Advertisement
ಸಾಧನೆಯ ಗೋಪುರದ ತುತ್ತತುದಿಯಲ್ಲಿರುವವರ ಬಗ್ಗೆ ದಾಖಲೆಗಳು ಮಾತನಾಡುವುದು ವಿಶೇಷವೂ ಅಲ್ಲ. ಫೆಡರರ್ ನಮಗೆ ಪ್ರಶಸ್ತಿಗಳಿಂದಷ್ಟೇ ಮಾದರಿ, ಆದರೆ ಅದೊಂದು ವಿಪರ್ಯಾಸವೂ ಆಗುತ್ತದೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿಶ್ವನಾಥನ್ ಆನಂದ್, ಸ್ಟೀಫನ್ ಎಡºರ್ಗ್ ರೀತಿಯಲ್ಲಿ ಚಾಂಪಿಯನ್ ಆಟಗಾರ ತನ್ನ ವರ್ತನೆಯಿಂದಲೂ ಅಗ್ರಸ್ಥಾನಿ ಎನ್ನಿಸಿಕೊಳ್ಳಬೇಕು. ಇಂತಹ ಮಾಹಿತಿಗಳನ್ನು ಅರಸಿ ಹೊರಟಾಗ ಸಿಕ್ಕ ಕತೆ, ದಂತಕತೆ, ದೃಷ್ಟಾಂತ, ಉಪಕತೆಗಳ ಗುತ್ಛ ಇಲ್ಲಿದೆ.
ರೋಜರ್ ಫೆಡರರ್, ಅಮೆರಿಕದ ಆ್ಯಂಡಿ ರ್ಯಾಡಿಕ್‌ರ ಪಾಲಿಗೆ ಒಂದರ್ಥದಲ್ಲಿ ರಾಹುಕೇತು ಎಲ್ಲವೂ. ಹಾಗಂದಿದ್ದಕ್ಕೆ ಇರಲಿ ಶಾಂತಂಪಾಪಂ. ರ್ಯಾಡಿಕ್ 8 ಬಾರಿ ಫೆಡರರ್ ಅವರನ್ನು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಎದುರಿಸಿದ್ದು ಅಷ್ಟೂ ಬಾರಿ ರ್ಯಾಡಿಕ್‌ರಿಗೆ ಒಂದೇ ಅನುಭವ, ಪರಾಜಯ! ಇದರಲ್ಲಿ ನಾಲ್ಕು ಗ್ರ್ಯಾನ್‌ಸ್ಲಾಮ್ ಫೈನಲ್. 21 ಸೋಲಿನ ಎದುರು ಮೂರು ಮಾಸ್ಟರ್ ಗೆಲುವು ಮಾತ್ರ ರ್ಯಾಡಿಕ್‌ರದು. ಪ್ರದರ್ಶನ ಪಂದ್ಯಗಳಲ್ಲಿ ರ್ಯಾಡಿಕ್‌ರಿಗೆ 2-1ರ ಮೇಲುಗೈ ಇದೆ! 2004ರ ವಿಂಬಲ್ಡನ್ ಫೈನಲ್‌ನಲ್ಲಿ ಫೆಡರರ್‌ಗೆ ಸೋತ ರ್ಯಾಡಿಕ್ ಫೆಡರರ್‌ನ್ನು ಮಣಿಸುವ ಸರಳ ಉಪಾಯವನ್ನು ಯಥಾರೀತಿಯ ಸೋಲೊಂದರ ನಂತರದ ಭಾಷಣದಲ್ಲಿ ಬಯಲುಗೊಳಿಸಿದರು. ಏನು ಗೊತ್ತೇ? ಫೆಡರರ್ ಎದುರು ಟೆನಿಸ್ ಬಿಟ್ಟು ಬೇರೆ ಆಟದ ಸ್ಪರ್ಧೆಗಿಳಿಯುವುದು! ಇನ್ನೊಂದು ಸಂದರ್ಭ, ರ್ಯಾಡಿಕ್ ಆಹ್ವಾನಿತ ಟೂರ್ನಿಯೊಂದರಲ್ಲಿ ಫೆಡರರ್ ಅವರನ್ನು ಮಣಿಸಿ ಪ್ರಶಸ್ತಿ ಪಡೆದ ಬಿಸಿಯಲ್ಲಿಯೇ ಆಸ್ಟ್ರೇಲಿಯನ್ ಓಪನ್ ಸ್ಪರ್ಧೆ ಎದುರಾಗಿತ್ತು. ಮತ್ತೆ ಈ ದಿಗ್ಗಜರು ಉಪಾಂತ್ಯದ ಪಂದ್ಯದಲ್ಲಿ ಎದುರಾಳಿಯಾಗಬೇಕು. ಈ ಸಮಯದಲ್ಲಿ ರ್ಯಾಡಿಕ್ ಎದುರು ಒಂದು ಪ್ರಶ್ನೆ ತೂರಿಬಂತು. ಈ 5 ರಿಂದ 6 ತಿಂಗಳಲ್ಲಿ ನಿಮ್ಮಿಬ್ಬರ ನಡುವೆ ಅಂತರ ಕಡಿಮೆಯಾದಂತಿದೆ. ಬಹುಶಃ ಥ್ಯಾಂಕ್ಸ್ ಟು ಯುವರ್ ಕೋಚ್ ಜಿಮ್ಮಿ ಕಾನರ್….ರ್ಯಾಡಿಕ್ ಹೇಳಿದ್ದಿಷ್ಟೇ; ನಿಜ, ನಿಮಗೆ ಹಾಗೆ ಅನಿಸಿರಬಹುದು. ನನಗನ್ನಿಸುವ ಮಟ್ಟಿಗೆ ಈ ಅಂತರವನ್ನು ವೃದ್ಧಿಸುವ ನಿಟ್ಟಿನಲ್ಲಿ ಸದ್ಯ ಫೆಡರರ್ ಪ್ರಯತ್ನಿಸಿಲ್ಲ ಎಂಬುದೇ ಹೆಚ್ಚು ವಾಸ್ತವ. ಫೆಡರರ್ ಪ್ರತಿಭೆಗೂ, ರ್ಯಾಡಿಕ್‌ರ ಶುದ್ಧ ಮನಸ್ಸಿಗೂ ಸಲಾಂ!
Related Articles
ಅಮೆರಿಕಾದ ಜಿಮ್ ಕುರಿಯರ್ ಮಾಜಿ ಟೆನಿಸಿಗ. ಅವರೂ ಗ್ರ್ಯಾನ್‌ಸ್ಲಾಮ್ ಗೆದ್ದವರೇ. ನಿವೃತ್ತಿಯ ನಂತರ ಟೆನಿಸ್ ವೀಕ್ಷಕ ವಿವರಣೆಗಾರನ ಪೋಷಾಕು ಧರಿಸಿದಂಥವರು. ಇಂತಿಪ್ಪ ಕುರಿಯರ್ ಒಂದು ದಿನ ಅಭ್ಯಾಸ ನಡೆಸಿದ್ದ ಫೆಡರರ್ ಅವರನ್ನು ಕೋರ್ಟ್ ಆಚೆಗೆ ಕರೆದು ಒಂದು ಮಿನಿ ಸಂದರ್ಶನವನ್ನು ನಡೆಸಿದರು. ನಿಮ್ಮ ಪ್ರಬಲ ಎದುರಾಳಿ ಯಾರು? ಫೆಡರರ್ ತಮ್ಮ ಆಜುಬಾಜಿನ ಮೂರು ಶ್ರೇಯಾಂಕಿತರನ್ನು ಹೆಸರಿಸಿದರು. ಜೊತೆಗೆ ಆ್ಯಂಡ್ರಿ ಅಗಾಸ್ಸಿ ಹೆಸರನ್ನೂ ಅವರು ಸೇರಿಸಿದರು. ಸೆವೆನ್ ನೆಟ್‌ವರ್ಕ್‌ನ ಕುರಿಯರ್‌ಗೆ ಸ್ಪಷ್ಟ ಉತ್ತರದ ಬಯಕೆ. ಅವರ ಒತ್ತಡವನ್ನು ಫೆಡರರ್ ವಿರೋಧಿಸಿದರು. ಈಗ ಕುರಿಯರ್ ದಾಳ ಬದಲಿಸಿದರು. ನೋಡಿ ಫೆಡರರ್, ನೀವೀಗ ಸ್ಪಷ್ಟ ಉತ್ತರ ನೀಡಿದರೆ ನಾಳೆ ಸುನಾಮಿ ಸಂತ್ರಸ್ಥರ ನಿಧಿಗಾಗಿ ನೀವು ಹರಾಜಿಗಿಡುವ ರ್ಯಾಕೆಟ್‌ಗೆ ನಾನು ಮೂರು ಸಾವಿರ ಆಸ್ಟ್ರೇಲಿಯನ್ ಡಾಲರ್ ಕೂಗುತ್ತೇನೆ, ಏನಂತೀರಾ?
Advertisement
ಫೆಡರರ್ ತಟಕ್ಕನೆ ಹೆಸರು ಹೇಳಿಬಿಟ್ಟರು, ಹೆವಿಟ್ ಎಂಬ ಧಾರಾಳ ಉತ್ತರ, ಜೊತೆಗೆ ಅದೇ ನಸುನಗೆ. ದುಡಿಮೆಗೆಂದೇ ಆಸ್ಟ್ರೇಲಿಯಾಗೆ ಹೋದ ಕುರಿಯರ್ 3 ಸಾವಿರ ಡಾಲರ್ ಕಳೆದುಕೊಂಡು ಬೆಪ್ಪಾದರು!
ನಿಯಮಗಳು ಬದಲಾಗಬೇಕಷ್ಟೇ!ರೋಜರ್ ಫೆಡರರ್ ವಿಂಬಲ್ಡನ್‌ನಲ್ಲಿ 93.9ರ ಪ್ರತಿಶತ ಪಂದ್ಯದ ಗೆಲುವು ಸಾಧಿಸಿದವರು. 2004ರಿಂದ 2007 ಅನ್ನು ಅವರ ಚಿನ್ನದ ದಿನಗಳು ಎಂದೇ ಕರೆಯಲಾಗುತ್ತದೆ. ಈ ಅವಧಿಯಲ್ಲಿ ಅವರು ಪಡೆದಿದ್ದು ಬರೋಬ್ಬರಿ 11 ಗ್ರ್ಯಾನ್‌ಸ್ಲಾಮ್. ಜೊತೆಗೆ ಎರಡು ಫೈನಲ್, ಎರಡು ಸೆಮೀಸ್. ಈ ಕಾಲಘಟ್ಟದಲ್ಲಿ ಸಾಮಾಜಿಕ ತಾಣಗಳಲ್ಲಿ ಫೆಡರರ್‌ರನ್ನು ಸೋಲಿಸಬಹುದಾದ ಹಲವು ಮಾದರಿಗಳನ್ನು ಆವಿಷ್ಕರಿಸಲಾಗಿತ್ತು. ಅವುಗಳೆಂದರೆ, ಫೆಡರರ್ ಕ್ಲೇ ಕೋರ್ಟ್‌ನಲ್ಲಿ ಸರ್ವ್ ಎಂಡ್ ವಾಲಿ ಆಟವನ್ನಷ್ಟೇ ಆಡಬೇಕು. ಹುಲ್ಲಿನಂಕಣದಲ್ಲಿ ಬೇಸ್‌ಲೈನ್‌ನಿಂದ ಮಾತ್ರ ಆಡುವುದು ಕಡ್ಡಾಯ. ಫೆಡರರ್ ಆಡುವ ಪಂದ್ಯದ ಬೆಸ್ಟ್ ಆಫ್ ತ್ರೀನ ಎರಡು ಸೆಟ್‌ಗಳಲ್ಲಿ ಫೆಡರರ್ ಜೊತೆ ಆತನ ಪ್ರೀತಿಯ ಸ್ವದೇಶಿ ಜನರ ಉಡುಗೊರೆ ಜುಲೆಟ್ಟೆ ಆತನೊಂದಿಗೆ ಇರತಕ್ಕದ್ದು. ಜುಲೆಟ್ಟೆ ಮಿರ್ಕಾಗೂ ಮೊದಲು ಬಂದ ಗರ್ಲ್ಫ್ರೆಂಡ್ ಏನಲ್ಲ. ಅದು ಸ್ವೀಡನ್ನಿನ ಜನತೆ ಒಂದು ವಿಂಬಲ್ಡನ್ ಗೆಲುವಿಗೆ ಕೊಟ್ಟ ಉಡುಗೊರೆ; ದೈತ್ಯ ಗಾತ್ರದ ಆಕಳು! ಮತ್ತೂಂದು, ಬಾಸ್ಕೆಟ್‌ಬಾಲ್‌ನಲ್ಲಿ ನಿರಾಯಾಸ ಸಂದರ್ಭದಲ್ಲಿ ಚೆಂಡನ್ನು ಬಾಸ್ಕೆಟ್‌ಗೆ ಹಾಕುವ ಮುನ್ನ ಆಟಗಾರ “ಗ್ಲಾಸ್’ ಎಂದು ಘೋಷಿಸುವ ಸಂಪ್ರದಾಯವಿದೆ. ಹಾಗೆಯೇ ಇನ್ನು ಮುಂದೆ ಫೆಡರರ್ ಬ್ಯಾಕ್‌ಹ್ಯಾಂಡ್ ಓವರ್ ಹೆಡ್ ಹೊಡೆತ ದಾಖಲಿಸುವ ಮುನ್ನ “ಶಾಟ್ ಎಂದು ಘೋಷಿಸಬೇಕು. ಒಂದೊಮ್ಮೆ ಹಾಗೆ ಹೇಳದಿದ್ದಲ್ಲಿ ಎದುರಾಳಿಗೆ ಅಂಕ! . ಹೀಗಿದ್ದೂ ಅವತ್ತು ಫೆಡರರ್ ಸೋಲುವುದು ಕಷ್ಟವಿತ್ತು. ಈ ತಮಾಷೆಗಳಲ್ಲಿಯೇ ಫೆಡರರ್ ಕುರಿತ ಮೆಚ್ಚುಗೆಯಿದೆ. ರೋಜರ್- ಹಾಜರ್!
ಗ್ರ್ಯಾನ್‌ಸ್ಲಾಮ್ ವೇಳೆ ಲಾಕರ್ ರೂಂ ಆಟಗಾರರಿಂದ ಗಿಜಿಗುಡುತ್ತಿರುತ್ತದೆ. ಆಟಗಾರರು ಪರಸ್ಪರ ಮಿಲನಗೊಳ್ಳುವ ಕ್ಷಣಗಳನ್ನು ವಿವರಿಸುವುದೇ ಸಂಭ್ರಮ. ಆಸ್ಪತ್ರೆ ಹಾಗಲ, ಅದು ಒಂಟಿ ಬವಣೆ. ಭೇಟಿಗೂ ಹಲವು ನಿರ್ಬಂಧ. ಅಂತಹ ಪರಿಸ್ಥಿತಿ ಟೆನಿಸ್ ಆಟಗಾರ ಜೇಮ್ಸ್ ಬ್ಲೇಕ್‌ಗೆ ಬಂದಿತ್ತು.
ಅವರ ಕುತ್ತಿಗೆಯ ಗಾಯದಿಂದಾಗಿ ಹಾಸಿಗೆ ಬಿಟ್ಟೇಳುವಂತಿರಲಿಲ್ಲ. ಲಾಕರ್ ರೂಂ ಸ್ನೇಹಿತರಾರೂ ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಆಗ ಬಂತು ಪುಟ್ಟ ಸಂದೇಶ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಜಕ್ಕೂ ತಮ್ಮನ್ನು ಅದಷ್ಟು ಬೇಗ ಅಂಕಣದಲ್ಲಿ ನೋಡಲಿಚ್ಛಿಸುತ್ತೇವೆ! ಸಾಧ್ಯವಿದ್ದರೆ ಬ್ಲೇಕ್ ಜಿಗಿದು ಹಾರಾಡುತ್ತಿದ್ದರೇನೋ. ಅವತ್ತು ನೂರಾರು ಟೆನಿಸ್ ಸಹ ಆಟಗಾರರಲ್ಲಿ ಬ್ಲೇಕ್‌ಗೆ ಬಂದ ಏಕೈಕ ಸಂದೇಶ. ಕಳಿಸಿದ್ದು ಯಾರು ಗೊತ್ತೆ? ರೋಜರ್ ಫೆಡರರ್! ನಾಟೌಟ್ ಆಟಗಾರ….
ವಿಂಬಲ್ಡನ್ ಪೂರೈಸಿದ ರೋಜರ್ ಫೆಡರರ್ ಕೆಲ ಸಮಯ ಕೌಟುಂಬಿಕ ಖುಷಿಯನ್ನು ಅನುಭವಿಸಲಿದ್ದಾರೆ. ಪತ್ನಿ ಮಿರ್ಕಾರಿಂದ ಪಡೆದಿರುವ ನಾಲ್ಕು ಮಕ್ಕಳ ತುಂಬು ಕುಟುಂಬ ಅವರದು. ಆಗಸ್ಟ್ 13ರಂದು ಸಿನ್ಸಿನಾಟಿ ಮಾಸ್ಟರ್ ಮೂಲಕ ವರ್ಷದ ಕೊನೆಯ ಯು.ಎಸ್.ಓಪನ್‌ನ ಟ್ರೋಫಿಗಾಗಿ, ಅದಕ್ಕಿಂತ ಮುಖ್ಯವಾಗಿ ಗ್ರಾÂನ್‌ಸ್ಲಾಮ್‌ನ ನಂ.20 ಕ್ಕಾಗಿ ಅವರ ಸ್ಪರ್ಧೆ. ಸದ್ಯಕ್ಕೆ ಅವರ ಟೆನಿಸ್ ಜಾತಕ ಉಜ್ವಲವಾಗಿದೆ. ಜೊಕೊವಿಚ್ ಹಾಗೂ ಆ್ಯಂಡಿ ಮರ್ರೆ ಸಂಪೂರ್ಣ ದೈಹಿಕ ಫಿಟ್‌ನೆಸ್ ಹೊಂದಿಲ್ಲದಿರುವುದು ಗಮನಾರ್ಹ. ಆ ಮಟ್ಟಿಗೆ ಸದಾ ಸಮಸ್ಯೆಯ ರಾಫೆಲ್ ನಡಾಲ್ ಎಂಬ ಹರ್ಡಲ್ಸ್ ಮಾತ್ರ ದಾಟುವುದಿದೆ. ಜಾತಕದ ಪ್ರಕಾರ, ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್‌ಗಳನ್ನು ಗೆದ್ದ ವರ್ಷಗಳಲ್ಲೆಲ್ಲ ರೋಜರ್ ಫೆಡರರ್ ಯುಎಸ್ ಗ್ರ್ಯಾನ್‌ಸ್ಲಾಮ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. 2004, 06, 07ರಲ್ಲಿ ಇದು ಮರುಕಳಿಸಿದೆ. ಈ ಬಾರಿಯೂ ಆಡಿದ ಈ ಎರಡೂ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಸಿಕ್ಕಿದೆ. ಇತಿಹಾಸ ಮತ್ತೆ ಮರುಕಳಿಸಬಹುದೆ? -ಮಾ.ವೆಂ.ಸ.ಪ್ರಸಾದ್