ ಅವರು ಬ್ರಿಸºನ್, ದೋಹಾ ಮತ್ತು ಈಸ್ಟ್‌ಬೋರ್ನ್ನಲ್ಲಿ ನಡೆದ ಟೆನಿಸ್ ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಪ್ಲಿಸ್ಕೋವಾ ನಂಬರ್ ವನ್ ಸ್ಥಾನಕ್ಕೇರಿದ 23ನೇ ವನಿತೆಯರಾಗಿದ್ದಾರೆ.
ಸರಿಯಾಗಿ ಒಂದು ವರ್ಷದ ಬಳಿಕ ಫೆಡರರ್ ಮೂರನೇ ಸ್ಥಾನಕ್ಕೇರಿದ್ದಾರೆ. 35ರ ಹರೆಯದ ಫೆಡರರ್ ವಿಂಬಲ್ಡನ್ ಗೆದ್ದ ಅತೀ ಹಿರಿಯ ಆಟಗಾರ ಎಂದೆನಿಸಿಕೊಂಡಿದ್ದಾರೆ. ರವಿವಾರ ನಡೆದ ಫೈನಲ್ ಹೋರಾಟದಲ್ಲಿ ಮರಿನ್ ಸಿಲಿಕ್ ಅವರನ್ನು ಫೆಡರರ್ ನೇರ ಸೆಟ್‌ಗಳಿಂದ ಸೋಲಿಸಿದ್ದರು. ವಿಂಬಲ್ಡನ್ ಗೆದ್ದ ಫೆಡರರ್ 2,000 ರ್‍ಯಾಂಕಿಂಗ್ ಅಂಕ ಪಡೆದರಲ್ಲದೇ ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆಯುವ ವರ್ಷಾಂತ್ಯದ ಎಟಿಪಿ ಟೂರ್ ಫೈನಲ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಿಕೊಂಡರು.
ಆವೆ ಅಂಗಣದ ಸೂಪರ್ ತಾರೆ ರಫೆಲ್ ನಡಾಲ್ ಎರಡನೇ ಹಾಗೂ ಸರ್ಬಿಯಾದ ನೊವಾಕ್ ಜೊಕೋವಿಕ್ ನಾಲ್ಕನೇ ರ್‍ಯಾಂಕ್‌ನಲ್ಲಿದ್ದಾರೆ.