Advertisement

ರೋಜರ್ ಕಪ್‌ ಟೆನಿಸ್‌: ರಫೆಲ್‌ ನಡಾಲ್‌, ಬಿಯಾಂಕಾ ಚಾಂಪಿಯನ್ಸ್‌

11:03 PM Aug 12, 2019 | Sriram |

ಮಾಂಟ್ರಿಯಲ್‌/ಟೊರಂಟೊ: ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ರಫೆಲ್‌ ನಡಾಲ್‌ ಮಾಂಟ್ರಿಯಲ್‌ನಲ್ಲಿ ನಡೆದ “ರೋಜರ್ ಕಪ್‌’ ಟೆನಿಸ್‌ ಕೂಟದ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

6-3, 6-0 ಸೆಟ್‌ಗಳಿಂದ ಜಯಭೇರಿ ಬಾರಿಸಿದ ನಡಾಲ್‌ ತನ್ನ “ಮಾಸ್ಟರ್ 1000′ ಪ್ರಶಸ್ತಿ ಗೆಲುವಿನ ದಾಖಲೆಯನ್ನು 35ಕ್ಕೆ ಏರಿಸಿದರು. ಇದು ವಿಶ್ವ ನಂ.1 ನೊವಾಕ್‌ ಜೊಕೋವಿಕ್‌ ಸಾಧನೆಗಿಂತ ಎರಡು ಹೆಚ್ಚು. ಜೊಕೋವಿಕ್‌ 33 ಬಾರಿ ಮಾಸ್ಟರ್ ಪ್ರಶಸ್ತಿ ಜಯಿಸಿದ್ದಾರೆ. ನಡಾಲ್‌ ಮಾಸ್ಟರ್ ಕೂಟದ ಪ್ರಶಸ್ತಿಯನ್ನು ಸತತ 2ನೇ ಬಾರಿ ಉಳಿಸಿಕೊಂಡಿರುವುದು ಇದೇ ಮೊದಲ ಸಲವಾಗಿದೆ.

ಉತ್ತಮ ನಿರ್ವಹಣೆಯ ಮೂಲಕ ಪಂದ್ಯ ಆರಂಭಿಸುವುದು ಅತೀ ಮುಖ್ಯ ಎಂದು 18 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ನಡಾಲ್‌ ಹೇಳಿದರು.

“ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಕಳೆದ ವಾರ ಬಹಳಷ್ಟು ಪಂದ್ಯಗಳನ್ನು ಆಡಿದ್ದರು’ ಎಂದು ಎದುರಾಳಿ ಮೆಡ್ವಡೇವ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮೆಡ್ವಡೇವ್‌ ಕಳೆದ ವಾರ ವಾಷಿಂಗ್ಟನ್‌ನ ಕೂಟದ ಫೈನಲ್‌ನಲ್ಲಿ ನಿಕ್‌ ಕಿರ್ಗಿಯೋಸ್‌ಗೆ ಶರಣಾಗಿದ್ದರು.

ಯುಎಸ್‌ ಓಪನ್‌ಗೆ ಪೂರ್ವಭಾವಿಯಾಗಿ ತನ್ನ ಸಿದ್ಧತೆ ಆರಂಭಿಸಿದ ಬಳಿಕ ನಡಾಲ್‌ ಕೇವಲ 3 ಹಾರ್ಡ್‌ಕೋರ್ಟ್‌ ಪಂದ್ಯಗಳನ್ನು ಆಡಿದ್ದರು. ಇಲ್ಲಿ ಸೆಮಿಫೈನಲ್‌ನಲ್ಲಿ ಅವರಿಗೆ ವಾಕ್‌ ಓವರ್‌ ಲಭಿಸಿತ್ತು.

Advertisement

ತವರಿನ ಸಾಧಕಿ ಆ್ಯಂಡ್ರಿಸ್ಕಾ ಬಿಯಾಂಕಾ
ಬೆನ್ನಿನ ಸೆಳೆತದಿಂದಾಗಿ ಸೆರೆನಾ ವಿಲಿಯಮ್ಸ್‌ ಡಬ್ಲ್ಯುಟಿಎ ಟೊರಂಟೊ ಟೆನಿಸ್‌ ಕೂಟದ ಫೈನಲ್‌ನಲ್ಲಿ ಕೇವಲ 4 ಗೇಮ್‌ ಆಡಿದ ಬಳಿಕ ಪಂದ್ಯ ತ್ಯಜಿಸಬೇಕಾಯಿತು. ಇದರಿಂದ ತವರಿನ ಆ್ಯಂಡ್ರಿಸ್ಕಾ ಬಿಯಾಂಕಾ ಮೊದಲ ಬಾರಿಗೆ ಪ್ರಶಸ್ತಿಯನ್ನೆತ್ತಿದ ಹೆಗ್ಗಳಿಕೆಗೆ ಪಾತ್ರರಾದರು.

ಫೈನಲ್‌ ಹೋರಾಟದಲ್ಲಿ 1-3 ಹಿನ್ನೆಡೆಯಲ್ಲಿದ್ದಾಗ ಸೆರೆನಾ ವೈದ್ಯಕೀಯ ಟೈಮ್‌ಔಟ್‌ ಪಡೆದುಕೊಂಡರು. ಆದರೆ ಒಂದು ನಿಮಿಷದ ಒಳಗಾಗಿ ಅಂಪಾಯರ್‌ ಸೆರೆನಾ ಪಂದ್ಯ ತ್ಯಜಿಸಿದ್ದಾರೆ‌ಂದು ಪ್ರಕಟಿಸಿದರು. ಹೀಗಾಗಿ ಸೆರೆನಾ ಅವರ ಫೈನಲ್‌ ಎದುರಾಳಿ ತವರಿನ 19ರ ಹರೆಯದ ಬಿಯಾಂಕಾ ಆ್ಯಂಡ್ರಿಸ್ಕಾ ಪ್ರಶಸ್ತಿ ಗೆದ್ದರು. ಇದು ಆ್ಯಂಡ್ರಿಸ್ಕಾ ಅವರ ವರ್ಷದ 2ನೇ ಪ್ರಶಸ್ತಿಯಾಗಿದೆ.

ನೋವಿನಿಂದಾಗಿ ಪೂರ್ತಿ ಫೈನಲ್‌ ಆಡುವುದು ಕಷ್ಟವೆಂದು ತಿಳಿದಿತ್ತು ಎಂದು ಪಂದ್ಯದ ಬಳಿಕ ಸೆರೆನಾ ನುಡಿದಿದ್ದಾರೆ.ಪಂದ್ಯ ನಿಂತ ಬಳಿಕ ಸೆರೆನಾ ಹತ್ತಿರ ತೆರಳಿದ ಆ್ಯಂಡ್ರಿಸ್ಕಾ, ಅವರನ್ನು ಆಲಂಗಿಸಿಕೊಂಡು ಭರವಸೆಯ ಮಾತು ಗಳನ್ನಾಡಿದರು. ಈ ವೇಳೆ ಸೆರೆನಾ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. “ಕ್ಷಮಿಸಿ… ನನ್ನಿಂದ ಇವತ್ತು ಆಡಲು ಸಾಧ್ಯವಾಗಲಿಲ್ಲ’ ಎಂದು ಪ್ರೇಕ್ಷಕರತ್ತ ನೋಡುತ್ತ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next