Advertisement

26ರಂದು ಪ್ರಾಥಮಿಕ ವಿದ್ಯಾರ್ಥಿಗಳಿಗೆ ರೋಬೋಟಿಕ್‌ ಶಿಕ್ಷಣ

08:47 AM Jan 23, 2019 | Team Udayavani |

ಬಳ್ಳಾರಿ: ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾದ ರೋಬೋಟಿಕ್‌ ಮಾದರಿಯ ಶಿಕ್ಷಣವನ್ನು ನೀಡುವ ಸಲುವಾಗಿ ಜ.26 ರಂದು ನಗರದಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಕ್ಯೂಟಿಪಿಐ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಸಂತೋಷ್‌ ಅವ್ವಣ್ಣನವರ್‌ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದ ಗುಂಟೂರು ಹಾಗೂ ಕರ್ನಾಟಕ ರಾಜ್ಯಗಳ ಅಂದಾಜು 13 ಖಾಸಗಿ ಶಾಲೆಗಳಲ್ಲಿ ಈ ರೋಬೋಟಿಕ್‌ ಮಾದರಿಯ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ರಾಜ್ಯದ ಮಡಿಕೇರಿಯ ಮೂರು ಖಾಸಗಿ ಶಾಲೆಗಳು ಹಾಗೂ ಕಲಬುರಗಿಯ ಖಾಸಗಿ ಶಾಲೆಯಲ್ಲಿ ಈ ಕುರಿತ ಪ್ರಾತ್ಯಕ್ಷಿಕೆ ಮುಗಿದಿದೆ. ಜತೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆಯವರು ಸರ್ಕಾರಿ ಶಾಲೆಗಳಲ್ಲೂ ಈ ಪದ್ಧತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ಶೈಕ್ಷಣಿಕ ಹಂತದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದರು.

ಕೇರಳ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಅಲ್ಲಿಯೂ ಕೂಡ ರೋಬೋಟಿಕ್‌ ಮಾದರಿಯ ಶಿಕ್ಷಣ ಜಾರಿಗೆ ತರಲು ನಿರ್ಧರಿಸಲಾಗಿದೆ. ಆದಷ್ಟು ಬೇಗನೆ ಮಾತುಕತೆ ಮುಗಿಯಲಿದೆ. ಅಲ್ಲದೇ, ಇದೇ ವೇಳೆ ಗೋಷ್ಠಿಯಲ್ಲಿ 8 ರಿಂದ 14 ವಯಸ್ಸಿನ ವಿದ್ಯಾರ್ಥಿಗಳು ಸುಂದರ ಮನೆ, ಬೀದಿ ದೀಪ ನಿರ್ವಹಣೆ, ನಲ್ಲಿ ನೀರು ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆಯನ್ನು ನೀಡುವ ಮೂಲಕ ವಿಶೇಷ ಗಮನ ಸೆಳೆದರು.

ರೋಬೋಟಿಕ್‌ ಮಾದರಿಯ ಶಿಕ್ಷಣವನ್ನು ಕಲಿಸಲು ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಳಿಸಿಕೊಡಲು ಪೋಷಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಜ.26 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರೌಢಶಾಲೆ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ. ಕಿರಿಯ ಪ್ರಾಥಮಿಕ ಶಾಲೆಯ ಹಂತದ ವಿದ್ಯಾರ್ಥಿಗಳಿಗೆ ಈ ಅವಕಾಶ ಇರೋದಿಲ್ಲ. ಹೀಗಾಗಿ, ರೋಬೋಟಿಕ್‌ ಮಾದರಿಯ ಶಿಕ್ಷಣ ಜಾರಿಗೆ ತರುವುದರಿಂದ ತಂತ್ರಜ್ಞಾನದ ಜ್ಞಾನ ಹೆಚ್ಚಾಗುತ್ತದೆ. ಅಲ್ಲದೇ, ಕೈಗಾರಿಕೆ ವಲಯದಲ್ಲಿ ಉದ್ಯೋಗ ಅರಸಿ ಹೋದಾಗ ಈ ರೋಬೋಟಿಕ್‌ ಮಾದರಿಯ ಶಿಕ್ಷಣ ಸಹಕಾರಿಯಾಗಲಿದೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪೋಲಾ ವಿಕ್ರಮ, ಡಾ.ಅಕ್ಷತಾ, ಪ್ರೀತಿಕ್‌ ಜೈನ್‌, ಮೀನಾ ದಿಯಾ, ಪ್ರತಿಭಾ, ತುಮಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next