ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಯನ್ನು ಕಾರಿಗೆ ಹತ್ತಿಸಿಕೊಂಡ ಮೂವರು ದುಷ್ಕರ್ಮಿಗಳು 4-5 ತಾಸುಗಳ ಕಾಲ ಸುತ್ತಾಡಿಸಿ ಬಳಿಕ ಮಾರಕಾಸ್ತ್ರಗಳಿಂದ ಬೆದರಿಸಿ ಹಣ ಮತ್ತು ಮೊಬೈಲ್ ದರೋಡೆ ಮಾಡಿರುವ ಘಟನೆ ಮಹಾಲಕ್ಷ್ಮೀ ಲೇ ಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತೋಷ್ ಎಂಬುವವರು ದರೋಡೆಗೊಳಗಾಗಿದ್ದು ಈ ಸಂಬಂಧ ಮಹಾಲಕ್ಷ್ಮಿಲೇಔಟ್ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಸಂತೋಷ್ ದೇವಸ್ಥಾನಕ್ಕೆ ತೆರಳಲು ಮಹಾಲಕ್ಷ್ಮಿಲೇ ಔಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದರು.
ಇದೇ ವೇಳೆ ಇಂಡಿಕಾ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಬಳಿಕ, ಏಕಾಏಕಿ ಮಾರ್ಗ ಬದಲಾವಣೆ ಮಾಡಿ ಹೆಬ್ಟಾಳ ವರ್ತುಲ ರಸ್ತೆ ಕಡೆ ಕಾರು ತಿರುಗಿಸಿದರು. ಇದರಿಂದ ಹೆದರಿದ ಸಂತೋಷ್ ಕಿರುಚಿಕೊಂಡಿದ್ದಾರೆ. ಆಗ ಕಾರಿನಲ್ಲಿದ್ದ ಆರೋಪಿಗಳು ಮಾರಕಾಸ್ತ್ರ ತೋರಿಸಿ 4-5 ಗಂಟೆಗಳ ಕಾಲ ಕಾರಿನಲ್ಲೇ ಸುತ್ತಾಡಿಸಿದ್ದಾರೆ.
ಅನಂತರ ಹೆಬ್ಟಾಳದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು ಮೊಬೈಲ್, ಹಣ ಮತ್ತು ಎಟಿಎಂ ಕಾರ್ಡ್‌ಗಳನ್ನು ಕಸಿದು ಕಾರಿನಿಂದ ನೂಕಿ ಪರಾರಿಯಾದರು ಎಂದು ಸಂತೋಷ್ ದೂರಿನಲ್ಲಿ ಉಲ್ಲೇಖೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಗವಾರ ಸರ್ಕಲ್ ಬಳಿ ಎಟಿಎಂ ಕಾರ್ಡ್ ಕಸಿದುಕೊಂಡ ದುಷ್ಕರ್ಮಿಗಳು ಸಂತೋಷ್‌ನನ್ನು ಕರೆದೊಯ್ಯುವ ಮಾರ್ಗ ಮಧ್ಯೆ ಅಂಗಡಿಯೊಂದಲ್ಲಿ ಪೇಟಿಎಂ ಮೂಲಕ ಹಣ ವರ್ಗಾವಣೆಗೆ ಯತ್ನಿಸಿದ್ದಾರೆ. ಆದರೆ, ತಾಂತ್ರಿಕ ದೋಷದಿಂದ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದಾಖಲಾಗಿದೆ.