ನವದೆಹಲಿ: 2014ರಲ್ಲಿ ನೀಲ್ ಘೋಷ್ ಎನ್ನುವವರು ದೆಹಲಿಯಲ್ಲಿ ಶುರುಮಾಡಿದ ರಾಬಿನ್ ಹುಡ್ ಆರ್ಮಿ, ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾನವೀಯ ಸೇವೆಯನ್ನೇ ಹಮ್ಮಿಕೊಂಡಿದೆ.
ಅದು ದೇಶದ 75 ಲಕ್ಷ ಜನರಿಗೆ ಊಟ ವಿತರಿಸಿ ಸಂಭ್ರಮಾಚರಣೆ ಮಾಡಲಿದೆ. ಹಾಗೆಯೇ ದೇಶದ ಪ್ರತೀ ನಗರಗಳಲ್ಲಿನ 75 ವ್ಯಕ್ತಿಗಳನ್ನು ಆಯ್ದುಕೊಂಡು ಅವರ ಬದುಕನ್ನು ಬದಲಿಸುವ ಉದ್ದೇಶ ಹೊಂದಿದೆ.
ರಾಬಿನ್ ಹುಡ್ ಹೆಸರು ಕೇಳಿದ ತಕ್ಷಣ ಸಾಮಾನ್ಯವಾಗಿ ಶ್ರೀಮಂತರಿಂದ ಕದ್ದು, ಬಡವರಿಗೆ ದಾನಮಾಡುವ ಕಲ್ಪನೆ ತಲೆಗೆ ಬರುತ್ತದೆ. ಆದರೆ ಈ ಸಂಘಟನೆ ಕದಿಯುವ ಕೆಲಸಕ್ಕೇ ಕೈಹಾಕುವುದಿಲ್ಲ, ಇನ್ನೂ ವಿಶೇಷವೆಂದರೆ ಸಂಘಟನೆ ಒಂದು ರೂ. ಹಣವನ್ನು ಯಾರಿಂದಲೂ ಪಡೆಯುವುದಿಲ್ಲ. ಇದಕ್ಕೊಂದು ಕಚೇರಿ, ಆಸ್ತಿಯೂ ಇಲ್ಲ. ಈ ಸಂಘಟನೆಯ ಮೂಲಕ ಯಾರು ಬೇಕಾದರೂ ಸೇವೆ ಸಲ್ಲಿಸಬಹುದು. ಬೇಕಿರುವುದು ನಿಮ್ಮ ಅಮೂಲ್ಯ ಸಮಯ ಮಾತ್ರ.
2014ರಲ್ಲಿ ಈ ಸಂಘಟನೆ ದೆಹಲಿಯಲ್ಲಿ ಶುರುವಾಯಿತು. ಇದುವರೆಗೆ ವಿಶ್ವದ 13 ರಾಷ್ಟ್ರಗಳ 360 ನಗರಗಳಲ್ಲಿ ಕೆಲಸ ಮಾಡಿದೆ. ಹತ್ತಿರಹತ್ತಿರ 10 ಕೋಟಿ ಮಂದಿಗೆ ಆಹಾರ ನೀಡಿದೆ.
ಆಹಾರ ಹಂಚಿಕೆ ಹೇಗೆ?: ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರವನ್ನು ಸಂಗ್ರಹಿಸಲಾಗುತ್ತದೆ. ವಿವಿಧ ಜನಸಮುದಾಯಗಳಿಂದಲೂ ಆಹಾರ ಪಡೆದು ಅದನ್ನು ನಿರಾಶ್ರಿತರು, ಅನಾಥರು, ಬಡವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಆಹಾರವಿಲ್ಲದೇ ಒದ್ದಾಡುವವರನ್ನು ಗುರ್ತಿಸಿ ನೀಡಲಾಗುತ್ತದೆ.