ಬೆಂಗಳೂರು: ಉದ್ಯಮಿಯೊಬ್ಬರ ಮನೆಗೆ ಕೆಲಸಕ್ಕೆಂದು ಬಂದಿದ್ದ ನೇಪಾಳ ಮೂಲದ ದಂಪತಿ ವೃದ್ಧೆಯ ಕೈ, ಕಾಲು ಕಟ್ಟಿ ಹಾಕಿ ಲಕ್ಷಾಂತರ ರೂ. ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಜೆ.ಬಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೃತ್ಯ ಎಸಗಿದ ನೇಪಾಳ ಮೂಲದ ಪ್ರತಾಪ್ ಮತ್ತು ಆತನ ಪತ್ನಿ ಸಂಗೀತಾಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಉದ್ಯಮಿ ವಿನೋದ್ ಅವರ ತಾಯಿ ಮಂಜುಳಾ(61) ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಆರೋಪಿಗಳು ಕೆಲಸಕ್ಕೆಂದು ವಿನೋದ್ ಮನೆ ಬಳಿ ಬಂದು ಮನವಿ ಮಾಡಿದ್ದರು. ಕೆಲಸಗಾರರು ಅಗತ್ಯವಿದ್ದರಿಂದ ಪ್ರತಾಪ್‌ಗೆ ಸೆಕ್ಯೂರಿಟಿ ಗಾರ್ಡ್ ಮತ್ತು ಆತನ ಪತ್ನಿಗೆ ಸಂಗೀತಾಗೆ ಮನೆ ಕೆಲಸ ಕೊಟ್ಟಿದ್ದರು.ದಂಪತಿ ಉಳಿದುಕೊಳ್ಳಲು ಉದ್ಯಮಿ ವಿನೋದ್, ತಮ್ಮ ಕೆಳಗಿನ ಮನೆಯನ್ನು ಬಿಟ್ಟುಕೊಟ್ಟಿದ್ದರು.
ಎರಡು ದಿನಗಳ ಹಿಂದೆ ವಿನೋದ್ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಮನೆಯಲ್ಲಿ ವೃದ್ಧೆ ಮಂಜುಳಾ ಒಬ್ಬರೇ ಇದ್ದರು. ಆಗ ನೇಪಾಳದ ಇತರೆ ಇಬ್ಬರುವ್ಯಕ್ತಿಗಳನ್ನು ಕರೆಸಿಕೊಂಡ ಆರೋಪಿಗಳು ವೃದ್ಧೆ ಮಂಜುಳಾರ ಕೈ,ಕಾಲು ಕಟ್ಟಿ ಹಾಕಿ, ಬೀರುವಿನ ಕೀ ಕಸಿದುಕೊಂಡು 10 ಲಕ್ಷರೂ. ನಗದು, ನಾಲ್ಕು ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಮನೆಯಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿಯೇ ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.
ಮನೆ ಮಾಲೀಕ ವಿನೋದ್ ಆರೋಪಿಗಳಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಿಲ್ಲ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.