Advertisement
ಇಷ್ಟಕ್ಕೂ ಟೆನಿಸ್ ಗ್ರ್ಯಾನ್‌ಸ್ಲಾಮ್ ಎಂದರೆ ವರ್ಷದಲ್ಲಿ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳು. ವರ್ಷದ ಮೊದಲನೆಯದು ಆಸ್ಟ್ರೇಲಿಯನ್ ಓಪನ್, ಈಗ ನಡೆಯುವುದು ಫ್ರೆಂಚ್ ಓಪನ್, ನಂತರ ಹುಲ್ಲಿನಂಕಣದ ವಿಂಬಲ್ಡನ್. ಕೊನೆಯದು ಯು.ಎಸ್.ಓಪನ್. ಇಲ್ಲೂ ಗ್ರ್ಯಾನ್‌ಸ್ಲಾಮ್‌ಗಳ ವೇಳಾಪಟ್ಟಿ ತುಸು ವಿಚಿತ್ರವೇ. ವರ್ಷದ ಮೊದಲ ತಿಂಗಳು ಮೆಲ್ಬೋರ್ನ್ನಲ್ಲಿ ಸಿಂಥೆಟಿಕ್ ಅಂಕಣದಲ್ಲಿ ಆಸ್ಟ್ರೇಲಿಯನ್ ಓಪನ್ ನಡೆದರೆ ಮೇ ಕೊನೆ ವಾರದಲ್ಲಿ ಫ್ರಾನ್ಸ್‌ನ ಕ್ಲೇ ಕೋರ್ಟ್‌ನಲ್ಲಿ ಫ್ರೆಂಚ್ ಓಪನ್. ಇದಾಗಿ ಒಂದು ತಿಂಗಳ ನಂತರ ಆಲ್‌ಇಂಗ್ಲೆಂಡ್ ಕ್ಲಬ್‌ನಲ್ಲಿ ವಿಂಬಲ್ಡನ್. ಆಮೇಲೆ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನ ಕಾಂಕ್ರೀಟ್ ಕೋರ್ಟ್‌ನ ಗ್ರ್ಯಾನ್‌ಸ್ಲಾಮ್ ನಡೆದ ನಂತರ ಮತ್ತೆ ಮೂರು ತಿಂಗಳು ಗ್ರ್ಯಾನ್‌ಸ್ಲಾಮ್ ಸುದ್ದಿ ಇಲ್ಲ. ಈ ಪ್ರತಿ ವರ್ಷದ ವೈಶಿಷ್ಟÂಗಳ ಜೊತೆ ಈ ಬಾರಿ ಫ್ರೆಂಚ್ ಓಪನ್ ಸಂದರ್ಭದಲ್ಲಿ ಹಲವು ಪ್ರಚಲಿತ ಸ್ವಾರಸ್ಯಕರ ಸಂಗತಿಗಳು ಮೈದಳೆಯುತ್ತಿವೆ.
ಮೊನ್ನೆ ಮೊನ್ನೆ ಸ್ವಿಸ್ ಪ್ರತಿಭೆ ರೋಜರ್ ಫೆಡರರ್ ಮತ್ತೂಮ್ಮೆ ಅಗ್ರಕ್ರಮಾಂಕದ ಸಿಂಹಾಸನವನ್ನು ಏರಿದ್ದಾರೆ. 37 ವರ್ಷ ವಯಸ್ಸು, ವಿಶ್ವ ಗರಿಷ್ಠ 20 ಗ್ರ್ಯಾನ್‌ಸ್ಲಾಮ್ ಪಡೆದ ವಿಶ್ವದಾಖಲೆ ಶೂರ ವರ್ಷಾರಂಭದಲ್ಲಿಯೇ ಘೋಷಿಸಿಬಿಟ್ಟಿದ್ದಾರೆ, ನಾನು ಈ ವರ್ಷದ ಸಂಪೂರ್ಣ ಕ್ಲೇ ಋತುವಿನಲ್ಲಿ ಪಾಲ್ಗೊಳ್ಳುವುದಿಲ್ಲ! ವಿಶ್ವದ ನಂ.1 ಆಟಗಾರ ಗಾಯದ ಹೊರತಾದ ಕಾರಣಕ್ಕೆ ಫ್ರೆಂಚ್‌ನಲ್ಲಿ ಆಡುತ್ತಿಲ್ಲ ಎಂಬುದು ಅದನ್ನು ಪ್ರಕಟಿಸುವ ಸಮಯದ ದೃಢತೆಯ ಕಾರಣದಿಂದ ಹೆಚ್ಚು ಮನ್ನಣೆ ಪಡೆದಿದೆ. ತನ್ನ ಕೆರಿಯರ್ ಕ್ಲೇ ಪ್ರದರ್ಶನದ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಫೆಡರರ್ ನೇರವಾಗಿಯೇ ಪ್ರತಿಪಾದಿಸುತ್ತಿದ್ದಾರೆ. ಹಿಂದೆಲ್ಲ, ಫ್ರೆಂಚ್ ಓಪನ್ ಗೆದ್ದವರು ವಿಂಬಲ್ಡನ್‌ನ ಹುಲ್ಲು ಇರುವುದು ಜಾನುವಾರುಗಳ ಮೇವಿಗೆ ಎಂದು ಅಲ್ಲಿ ಆಡಲು ನಿರಾಕರಿಸುತ್ತಿದ್ದರು. ಈಗ ಕಾಲ ಬದಲಾಗಿದೆ, ಫ್ರೆಂಚ್ ಬಿಟ್ಟು ಫೆಡ್ ಹುಲ್ಲಿನಂಕಣದಲ್ಲಿ ಆಡಲು ತವಕಿಸುತ್ತಿದ್ದಾರೆ. ಅವರ 20 ಶ್ರೇಷ್ಠ ಪದಕಗಳ ಪಟ್ಟಿಯಲ್ಲಿ ಒಂದು ಫ್ರೆಂಚ್ ಓಪನ್ ಕೂಡ ಇದೆ ಎಂಬುದು ಗಮನಾರ್ಹ!
Related Articles
Advertisement
ರಫೆಲ್ ಅಸಲಿ ಫೇವರಿಟ್!ಫ್ರೆಂಚ್ ಓಪನ್‌ಗೆ ಅಗ್ರಕ್ರಮಾಂಕಿತರಾಗಿ ಅಡಿಯಿಡುವ ರಫೆಲ್ ಅಪ್ಪಟ ಫೇವರಿಟ್. ಈವರೆಗೆ ಫ್ರಾನ್ಸ್‌ನಲ್ಲಿ ಅವರು ರಾಬಿನ್ ಸೋಡರ್ಲಿಂಗ್ ಹಾಗೂ ನೋವಾಕ್ ಜೋಕೋವಿಕ್‌ಗೆ ಮಾತ್ರ ಮಣಿದಿದ್ದಾರೆ. ಆ ಸೋಲುಗಳು ಕೂಡ ಐದು ಸೆಟ್‌ಗಳ ಘೋರ ಹಣಾಹಣಿಯ ನಂತರವಷ್ಟೇ ಘಟಿಸಿವೆ. ಇತ್ತೀಚಿಗೆ 43 ಸತತ ಕ್ಲೇ ಕೋರ್ಟ್ ಪಂದ್ಯಗಳ ಗೆಲುವಿನ ಸರಣಿಯನ್ನು ರಫಾ ಸೃಷ್ಟಿಸಿದ್ದಿದೆ. ಒಂದೇ ಒಂದು ಕಪ್ಪು ಚುಕ್ಕೆಯೆಂದರೆ ಇತ್ತೀಚೆಗೆ ಮ್ಯಾಡ್ರಿಡ್‌ನಲ್ಲಿ ಹೊಸ ರಫಾ ಪ್ರತಿರೂಪ ಎಂಬ ಖ್ಯಾತಿಯ ಡೊಮಿನಿಕ್ ಥೀಮ್ ಎದುರು ಎಂಟರ ಘಟ್ಟದಲ್ಲಿ ನಡಾಲ್ ಪರಾಜಿತರಾಗಿದ್ದಾರೆ. ಈಗಾಗಲೇ ಸತತ ಎರಡು ಫ್ರೆಂಚ್ ಓಪನ್ ಉಪಾಂತ್ಯ ತಲುಪಿದ ಖ್ಯಾತಿಯ ಥೀಮ್ ಭಯ ನಡಾಲ್‌ಗೆ ಕಾಡಬಹುದು. ಅವರನ್ನು ಬಿಟ್ಟರೆ ಸ್ಟಾನ್ ವಾವ್ರಿಂಕಾ, ಜೋಕೋವಿಕ್, ಜಾನ್ ಮಾರ್ಟಿನ್ ಡೆಲ್ ಪೆಟ್ರೋ, ಡೇವಿಡ್ ಗಾಫಿನ್‌ರನ್ನು ನಡಾಲ್‌ರ ಓಟಕ್ಕೆ ತಡೆ ಒಡ್ಡಬಲ್ಲವರು ಎಂದು ಗುರ್ತಿಸಬಹುದು. ಅಂಕಣದಲ್ಲಿ ಅಂತಹ ನಿರೀಕ್ಷೆಯ ಆಟ ಆಡಬೇಕಾದವರು ಅವರು! ಮಹಿಳಾ ವಿಭಾಗ ಮುಕ್ತ ಮುಕ್ತ!
ಇಬ್ಬರು ಆಟಗಾರ್ತಿಯರು ಬಾಣಂತನ ಮುಗಿಸಿ ಫ್ರೆಂಚ್ ಓಪನ್ ಕಣಕ್ಕಿಳಿಯಬಹುದೇ ಎಂಬುದು ಕೂಡ ಕುತೂಹಲದ ಅಂಶ. ಸೆರೆನಾ ವಿಲಿಯಮ್ಸ್ ಹಾಗೂ ವಿಕ್ಟೋರಿಯಾ ಅಜರೆಂಕಾ ಅವರ ರ್‍ಯಾಂಕಿಂಗ್‌ನ್ನು ರಕ್ಷಿಸಿಡಲಾಗಿದೆ. ಅಂದರೆ ಅವರು ಪ್ರಸ್ತುತ ಟಾಪ್ 108ರಲ್ಲಿ ಇಲ್ಲದಿದ್ದರೂ ಅವರ ಹಿಂದಿನ ರ್‍ಯಾಂಕಿಂಗ್‌ನ ಅನುಸಾರ ನೇರ ಪ್ರವೇಶ ನೀಡಲಾಗುತ್ತದೆ. ಅಜರೆಂಕಾ ಅವರ ವಾಸ್ತವ ರ್‍ಯಾಂಕಿಂಗ್ ಈಗ 95 ಆಗಿರುವುದರಿಂದ ಈ ಸೌಲಭ್ಯ ಇಲ್ಲದಿದ್ದರೂ ಅವರಿಗೆ ನೇರ ಪ್ರವೇಶವಿದೆ. ಅದರ ಹೊರತಾಗಿ ಅವರು ಸ್ಪರ್ಧೆಯಲ್ಲಿ ಗಂಭೀರವಾಗಿ ಪರಿಗಣಿಸಬಹುದೇ ಎಂಬುದು ತುಸು ಅನುಮಾನವೇ ಸರಿ. ಅವರನ್ನು ಬಿಟ್ಟರೆ ಇನ್ನೂ ಗ್ರ್ಯಾನ್‌ಸ್ಲಾಮ್ ಗೆಲ್ಲದಿದ್ದರೂ ಗೆಲ್ಲುವ ಮೆಟೀರಿಯಲ್ ಆಗಿ ಸಿಮೋನ್ ಹಾಲೆಪ್ ಈ ಋತುವಿನಲ್ಲಿ 20-4ರ ಅನುಪಾತದ ಸಾಧನೆ ತೋರಿದ್ದಾರೆ. ಕಳೆದ ನಾಲ್ಕು ಗ್ರಾನ್‌ಸ್ಲಾಮ್‌ಗಳಲ್ಲಿ 2ರಲ್ಲಿ ಫೈನಲ್ ತಲುಪಿದ್ದು ಗಮನಾರ್ಹ. ಇತ್ತ ಕಳೆದ ಫ್ರೆಂಚ್ ಓಪನ್ ಗೆದ್ದಿರುವ ಜೆಲೆನಾ ಒಸ್ಟಾಪೆಂಕೋ 2006-07ರಲ್ಲಿ ಜಸ್ಟಿನ್ ಹೆನಿನ್ ಮಾಡಿದ ಪ್ರಶಸ್ತಿ ಉಳಿಸಿಕೊಳ್ಳುವ ಸಾಧನೆಯನ್ನು ಅನುಸರಿಸಲು ಪ್ರಯತ್ನಿಸುವುದಂತೂ ಖಚಿತ. ಈ ಇಬ್ಬರ ಹೊರತಾಗಿ ಕರೋಲಿನಾ ವೋಜಿಯಾಕಿ, ಎಲಿನಾ ಸ್ವಿಟೋಲಿನಾ, ಕ್ಯಾರೋಲಿನಾ ಗಾರ್ಸಿಯಾ ಕೂಡ ಫೇವರಿಟ್‌ಗಳ ಪಟ್ಟಿಯಲ್ಲಿದ್ದಾರೆ. ಸ್ಟಾರ್‌ಗಳ ಕೊರತೆಯಿಂದ ಮಹಿಳಾ ಟೆನಿಸ್ ಸೊರಗುತ್ತಿದೆ. ಒಬ್ಬ ಸೆರೆನಾರಿಂದ ಕೂಡ ಇದನ್ನು ಮೇಲಕ್ಕೆತ್ತಲಿಕ್ಕಾಗದ ಪರಿಸ್ಥಿತಿಯಿದೆ. ಮೋನಿಕಾ ಸೆಲೆಸ್, ಸ್ಟೆಫಿ ಗ್ರಾಫ್, ಮಾರ್ಟಿನಾ ನವ್ರಾಟಿಲೋವಾ; ಕಿಂ ಕ್ಲಿಸ್ಟರ್, ಅರೆಂಕ್ಸಾ ಸ್ಯಾಂಚೆಜ್ ವಿಕಾರಿಯೋ….ಈ ತರದವರು ಬೇಕಾಗಿದ್ದಾರೆ. ಎಲ್ಲಿದ್ದೀರಿ ಕನ್ಸಿಸ್ಟೆಂಟ್ ಆಟ ಆಡುವ ಪ್ರತಿಭೆಗಳೇ?? -ಮಾ.ವೆಂ.ಸ.ಪ್ರಸಾದ್