Advertisement

ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ 7ಆರೋಪಿಗಳ ಬಂಧನ; ಚಿನ್ನ, ನಗದು ವಶ

02:36 PM Mar 23, 2017 | Harsha Rao |

ಉಡುಪಿ: ಕೇರಳದ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದು ಆರೋಪಿಗಳಿಂದ 2 ಕಾರು ಹಾಗೂ ದರೋಡೆಗೈದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ಕೂಡ ವಶಪಡಿಸಿಕೊಂಡಿದ್ದಾರೆ.

Advertisement

ಈ ಪ್ರಕರಣದ ಪ್ರಮುಖ ಆರೋಪಿ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್ನ ಮಾಲೀಕ ಹರಿಕೃಷ್ಣ ಭಟ್(25),ಎರಡನೇ ಆರೋಪಿ  ಹೆಮ್ಮಾಡಿ ಸಂತೋಷ ನಗರದ ಮಹ್ಮದ್ ಇರ್ಫಾನ್(30), ಮಲ್ಪೆಯ ಜಾವೇದ್(25), ಬೆಳಪು ಅಶ್ರಫ್(34), ಹೆಮ್ಮಾಡಿಯ ಇಲಾಹಿದ್(24), ಕುಂದಾಪುರ ಕೆರ್ಗಲ್ನ ರವಿಚಂದ್ರ ಎನ್(41) ಹಾಗೂ ಕಿರಿಮಂಜೇಶ್ವರದ ಸುಮಂತ ಕುಮಾರ(24) ಎಂದು ತಿಳಿದು ಬಂದಿದೆ.  

ದಿಲೀಪ್ ಎಂಬವರು ಹರಿಕೃಷ್ಣ ಭಟ್‌ನ ಅಂಗಡಿಗೆ ಚಿನ್ನಾಭರಣ ಮಾರಾಟ ಮಾಡಲು ಬರುತ್ತಿದ್ದರು. ಹರಿಕೃಷ್ಣ ಭಟ್‌ನಿಗೆ ದಿಲೀಪರವರು ಚಿನ್ನಾಭರಣ ಹಾಗೂ ಚಿನ್ನಾಭರಣ ಮಾರಾಟ ಮಾಡಿದ ನಗದು ಹಣ ತೆಗೆದುಕೊಂಡು ಒಬ್ಬರೇ ಹೋಗುವ ವಿಚಾರ ಗೊತ್ತಿದ್ದು, ಇತರ ಆರೋಪಿಗಳೊಂದಿಗೆ ಸೇರಿ ದಿಲೀಪ್‌ರವರನ್ನು ದರೋಡೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು.

ಈ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ ಪ್ರಕರಣವಾಗಿದ್ದುದರಿಂದ ಜಿಲ್ಲಾ ಪೊಲೀಸ್‌ ವತಿಯಿಂದ 5 ತಂಡಗಳನ್ನುರಚನೆ ಮಾಡಿ ಆರೋಪಿ ಹಾಗೂ ಸೊತ್ತು ಪತ್ತೆಗಾಗಿ ವಿವಿಧ ಕೆಲಸಗಳಲ್ಲಿ ನೇಮಕ ಮಾಡಲಾಗಿತ್ತು.

ಸವಾಲಿನ ಪ್ರಕರಣ:
ಮಾ. 17ರಂದು ಚಿನ್ನದ ವ್ಯಾಪಾರಿ ದಿಲೀಪ್‌ ಟಿ.ಡಿ. ಅವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರೆಂದು ಹೇಳಿ ಬಲವಂತವಾಗಿ 40 ಲ. ರೂ. ಮೌಲ್ಯದ ಚಿನ್ನಾಭರಣ ಹಾಗೂ 2.57 ಲ. ರೂ. ನಗದು ದೋಚಿರುವುದಾಗಿಯೂ, ಕಾರ್ಕಳ ಮಾರ್ಗವಾಗಿ ಕರೆದುಕೊಂಡು ಹೋದರು ಎನ್ನುವುದಾಗಿಯೂ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಬಸ್ಸಿನ ಚಾಲಕ, ಪ್ರಯಾಣಿಕರ ವಿಚಾರಣೆ ನಡೆಸಿದಾಗ ದಿಲೀಪ್‌ ಹಾಗೂ ಮತ್ತಿಬ್ಬರು ಹಿಂದಿನ ಸೀಟಿನಲ್ಲಿ ಕುಳಿತವರು ಆತ್ಮೀಯರಂತೆ ಮಾತನಾಡುತ್ತಿದ್ದು, ಈಶ್ವರನಗರದಲ್ಲಿ ಒಟ್ಟಿಗೇ ಇಳಿದು ಹೋದರು ಎಂದು ಹೇಳಿಕೆ ನೀಡಿದ್ದರು.

Advertisement

ಇದರಿಂದ ಪ್ರಕರಣದಲ್ಲಿ ದೂರುದಾರರ ವಿರುದ್ಧವೇ ಅನುಮಾನ ಮೂಡಿಸುವಂತಿದ್ದು, ಚಿನ್ನದ ಸ್ಮಗ್ಲಿಂಗ್‌ ನಡೆಯುತ್ತಿರುವ ಗುಮಾನಿ ಕೇಳಿ ಬಂದಿತ್ತು. ಈ ಸಂಬಂಧ ಕೇರಳದ ತೃಶ್ಶೂರ್‌ಗೂ ಒಂದು ಪೊಲೀಸ್‌ ತಂಡವನ್ನು ಕಳುಹಿಸಿ ಮಾಹಿತಿ ಕಲೆ ಹಾಕಲಾಗಿತ್ತು.

ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಟಿ. ಬಾಲಕೃಷ್ಣ ಐಪಿಎಸ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ವಿಷ್ಣುವರ್ಧನ, ಕೆಎಸ್‌ಪಿಎಸ್ ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.ಜೆ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಸಿರುತ್ತಾರೆ.

ಈ ಕಾರ್ಯಾಚರಣೆಗೆ ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕರಾದ ಶ್ರೀ ಹರಿಶೇಖರನ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದು ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next