ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉತ್ತಮ ವಹಿವಾಟು ನಡೆಸುವ ಮೂಲಕ ಒಂದಿಷ್ಟು ಲಾಭ ಗಿಟ್ಟಿಸುವ ಉದ್ದೇಶದಿಂದ ಬೆಂಗಳೂರಿಗೆ ಬಂದ ಕುರಿ ವ್ಯಾಪಾರಿಗಳಿಗೆ ಕಳ್ಳರ ಕಾಟ ಶುರುವಾಗಿದೆ.
ಬಕ್ರೀದ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಕಳೆದ ಎರಡು ದಿನಗಳಿಂದ ರಾಜಧಾನಿಯ ಹಲವು ಭಾಗಗಳಲ್ಲಿ ಕುರಿ-ಮೇಕೆಗಳ ಮಾರಾಟ ಜೋರಾಗಿದೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಸೇರಿ ರಾಜ್ಯದ ಶಿರಾ, ಮಂಡ್ಯ, ಬೀದರ್, ಬಳ್ಳಾರಿ ಸೇರಿದಂತೆ ಹಲವಾರು ಭಾಗಗಳಿಂದ ಕೊಬ್ಬಿದುರಿಗಳು ನಗರಕ್ಕೆ ಆಗಮಿಸಿದ್ದು, ಖರೀದಿಯಲ್ಲಿ ನೂರಾರು ಜನರು ತೊಡಗಿಕೊಂಡಿದ್ದಾರೆ.
ಕುರಿಗಳು ಉತ್ತಮ ಬೆಲೆಗೆ ಮಾರಾಟವಾಗುತ್ತಿರುವುದು ವ್ಯಾಪಾರಿಗಳ ಖುಷಿಯನ್ನು ಹೆಚ್ಚಿಸಿರುವುದು ಒಂದಡೆಯಾದರೆ, ಮಾರಾಟಕ್ಕಾಗಿ ತಂದಿರುವ ಕುರಿಗಳು ರಾತ್ರೋ ರಾತ್ರಿ ಕಾಣೆಯಾಗುತ್ತಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ಎರಡು ದಿನಗಳಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿಯೇ 25ಕ್ಕೂ ಹೆಚ್ಚು ಕುರಿಗಳು ಕಾಣೆಯಾಗಿರುವುದು ವ್ಯಾಪಾರಿಗಳಲ್ಲಿ ಬೇಸರ ತಂದಿದೆ.
“ಪ್ರತಿವರ್ಷ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತಿದ್ದೇವೆ. ಆದರೆ, ಈ ಬಾರಿ ಎರಡು ಕುರಿಗಳು ಕಳುವಾಗಿದ್ದು, ಸಂಜೆಯಿದ್ದ ಕುರಿಗಳು ಬೆಳಗಿನ ವೇಳೆಗೆ ಮಾಯವಾಗಿವೆ. ಗುರುವಾರ ಈದ್ಗಾ ಮೈದಾನಕ್ಕೆ ಒಟ್ಟು 60 ಕುರಿಗಳೊಂದಿಗೆ ಬಂದಿದ್ದು, ಬೆಳಗಾಗುವ ವೇಳೆ 58 ಕುರಿಗಳು ಮಾತ್ರ ಇವೆ. ಕುರಿಗಳನ್ನು ಗುರುತಿಸಲು ಬಣ್ಣ ಹೆಚ್ಚಿದ್ದು, ಮೈದಾನವೆಲ್ಲ ಹುಡುಕಿದರು ಪ್ರಯೋಜನವಾಗಿಲ್ಲ. ಇದರಿಂದ ಸುಮಾರು 25 ಸಾವಿರ ರೂ. ನಷ್ಟವಾಗಿದೆ” ಎಂದು ಬಾಗೇಪಲ್ಲಿ ವ್ಯಾಪಾರಿ ನರೇಂದ್ರ ಅಳಲು ತೋಡಿಕೊಂಡರು.
ಒಂದು ಕುರಿಗಾಗಿ ದೂರು ಹೇಗೆ ನೀಡಲಿ?: “ಒಂದಿಷ್ಟು ಲಾಭಕ್ಕಾಗಿ ದೂರದ ಊರುಗಳಿಂದ ವ್ಯಾಪಾರಿಗಳು ನೂರಾರು ಕುರಿಗಳೊಂದಿಗೆ ಇಲ್ಲಿಗೆ ಬರುತ್ತಾರೆ. ಒಂದೆರಡು ಕುರಿಗಳು ಕಳುವಾಗಿವೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ, ಉಳಿದ ಕುರಿಗಳನ್ನು ಮಾರಾಟ ಮಾಡಲಾಗುವುದಿಲ್ಲ. ಈ ಕಾರಣದಿಂದಲೇ ವ್ಯಾಪಾರಿಗಳು ದೂರು ನೀಡಲು ಮುಂದಾಗುವುದಿಲ್ಲ. ಅದನ್ನೇ ಲಾಭವಾಗಿಸಿಕೊಂಡಿರುವ ಕೆಲ ಕಿಡಿಗೇಡಿಗಳು ನಿರಂತರವಾಗಿ ಕಳ್ಳತನ ಮಾಡುತ್ತಿದ್ದು, ಪೊಲೀಸರು ಅಂತಹವರನ್ನು ಬಂಧಿಸಬೇಕಿದೆ” ಎಂದು ಬೀದರ್‌ನ ವ್ಯಾಪಾರಿ ಜಿಯಾವುಲ್ಲಾ ಷರೀಫ್ ಒತ್ತಾಯಿಸಿದರು.
ಕೇವಲ ಇಬ್ಬರು ಪೇದೆಗಳ ನಿಯೋಜನೆ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ನಿತ್ಯ ಲಕ್ಷಾಂತರ ವಹಿವಾಟು ನಡೆಯುತ್ತಿದ್ದು, ಸಾವಿರಾರು ಜನರು ಭೇಟಿ ನೀಡುತ್ತಾರೆ. ಆದರೆ, ಪೊಲೀಸ್ ಇಲಾಖೆಯಿಂದ ಕೇವಲ ಇಬ್ಬರು-ಮೂವರು ಪೊಲೀಸರನ್ನು ನಿಯೋಜಿಸಿದ್ದು, ರಾತ್ರಿ ವೇಳೆ ಪೊಲೀಸರು ಗಸ್ತು ನಡೆಸುವುದಿಲ್ಲ. ವ್ಯಾಪಾರಿಗಳು ರಾತ್ರಿಯಲ್ಲಾ ಜಗರಣೆಯಿದ್ದು ಕುರಿಗಳನ್ನು ಕಾಯುತ್ತಾರೆ. ಅದರ ನಡುವೆಯೂ ಕುರಿಗಳು ಕಾಣೆಯಾಗಿರುವುದು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಿದೆ ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಪ್ರತಿವರ್ಷ ಬಕ್ರೀದ್ ಮುಗಿದ ಕೂಡಲೆ ಐದಾರು ಸಾವಿರಕ್ಕೆ ಕುರಿ ಮರಿಗಳನ್ನು ಖರೀದಿಸಿ ಒಂದು ವರ್ಷ ಸಾಕುತ್ತೇವೆ. ಒಂದಿಷ್ಟು ಲಾಭ ಬರುತ್ತೆಂಬ ಕಾರಣದಿಂದ ಬೆಂಗಳೂರಿಗೆ ಬಂದರೆ ಇಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಇದರಿಂದ ಅಸಲು ಇಲ್ಲ, ಲಾಭವೂ ಇಲ್ಲದಂತಾಗಿದೆ.
-ವೆಂಕಟೇಶ್, ಕುರಿ ವ್ಯಾಪಾರಿ