Advertisement

ಗಂಡುಮೆಟ್ಟಿದ ನೆಲದಲ್ಲಿ ‘ರಾಬರ್ಟ್‌’ ಅಬ್ಬರ

12:56 PM Feb 23, 2021 | Team Udayavani |

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬರ್ತ್‌ ಡೇಯಂದು ರಿಲೀಸ್‌ ಆಗಿದ್ದ “ರಾಬರ್ಟ್‌’ ಟ್ರೇಲರ್‌, ಬಿಡುಗಡೆಯಾದ ಒಂದೇ ವಾರದಲ್ಲಿ ಯು-ಟ್ಯೂಬ್‌ನಲ್ಲಿ 10 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ. ಸದ್ಯ “ರಾಬರ್ಟ್‌’ಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿರುವ ಸಮಯದಲ್ಲೇ ಚಿತ್ರತಂಡ, ಉತ್ತರ ಕರ್ನಾಟಕದ ಗಂಡುಮೆಟ್ಟಿದ ನೆಲ ಹುಬ್ಬಳ್ಳಿಯಲ್ಲಿ “ರಾಬರ್ಟ್‌’ ಚಿತ್ರದ ಪ್ರೀ-ರಿಲೀಸ್‌ ಕಾರ್ಯಕ್ರಮ ಆಯೋಜಿಸಲು ಮುಂದಾಗಿದೆ.

Advertisement

ಹೌದು, ಇದೇ ಫೆ. 28ರಂದು ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ಸ್‌ನಲ್ಲಿ “ರಾಬರ್ಟ್‌’ ಪ್ರೀ-ರಿಲೀಸ್‌ ಇವೆಂಟ್‌ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಟ ದರ್ಶನ್‌, ನಾಯಕಿ ಆಶಾ ಭಟ್‌ ಸೇರಿದಂತೆ “ರಾಬರ್ಟ್‌’ ಚಿತ್ರದ ಬಹುತೇಕ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ “ರಾಬರ್ಟ್‌’ ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌, “ಸಾಮಾನ್ಯವಾಗಿ ಬಹುತೇಕ ಎಲ್ಲ ಸಿನಿಮಾಗಳ ದೊಡ್ಡ ದೊಡ್ಡ ಕಾರ್ಯಕ್ರಮಗಳು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವುದು ಕಡಿಮೆ. ಈ ಬಾರಿ ಉತ್ತರ ಕರ್ನಾಟಕದ ಸಿನಿಮಾ ಪ್ರೇಕ್ಷಕರನ್ನೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ “ರಾಬರ್ಟ್‌’ ಪ್ರೀ-ರಿಲೀಸ್‌ ಇವೆಂಟ್‌ನ ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಕೋವಿಡ್‌ ನಂತರ ದರ್ಶನ್‌ ಅವರನ್ನ ಮತ್ತು ಅವರ ಸಿನಿಮಾವನ್ನು ನೋಡಬೇಕು ಎಂಬ ಉತ್ತರ ಕರ್ನಾಟಕದ ಅಭಿಮಾನಿಗಳ ಆಶಯವನ್ನು ಈ ಮೂಲಕ ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಇದನ್ನೂ ಓದಿ:‘ಕಾಲಾ ಪತ್ಥರ್‌’ ನಾಯಕಿಯಾಗಿ ಅಪೂರ್ವ

“ಫೆ. 28ರ ಸಂಜೆ 6 ರಿಂದ ಹುಬ್ಬಳ್ಳಿಯ ರೈಲ್ವೇ ಗ್ರೌಂಡ್ಸ್‌ ನಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನಾಯಕ ನಟ ದರ್ಶನ್‌ ಸೇರಿದಂತೆ ಇಡೀ “ರಾಬರ್ಟ್‌’ ಸಿನಿಮಾದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಹಾಜರಾಗಲಿದ್ದಾರೆ. ಉತ್ತರ ಕರ್ನಾಟಕ ಭಾಗದ ದರ್ಶನ್‌ ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಈಗಾಗಲೇ ಈ ಇವೆಂಟ್‌ಗೆ ತಯಾರಿಗಳು ಆರಂಭವಾಗಿದ್ದು, ಉತ್ತರ ಕರ್ನಾಟಕದಲ್ಲಿ ಇಂಥದ್ದೊಂದು ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ಸಿನಿಮಾ ತಂಡ ಉತ್ಸುಕವಾಗಿದೆ’ ಎನ್ನುತ್ತಾರೆ ನಿರ್ದೇಶಕ ತರುಣ್‌ ಸುಧೀರ್‌.

Advertisement

ಇತ್ತೀಚೆಗಷ್ಟೇ “ರಾಬರ್ಟ್‌’ ಚಿತ್ರದ ರೊಮ್ಯಾಂಟಿಕ್‌ ಹಾಡನ್ನು ಬಿಡುಗಡೆ ಗೊಳಿಸಿದ್ದ ಚಿತ್ರತಂಡ, ಮುಂಬರುವ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಚಿತ್ರದ ಮತ್ತೂಂದು ಹಾಡನ್ನು ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ.

ಒಟ್ಟಾರೆ ಈ ವರ್ಷದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌’ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಚಿತ್ರತಂಡ ಕೂಡ ಭರ್ಜರಿಯಾಗಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಸದ್ಯ ಉತ್ತರ ಕರ್ನಾಟಕದ ಸಿನಿಪ್ರಿಯ ಅಭಿಮಾನಿಗಳ ಗಮನ ಸೆಳೆಯಲು ಮುಂದಾಗಿರುವ “ರಾಬರ್ಟ್‌’ ಚಿತ್ರತಂಡ, ಅದಕ್ಕಾಗಿ ಈ ಬಾರಿ ಪ್ರೀ-ರಿಲೀಸ್‌ ಇವೆಂಟ್‌ಗಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next