ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಲಾರಿ ಚಾಲಕರನ್ನು ಹೆದರಿಸಿ, ಹಲ್ಲೆ ಮಾಡಿ ಹಣ, ಮೊಬೈಲ್‌ಗಳನ್ನು ದೋಚಿದ್ದ ಐವರು ಕಳ್ಳರನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಮೀರಜ್ ತಾಲೂಕಿನ ಅಕ್ಷಯ್ ಕಾಳೆ, ಧನಂಜಯ, ಬಾದಲ್, ಸುಮಿತ್ ಹಾಗೂ ತೆಲಂಗಾಣ ರಾಜ್ಯದ ಖಮ್ಮಂ ನಗರದ ಸುಭಾಷ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಬಂಧಿತರಿಂದ ನಾಲ್ಕು ಮೊಬೈಲ್, ಮೂರು ಸಾವಿರ ನಗದು ಹಾಗೂ ದರೋಡೆಗೆ ಬಳಸಿದ್ದ ಚಾಕು, ಕತ್ತರಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ: ಡಿ. 29 ರಂದು ಬರಗೂರು ಹ್ಯಾಂಡ್‌ಫೋಸ್ಟ್ ಬಳಿ ರಾತ್ರಿ ವೇಳೆ ಲಾರಿ ನಿಲ್ಲಿಸಿ ಚಾಲಕ ಮತ್ತು ಕ್ಲೀನರ್ ಮಲಗಿದ್ದರು. ಅಲ್ಲಿಗೆ ಧಾವಿಸಿದ ಐವರು ಕಳ್ಳರು, ಲಾರಿಯಲ್ಲಿ ಮಲಗಿದ್ದ ವರಿಂದ 2,800 ರೂ. ನಗದು, ಮೂರು ಮೊಬೈಲ್ ಕಳವು ಮಾಡಿದ್ದಾರೆ. ಜ.3ರಂದು ಬಳದರೆ ಬಳಿ ಚಾಲಕನೊಬ್ಬ ತನ್ನ ಲಾರಿಯನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಕಳ್ಳರು ಮಾರಕಾಸ್ತ್ರದಿಂದ ಹಲ್ಲೆ ಮಾಡಿ 8 ಸಾವಿರ ರೂ. ನಗದು ಒಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಚನ್ನರಾಯಪಟ್ಟಣದಲ್ಲಿ ಬಿಡಾರ ಹೂಡಿದ್ದ
ಕಳ್ಳರು, ಬಾಡಿಗೆ ನೀಡಿ ಆಟೋದಲ್ಲಿ ಹೆದ್ದಾರಿ ತೆರಳಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ಎಎಸ್ಪಿ ನಂದಿನಿ, ಡಿವೈಎಸ್ಪಿ ಬಿ.ಬಿ.ಲಕ್ಷ್ಮಣೇಗೌಡ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಜಿ.ಕುಮಾರ, ಗ್ರಾಮಾಂತರ ಠಾಣೆಯ ಪಿಎಸ್‌ಐ ಎಲ್. ಎನ್. ಕಿರಣ್ ಕುಮಾರ, ಸಿಬ್ಬಂದಿ ಎಚ್.ಸಿ.ಕುಮಾರ ಸ್ವಾಮಿ, ರವೀಶ, ಪುಟ್ಟರಾಜು, ಲೋಹಿತ, ಬೀರ ಲಿಂಗ, ಮೋಹನ, ಧರಣೇಶ, ತ್ಯಾಗರಾಜ, ಸಂತೋಷ, ಮಧು, ಶಿವರಾಜು ಇವರು ಆರೋಪಿಯನ್ನು ಬಂಧಿಸಲು ಕಾರ್ಯಪ್ರವೃತ್ತರಾಗಿದ್ದರು.