Advertisement

ಮೊಬೈಲ್‌ ಆ್ಯಪ್‌ ಬಳಸಿ ರಾಬರಿ: ಚಾಲಕರಿಗೆ ಹಲ್ಲೆ

12:31 AM Oct 10, 2019 | Lakshmi GovindaRaju |

ಬೆಂಗಳೂರು: ಬೈಕ್‌ ಸೇವೆ ಒದಗಿಸುವ “ಮೊಬೈಲ್‌ ಆ್ಯಪ್‌’ನ್ನು ದುರ್ಬಳಕೆ ಮಾಡಿಕೊಂಡ ತಂಡವೊಂದು, ಒಂದೇ ದಿನ ರಾತ್ರಿ ಇಬ್ಬರು ಬೈಕ್‌ ಸವಾರರ ಮೇಲೆ ಹಲ್ಲೆ ನಡೆಸಿ ಮೊಬೈಲ್‌, ಹಣ ದೋಚಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅ. 6ರಂದು ನಸುಕಿನ ವೇಳೆಯಲ್ಲಿ ಮೂವರ ದುಷ್ಕರ್ಮಿಗಳು ಈ ಕೃತ್ಯಗಳನ್ನು ಎಸಗಿದ್ದಾರೆ. ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿರುವ ಬೈಕ್‌ ಸವಾರರಾದ ಧನೇಶ್ವರ್‌ ಬೇ ಹಾಗೂ ಅಮಲ್‌ ಸಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಧನೇಶ್ವರ್‌ “ರ್ಯಾಪಿಡೋ’ ಕಂಪನಿಯ ಸಹಭಾಗಿತ್ವದಲ್ಲಿ ಗ್ರಾಹಕರಿಗೆ ಬೈಕ್‌ ಸೇವೆ ಒದಗಿಸುವ ಕೆಲಸ ಮಾಡುತ್ತಿದ್ದು, ಅಗತ್ಯ ಇರುವ ಗ್ರಾಹಕರನ್ನು ಪಿಕ್‌ ಅಪ್‌ ಅಂಡ್‌ ಡ್ರಾಪ್‌ ಸೇವೆ ಒದಗಿಸುತ್ತಾರೆ. ರ್ಯಾಪಿಡೋ ಮೊಬೈಲ್‌ ಆ್ಯಪ್‌ ಮೂಲಕ ಗ್ರಾಹಕರು ಪಿಕ್‌ ಅಪ್‌ ಅಂಡ್‌ ಡ್ರಾಫ್ ಸೇವೆ ಬುಕ್ಕಿಂಗ್‌ ಮಾಡಬಹುದು.

ಅ.6 ರ ಮಧ್ಯರಾತ್ರಿ(12) ಗ್ರಾಹಕರೊಬ್ಬರನ್ನು ಕೂಡ್ಲು ಗೇಟ್‌ನ ಎಇಸಿಎಸ್‌ ಲೇಔಟ್‌ನಲ್ಲಿ ಡ್ರಾಪ್‌ ಮಾಡಿದ್ದರು. ಅಲ್ಲಿಂದ ಕೇವಲ 400 ಮೀಟರ್‌ ದೂರದಲ್ಲಿಯೇ ಪಿಕ್‌ ಮಾಡಲು ಗ್ರಾಹಕರೊಬ್ಬರಿಂದ ಬುಕ್ಕಿಂಗ್‌ ಬಂದಿದ್ದು ಅಲ್ಲಿಗೆ ತೆರಳಿದ್ದಾರೆ. ಅಲ್ಲಿಗೆ ಯುವಕನೊಬ್ಬ ಬಂದಿದ್ದು ಏಕಾಏಕಿ ಚಾಕು ತೆಗೆದು ಧನೇಶ್ವರ್‌ ಅವರ ಕುತ್ತಿಗೆಗೆ ಒಂದು ಬಾರಿ ಚುಚ್ಚಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ. ಜತೆಗೆ, ಅವರ ಬಳಿಯಿದ್ದ ಮೊಬೈಲ್‌ ಫೋನ್‌, ಪರ್ಸ್‌ನಲ್ಲಿದ್ದ 1200 ರೂ. ಕಿತ್ತುಕೊಂಡಿದ್ದಾನೆ.

ಅಲ್ಲದೆ ಬಲವಂತವಾಗಿ ಬೈಕ್‌ನಲ್ಲಿ ಇನ್ನು ಸ್ವಲ್ಪ ಮುಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಮತ್ತಿಬ್ಬರು ಮದ್ಯಸೇವನೆ ಮಾಡುತ್ತಿದ್ದು ಅಲ್ಲಿಯೇ ಕುಳ್ಳರಿಸಿದ್ದಾನೆ. ಈ ವೇಳೆ ಪುನಃ ಚಾಕುವಿನಿಂದ ಚುಚ್ಚಿ, ಕೊಲೆ ಮಾಡುವುದಾಗಿ ಮೂವರು ದುಷ್ಕರ್ಮಿಗಳು ಬೆದರಿಸಿದ್ದಾರೆ. ಅಷ್ಟೇ ಅಲ್ಲದೆ ಎಟಿಎಂ ಕಾರ್ಡ್‌ ಕಿತ್ತುಕೊಂಡು ಪಾಸ್‌ವರ್ಡ್‌ ಪಡೆದು ಸಮೀಪದ ಎಟಿಎಂಗೆ ತೆರಳಿ 500 ರೂ. ಡ್ರಾ ಮಾಡಿದ್ದಾರೆ.

Advertisement

ಗೂಗಲ್‌ ಪೇ ಮೂಲಕ 160 ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಧನೇಶ್ವರ್‌ ಅವರ ಕಣ್ತಪ್ಪಿಸಿ ಓಡಿದ್ದು ನಿರ್ಮಾಣಹಂತದ ಕಟ್ಟಡದಲ್ಲಿ ಅವಿತುಕುಳಿತಿದ್ದಾರೆ. ದುಷ್ಕರ್ಮಿಗಳು ಕೆಲ ಕಾಲ ಹುಡುಕಾಡಿ ಅಲ್ಲಿಂದ ತೆರಳಿದ್ದಾರೆ. ಬಳಿಕ ರಸ್ತೆ ಕಡೆಗೆ ಓಡಿ ಬಂದ ಧನೇಶ್ವರ್‌ ಸಹಾಯಕ್ಕೆ ಕೂಗಿಕೊಂಡು ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಬಳಿಕ ಬೀಟ್‌ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಬ್ಬ ಬೈಕ್‌ ಸವಾರಿಗೆ ಇರಿದು ದೋಚಿದರು!: ಅದೇ ದಿನ ರಾತ್ರಿ ಎರಡು ಗಂಟೆ ಸುಮಾರಿಗೆ ಅಮಲ್‌ ಸಿಂಗ್‌ ಎಂಬ ಬೈಕ್‌ ಸವಾರರನ್ನು ಅದೇ ರೀತಿ ಕರೆಸಿಕೊಂಡ ಮೂವರು ದುಷ್ಕರ್ಮಿಗಳು, ಅವರ ಕೈಗಳಿಗೆ ಚಾಕುವಿನಿಂದ ಇರಿದು ಕುತ್ತಿಗೆ ಬಳಿ ಚಾಕು ಇಟ್ಟು ಹೆದರಿಸಿ ಫೋನ್‌ ಕಿತ್ತುಕೊಂಡಿದ್ದಾರೆ.

ಜತೆಗೆ, ಪೇಟಿಎಂ, ಗೂಗಲ್‌ ಪೇ ಮುಖಾಂತರ 9656 ರೂ. ಹಣವನ್ನು ತಮ್ಮ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ. ಎರಡು ಕೃತ್ಯಗಳನ್ನು ಒಂದೇ ತಂಡ ನಡೆಸಿರುವ ಸಾಧ್ಯತೆಯಿದೆ ಎಂದಿರುವ ಪೊಲೀಸರು ದೂರುದಾರರ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next