Advertisement

ತನಿಖಾಧಿಕಾರಿಗಳ ಸೋಗಿನಲ್ಲಿ ವಾಹನ ಅಡ್ಡಗಟ್ಟಿ ವ್ಯಾಪಾರಿಯಿಂದ 14 ಲಕ್ಷ ರೂ ಅಪಹರಿಸಿದ ತಂಡ

07:18 PM Oct 24, 2020 | sudhir |

ಚಾಮರಾಜನಗರ: ಕೊಯಮತ್ತೂರಿನಿಂದ ಮೈಸೂರಿಗೆ ವ್ಯಾಪಾರಕ್ಕೆ ಬರುತ್ತಿದ್ದ ವ್ಯಾಪಾರಿಯೊಬ್ಬರ ವಾಹನ ಅಡ್ಡಗಟ್ಟಿದ ತಂಡವೊಂದು ನಾವು ನಾರ್ಕೊಟಿಕ್ ತನಿಖಾಧಿಕಾರಿಗಳೆಂದು ಹೇಳಿ 14 ಲಕ್ಷ ರೂ. ಅಪಹರಣ ಮಾಡಿ ಪರಾರಿಯಾಗಿದೆ ಎಂದು ತಮಿಳುನಾಡಿನ ವ್ಯಾಪಾರಿಯೊಬ್ಬ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Advertisement

ಶಬರಿ ಗಿರೀಶನ್ (40) ಎಂಬ ತಮಿಳುನಾಡಿನ ಈರುಳ್ಳಿ ವ್ಯಾಪಾರಿ ದೂರು ನೀಡಿದ ವ್ಯಕ್ತಿ. ಪೊಲೀಸರು ಈತನ ದೂರಿನ ಸತ್ಯಾಸತ್ಯತೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಅ.20ರಂದು ರಾತ್ರಿ 8 ಗಂಟೆ ಸಮಯದಲ್ಲಿ ಕೊಯಮತ್ತೂರಿನಿಂದ ಮೈಸೂರಿಗೆ ತೆರಳಲು ಹೋಗುತ್ತಿದ್ದಾಗ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ ನಿಂದ ಮುಂದೆ ಹೆದ್ದಾರಿಯಲ್ಲಿ ತನ್ನ ಪಿಕಪ್ ವಾಹನವನ್ನು ಬೊಲೆರೋವೊಂದರಲ್ಲಿ ಇದ್ದ ಐದು ಜನರ ತಂಡ ತಡೆಯಿತು. ಈ ವೇಳೆ ಅವರು ನಾರ್ಕೊಟಿಕ್ ಇಲಾಖೆಯವರು ಎಂದು ಹೇಳಿದ ತಂಡ ತಮ್ಮ ವಾಹನವನ್ನು ತಪಾಸಣೆ ಮಾಡಬೇಕೆಂದು ತಿಳಿಸಿ, ತನ್ನ ಪಿಕಪ್ ವಾಹನದ ಹಿಂಬದಿ ಆಸನದ ಮೇಲಿಟ್ಟಿದ್ದ ಬ್ಯಾಗ್‌ನಲ್ಲಿ 14 ಲಕ್ಷ ರೂ.ಗಳನ್ನು ಅಪಹರಿಸಿ ಪರಾರಿಯಾಗಿದೆ ಎಂದು ಶಬರಿ ಗಿರೀಶನ್ ದೂರು ಸಲ್ಲಿಸಿದ್ದಾನೆ.

ಇದನ್ನೂ ಓದಿ :ವಿಷಪ್ರಸಾದ ಪ್ರಕರಣದಿಂದ ಮುಚ್ಚಲ್ಪಟ್ಟಿದ್ದ ಕಿಚ್ಚುಗುತ್ತು ಮಾರಮ್ಮ ದೇವಾಲಯ ದರ್ಶನಕ್ಕೆ ಮುಕ್ತ

ಶಬರಿಯ ದೂರಿನ ಬಗ್ಗೆಯೇ ಪೊಲೀಸರಿಗೆ ಸಂಶಯ ಇದ್ದು, ತನ್ನ ಹಣದ ಮೂಲದ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಪೂರ್ವ ಠಾಣೆ ಎಸ್ ಐ ರವಿಕುಮಾರ್ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next