ಧಾರವಾಡ : ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಲ್ಮಲಾ ನದಿ ಕೊಳ್ಳದ ಕುರುಚಲು ಅರಣ್ಯದ ಹನುಮಂತನಗರ ಬಡಾವಣೆಯಲ್ಲಿ ಬಲು ಅಪರೂಪದ ಹೆಬ್ಟಾವಿನ ಮರಿ (ರಾಕ್ ಪೈಥಾನ್) ಪತ್ತೆಯಾಗಿದೆ.
ಹನುಮಂತ ನಗರದ ನಿವಾಸಿ ಅನ್ನಪೂರ್ಣಾ ಹಿರೇಮಠ ಅವರ ಮನೆ ಆವರಣದಲ್ಲಿ ಪ್ರತ್ಯಕ್ಷವಾಗಿ ಕುತೂಹಲ ಮೂಡಿಸಿದ ಈ ಅಪರೂಪದ ಹೆಬ್ಟಾವಿನ ಮರಿ ಆಹಾರ ಮತ್ತು ಅಡಗುತಾಣ ಹುಡುಕಿ ಬಂದಿತ್ತು. ಹೆಬ್ಟಾವಿನ ಮರಿಯನ್ನು ರೂಪಾ ಬಸವರಾಜ ಹಿರೇಮಠ ಅವರು ಹಿಡಿದು ಸುರಕ್ಷಿತವಾಗಿ ಶಾಲ್ಮಲಾ ನದಿ ಕೊಳ್ಳದಲ್ಲಿ ಬಿಟ್ಟು ಬಂದಿದ್ದಾರೆ.
ಮೊಟ್ಟೆ ಇಡದೇ ನೇರವಾಗಿ ನೂರಾರು ಮರಿಗಳಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದಿರುವ ಈ ರಾಕ್ ಪೈಥಾನ್ ಏಷ್ಯಾ ಹೆಬ್ಟಾವು ಕವಿವಿ ತಟದ ಶಾಲ್ಮಲಾ ನದಿ ಕಣಿವೆಯಲ್ಲಿ ಸಿಕ್ಕಿರುವುದು ಈ ಪ್ರದೇಶದಲ್ಲಿ ಈ ಪ್ರಾಣಿಯ ಇರುವಿಕೆಯನ್ನು ಪುಷ್ಠೀಕರಿಸಿದೆ. ಕೇವಲ ಒಂದೇ ಮರಿ ಕಾಣ ಸಿಗುವುದು ಅಪರೂಪ. ಆದರೆ, ತಂದೆ-ತಾಯಿಯ ಮೇಲೆ ಆಹಾರಕ್ಕಾಗಿ ಅವಲಂಬಿಸದ, ಹುಟ್ಟಿದ ಕೂಡಲೇ ಸ್ವತಂತ್ರ ಪರ್ಯಟನೆ ಆರಂಭಿಸುವ ಹೆಬ್ಟಾವು ಮರಿಗಳು ಬಹುದೂರ ಕ್ರಮಿಸಿ ಬಂದಿರುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಉರಗ ತಜ್ಞರು.
ಕುರುಚಲು ಕಾಡೇ ಇವುಗಳ ಆವಾಸಸ್ಥಾನ. ಅತಿಕ್ರಮಣಗೊಂಡ ಹಿನ್ನೆಲೆ ಅನಿವಾರ್ಯವಾಗಿ ಜನನಿಬಿಡ ಪ್ರದೇಶಗಳಲ್ಲಿ ಇವು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಕವಿವಿಯ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಿಎಸ್‌ಐಆರ್ ಪೂಲ್ ಆಫೀಸರ್ ಡಾ|ಧೀರಜ್ ವೀರನಗೌಡರ.
ಬಹುತೇಕ, ವಿಷಕಾರಿ ಎಂದೇ ತಪ್ಪು ಭಾವಿಸಿ ಜನ ಗಾಬರಿಯಿಂದ ಕೊಲ್ಲುವುದು, ಗೌಜು-ಗದ್ದಲಕ್ಕೆ ಗಾಬರಿಯಾಗಿ ಗಾಡಿಗಳ ಗಾಲಿ ಬುಡಕ್ಕೆ ಸಿಕ್ಕು ಹೆಬ್ಟಾವು ಮರಿ ಅಸು ನೀಗುವುದು, ಆಹಾರ ಸಿಗದೇ, ವಾಸಸ್ಥಳ ಹೈಡ್‌ಔಟ್ ಕೊರತೆಯಿಂದ ನಾಯಿ-ಹಂದಿಗಳಿಗೆ ಆಹಾರವಾಗುತ್ತಿವೆ. ತೀರಾ ಅಪರೂಪವಾಗಿರುವ ಹೆಬ್ಟಾವಿನ ಸಂತತಿ ರಕ್ಷಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳುತ್ತಾರೆ ಸಾವಯವ ಕೃಷಿಕ ಮಂಡ್ಯಾಳದ ಕೃಷ್ಣಕುಮಾರ ಭಾಗವತ.