ಹೊಸದಿಲ್ಲಿ: ಸ್ವದೇಶಿ ತಂತ್ರಜ್ಞಾನದ “ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (ಪಿಎಸ್‌ಎಲ್‌ವಿ) ಮಾದರಿಯ ಐದು ರಾಕೆಟ್‌ಗಳನ್ನು ತಯಾರಿಸಿಕೊಡಲು ಆಸಕ್ತಿಯುಳ್ಳ (ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್ – ಇಒಐ) ಕಂಪೆನಿಗಳಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅರ್ಜಿಗಳನ್ನು ಆಹ್ವಾನಿಸಿದೆ. ಸೆ.6ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ತನ್ನ 50 ವರ್ಷಗಳ ಇತಿಹಾಸದಲ್ಲಿ ಖಾಸಗಿ ಕಂಪೆನಿಯವರಿಗೆ ಇಸ್ರೋ ವತಿಯಿಂದ ಈ ರೀತಿಯ ಆಹ್ವಾನ ನೀಡಲಾಗುತ್ತಿರುವುದು ಇದೇ ಮೊದಲ ಬಾರಿ.
ಒಟ್ಟು 150 ದೇಶೀಯ ಕಂಪೆನಿಗಳ ತಂಡದ ನೆರವಿನಿಂದ ಈ ರಾಕೆಟ್‌ಗಳನ್ನು ಪಡೆಯಲು ನಿರ್ಧರಿಸಲಾಗಿದ್ದು, ಈ ಹಿಂದೆ ಪಿಎಸ್‌ಎಲ್‌ವಿ ಹಾಗೂ ಜಿಎಸ್‌ಎಲ್‌ವಿ ರಾಕೆಟ್‌ಗಳು ಮತ್ತು “ಸಿಇ-20 ಕ್ರಯೋಜನಿಕ್’ ಇಂಜಿನ್‌ಗಳ ತಯಾರಿಕೆಯಲ್ಲಿ ಇಸ್ರೋ ಜತೆಗೆ ಸಹಭಾಗಿತ್ವ ಹೊಂದಿರುವ ಎಚ್‌ಎಎಲ್ ಹಾಗೂ “ಎಲ್ ಆ್ಯಂಡ್ ಟಿ’ ಸಂಸ್ಥೆಗಳು, ಹೊಸದಾಗಿ ಪಿಎಸ್‌ಎಲ್‌ವಿ ತಯಾರಿಸಲು ಮುಂದೆ ಬರಲಿರುವ ಖಾಸಗಿ ಸಂಸ್ಥೆಗಳ ಮುಂದಾಳತ್ವ ವಹಿಸಲಿವೆ ಎಂದು ನಿರೀಕ್ಷಿಸಲಾಗಿದೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರ ತಿಳಿಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್, ಈ ಆಹ್ವಾನ ವಿದೇಶಿ ಕಂಪೆನಿಗಳಿಗಿಲ್ಲ ಎಂದು ಸ್ಪಷ್ಟಪಡಿಸಿದರು. “”ಇಒಐ ಮಾದರಿಯ ಅರ್ಜಿಗಾಗಿ ಆಹ್ವಾನಿಸಲಾಗಿದೆ. ಬಹು ದಿನಗಳಿಂದಲೂ ಇಂಥದ್ದೊಂದು ಪ್ರಸ್ತಾವನೆ ಇಸ್ರೋ ಮುಂದಿತ್ತು. ಈಗ ಈ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದೇವೆ. ನಮ್ಮ ಈ ನಿರ್ಧಾರ “ಮೇಕ್ – ಇನ್- ಇಂಡಿಯಾ’ಕ್ಕೆ ಹೆಚ್ಚಿನ ಶಕ್ತಿ ತುಂಬಲಿದೆ” ಎಂದಿದ್ದಾರೆ. ವಿಕ್ರಮ್ ಸಾರಾ ಭಾಯಿ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ಪ್ರಕಾರ, ಒಂದು ಪಿಎಸ್‌ಎಲ್‌ವಿ ರಾಕೆಟ್ ತಯಾರಿಕೆಗೆ 200 ಕೋಟಿ ರೂ. ವ್ಯಯವಾಗುತ್ತದೆ. ಹಾಗಾಗಿ, ಐದು ರಾಕೆಟ್‌ಗಳಿಗೆ 1,000 ಕೋಟಿ ರೂ. ಖರ್ಚಾಗಲಿದೆ. ಆದರೆ, ಶಿವನ್ ಅವರು, ಸುದ್ದಿಗೋಷ್ಠಿಯಲ್ಲಿ ಈ ಖರ್ಚಿನ ಬಗ್ಗೆ ಪ್ರತಿಕ್ರಿಯಿಸಲು ಇಷ್ಟ ಪಡಲಿಲ್ಲ. ಖರ್ಚು ವೆಚ್ಚಗಳ ಬಗ್ಗೆ ಇಸ್ರೋದ ವ್ಯಾವಹಾರಿಕ ಶಾಖೆಯಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಎಲ್‌ಐ) ಸಂಸ್ಥೆಯೇ ನೋಡಿ ಕೊಳ್ಳಲಿದೆ ಎಂದಷ್ಟೇ ಹೇಳಿದರು.
ಈಗಾಗಲೇ ಪಿಎಸ್‌ಎಲ್‌ವಿ ತಯಾರಿಕೆಗೆ ಗೋದ್ರೆಜ್ ಮತ್ತಿತರ ಕಂಪೆನಿಗಳು ಆಸಕ್ತಿ ತೋರಿವೆ ಎಂದು ಹೇಳಲಾಗಿದೆ.