Advertisement

ಬೆಳಗಾವಿಯಲ್ಲಿ ಹೂಡಿಕೆಗೆ ರಾಕ್ ಸ್ಪೇಸ್ ಕಂಪನಿ ಆಸಕ್ತಿ, ಸಚಿವರ ಜತೆ ಮಾತುಕತೆ

11:00 PM Dec 26, 2022 | Team Udayavani |

ಬೆಳಗಾವಿ: ಅಮೆರಿಕದ ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯಲ್ಲಿ ತನ್ನ ಕ್ಲೌಡ್ ತಂತ್ರಜ್ಞಾನದ ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಪೂರ್ವಭಾವಿ ಮಾತುಕತೆ ನಡೆಸಿದೆ.

Advertisement

ಇಲ್ಲಿನ ಸುವರ್ಣ ಸೌಧದ ವಿಧಾನಪರಿಷತ್ ಮೊಗಸಾಲೆಯಲ್ಲಿ ಸೋಮವಾರ ನಡೆದ ಈ ಮಾತುಕತೆಯಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಮುಂತಾದ ಪ್ರಮುಖ ಅಂಶಗಳನ್ನು ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಕಂಪನಿಯ ಪರವಾಗಿ ಅದರ ಸಿಇಒ ಅಮರ್ ಮಲೆತೀರ ಅವರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕರ್ನಾಟಕವು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಅತ್ಯುತ್ತಮ ಕಾರ್ಯ ಪರಿಸರ ಹೊಂದಿದೆ. ಜತೆಗೆ ಸರಕಾರದ ನೀತಿಗಳು ಸಂಶೋಧನೆ ಮತ್ತು ಅಭಿವೃದ್ಧಿ, ಹಾಗೂ ಉತ್ಪಾದನೆಗೆ ಪೂರಕವಾಗಿವೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಒದಗಿಸಲು ಸೂಕ್ತ ವ್ಯವಸ್ಥೆ ಇದೆ” ಎಂದರು.

ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯಲ್ಲಿ ನೆಲೆಯೂರಿದರೆ ಅಪಾರ ಬಂಡವಾಳ ಹರಿದು ಬರಲಿದ್ದು, ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗದ ಅವಕಾಶಗಳ ಬಾಗಿಲು ತೆರೆಯಲಿದೆ. ಇದರಿಂದ ಅನಗತ್ಯ ವಲಸೆ ತಪ್ಪಿ, ಪ್ರಾದೇಶಿಕ ಅಸಮತೋಲನ ನಿವಾರಣೆಯೂ ಆಗಲಿದೆ ಎಂದು ಅವರು ನುಡಿದರು.

ಬೆಂಗಳೂರಿನ ಆಚೆಗೂ ಉದ್ಯಮಗಳು ಬರಬೇಕು ಎನ್ನುವುದು ಸರಕಾರದ ನೀತಿಯಾಗಿದೆ. ರಾಕ್ ಸ್ಪೇಸ್ ಕಂಪನಿಯು ಬೆಳಗಾವಿಯನ್ನು ಆಯ್ದುಕೊಂಡಿರುವುದು ಸ್ವಾಗತಾರ್ಹ ಎಂದರು.

Advertisement

ಚರ್ಚೆಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತ ಕೂಡ ಇದ್ದರು.

ಅಮೆರಿಕದ ರಾಕ್ ಸ್ಪೇಸ್ ಕಂಪನಿಯ ಸಿಇಒ ಅಮರ್ ಮಲೆತೀರ ಅವರು ಐಟಿ-ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಬೆಳಗಾವಿಯಲ್ಲಿ ಸೋಮವಾರ ಮಾತುಕತೆ ನಡೆಸಿದರು. ಜತೆಯಲ್ಲಿ ಕೆಡಿಇಎಂ ಸಿಇಒ ಸಂಜೀವ್ ಗುಪ್ತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next