Advertisement

ಬೆಟ್ಟದಿಂದ ಉರುಳುತ್ತಿವೆ ಬಂಡೆಕಲ್ಲುಗಳು!

11:08 AM Sep 17, 2019 | Sriram |

ಮಡಿಕೇರಿ: ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆಯಿಂದ ಬೃಹತ್‌ ಗಾತ್ರದ ಬಂಡೆ ಕಲ್ಲುಗಳು ಜಾರಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋಳಿಕಲ್ಲು ಮಲೆಯ ತಪ್ಪಲಿನಲ್ಲಿ ಹಲವಾರು ಕುಟುಂಬಗಳು ನೆಲೆನಿಂತಿದ್ದು ಉರುಳುತ್ತಿರುವ ಬಂಡೆಗಳಿಂದ ಜೀವ ಭಯ ಎದುರಿಸುತ್ತಿವೆ.

Advertisement

ಭಾಗಮಂಡಲ ಅರಣ್ಯಕ್ಕೆ ಒಳಪಡುವ ಈ ಪ್ರದೇಶ ಹಚ್ಚ ಹಸುರಿನ ಶೋಲಾ ಕಾಡುಗಳಿಂದ ಆವೃತವಾಗಿದ್ದು, ಬೆಟ್ಟದ ಮೇಲಿಂದ ಉರುಳಿದ ಬೃಹತ್‌ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳಿಗೆ ಬಡಿದು ನಿಂತಿವೆ.

ವೈಪರೀತ್ಯಗಳ ಸರಣಿ
ಶತಕಗಳಿಂದ ಇಲ್ಲಿ ನೆಲೆಯಾಗಿರುವ ಗ್ರಾಮದ ಜನರು ಇದೇ ಮೊದಲ ಬಾರಿಗೆ ಇಂತಹ ಘಟನೆಗಳನ್ನು ನೋಡುತ್ತಿದ್ದಾರೆ. ಕಳೆದ ವರ್ಷ ಸುಬ್ರಹ್ಮಣ್ಯ ಅರಣ್ಯ ಪ್ರದೇಶದ ಸುತ್ತಮುತ್ತ ಭೂಕಂಪನ ಸಂಭವಿ ಸುವುದರೊಂದಿಗೆ ಜೋಡುಪಾಲದಲ್ಲಿ ಭಾರೀ ಪ್ರಮಾಣದ ಭೂಕುಸಿತವಾಗಿ ಜೀವಗಳನ್ನು ಬಲಿ ಪಡೆದಿತ್ತು.

ಇದೇ ಸಂದರ್ಭ ಈ ಕೋಳಿಕಲ್ಲು ಬೆಟ್ಟದ ಬಂಗಾರಕೋಡಿ ಪ್ರದೇಶದ ಲ್ಲಿಯೂ ಭಾರೀ ಜಲಸ್ಫೋಟದೊಂದಿಗೆ ಭೂ ಕುಸಿತವಾಗಿತ್ತು. ಈ ವರ್ಷ ದಕ್ಷಿಣ ಕೊಡಗಿನ ತೋರಾ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿಯಾಗಿದೆ. ಈ ನಡುವೆ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ನೀಡಿದ್ದು, ಕೋಳಿಕಲ್ಲು ಬೆಟ್ಟದಲ್ಲೂ ಬೃಹತ್‌ ಗಾತ್ರದ ಬಂಡೆಕಲ್ಲುಗಳು ಉರುಳಿವೆ.

ಕೋಳಿಕಲ್ಲು ಬೆಟ್ಟದ ಇನ್ನೊಂದು ಭಾಗದಲ್ಲಿ ಅರೆಕಲ್ಲು ಪ್ರದೇಶವಿದ್ದು, ಕೊಪ್ಪರಿಗೆ ಗುಡ್ಡದಲ್ಲಿ ಮೊದಲಿಗೆ ಬಂಡೆಗಳು ಉರುಳಿದ್ದು, ಅನಂತರ ಕುಂಡಾಡು ಚಾಮಕಜೆಯಲ್ಲಿಯೂ ಉರುಳಿ ಬಂದಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.ಬಂಡೆಗಳು ಜಾರಿದ ಜಾಗದಲ್ಲಿ ಮೊದಲು ನೀರು ಹರಿಯುತ್ತಿತ್ತು. ಇದೀಗ ಇಲ್ಲವಾಗಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಆಗಿರಲಿಲ್ಲ, ಇನ್ನೂ ಮೇಲ್ಭಾಗದಲ್ಲಿ ಏನಾಗಿದೆಯೋ ಗೊತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Advertisement

ತಪ್ಪಿದ ಅಪಾಯ
ಇಲ್ಲಿ ನೈಸರ್ಗಿಕ ತೊರೆಯೊಂದು ತುಂಬಿ ಹರಿಯುತ್ತಿರುವ ಕಾರಣ ಕೆಳಭಾಗದಲ್ಲಿರುವ ಜನರಿಗೆ ಬಂಡೆಗಳು ಉರುಳಿರುವ ವಿಚಾರ ತತ್‌ಕ್ಷಣಕ್ಕೆ ಗೊತ್ತಾಗಲಿಲ್ಲ. ಬೆಟ್ಟದ ಎದುರು ಭಾಗದಲ್ಲಿರುವ ನಿವಾಸಿಗಳಿಗೆ ಗುಡುಗಿನಂತಹ ಭಾರೀ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಮರುದಿನ ಯುವಕರು ಹೋಗಿ ನೋಡಿದಾಗ ಬಂಡೆಗಳು ಗ್ರಾಮಗಳ ಕಡೆಗೆ ಉರುಳಿ ಬಂದಿರುವುದು ಗೋಚರಿಸಿವೆ. ಬಂಡೆಗಳು ಚಪ್ಪಟೆಯಾಗಿರುವ ಕಾರಣ ಮರಗಳಿಗೆ ಬಡಿದು ನಿಂತಿದ್ದು, ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.

ಭೀತಿ ಇನ್ನೂ ಇದೆ…
ಒಂದು ವೇಳೆ ಈ ಬಂಡೆ ಕಲ್ಲುಗಳು ಮರಗಳಿಂದ ಬೇರ್ಪಟ್ಟು ಮತ್ತೆ ಉರುಳಿದರೆ ಕೆಳಗಿರುವ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಬಂಡೆಗಳು ಜಾರಿ ಬಂದಿರುವ ದಾರಿಯುದ್ದಕ್ಕೂ ಇರುವ ಚಿಕ್ಕಪುಟ್ಟ ಮರ-ಗಿಡಗಳು ಧ್ವಂಸವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next