ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಅಮಾಯಕರನ್ನು ಎಲೆಕ್ಟ್ರಿಕ್ ಕಾರಿಗೆ ಹತ್ತಿಸಿ ಕೊಂಡು ದರೋಡೆ ಮಾಡುತ್ತಿದ್ದ ಮೂವರು ದರೋಡೆ ಕೋರರನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತರು. 1 ಕಾರು, 1 ಚಿನ್ನದ ಕಿವಿರಿಂಗ್, 10 ಸಾವಿರ ರೂ. ನಗದು, 3 ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯದ 2 ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯ 1 ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರ ಪೈಕಿ ನವೀನ್ ಇತ್ತೀಚಿಗೆ ಟ್ರಾವೆಲ್ಸ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ ಹಳದಿ ಬೋರ್ಡ್‌ನ ಎಲೆಕ್ಟ್ರಿಕ್ ಟಾಟಾ ಟಿಗೋರ್ ಕಾರನ್ನೇ ಆರೋಪಿಗಳು ಕೃತ್ಯ ಎಸಗಲು ಬಳಸುತ್ತಿದ್ದರು. ಗೊರಗುಂಟೆಪಾಳ್ಯ- ನಾಯಂಡ ಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ರಾತ್ರಿ ವೇಳೆ ಬಸ್‌ಗಾಗಿ ಕಾಯುವವರನ್ನು ಗುರಿಯಾಗಿಸಿಕೊಂಡು “ಲಿಫ್ಟ್ ಕೊಡುವುದಾಗಿ’ ಕಾರು ಹತ್ತಿಸಿಕೊಳ್ಳುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡ ಇನ್ನಿಬ್ಬರು ಆರೋಪಿಗಳು ಕತ್ತಿನ ಬಳಿ ಡ್ಯಾಗರ್ ಇಟ್ಟು ಬೆದರಿಸುತ್ತಿದ್ದರು. ಆ ವೇಳೆ ಮ್ಯೂಸಿಕ್ ಸಿಸ್ಟಂ ಸೌಂಡ್‌ಅನ್ನು ಜೋರಾಗಿ ಇಡುತ್ತಿದ್ದರು. ಹೀಗಾಗಿ ಪ್ರಯಾಣಿಕ ಚೀರಾಡಿದರೆ ಯಾರ ಗಮನಕ್ಕೂ ಬರುತ್ತಿರಲಿಲ್ಲ. ದರೋಡೆ ಮಾಡಿ ಜೇಬಿನಲ್ಲಿರುವ ದುಡ್ಡಿನ ಜೊತೆಗೆ ಗೂಗಲ್ ಪೇ, ಫೋನ್ ಪೇ ಮೂಲಕವೂ ಸಾವಿ ರಾರು ರೂ. ವರ್ಗಾವಣೆ ಮಾಡುತ್ತಿದ್ದರು. ಮಾರ್ಗ ಮಧ್ಯೆ ಆರೋಪಿಗಳ ಮೊಬೈಲ್ ಕಸಿದುಕೊಂಡು ಕಾರಿನಿಂದ ಇಳಿಸಿ ಪರಾರಿಯಾಗುತ್ತಿದ್ದರು. ಗೊರಗುಂಟೆಪಾಳ್ಯ ಸಿಗ್ನಲ್, ಸುಮ್ಮನಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಮೂರು ದಿನಕ್ಕೊಮ್ಮೆ ಕೃತ್ಯ ಎಸಗುತ್ತಿದ್ದರು.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಗಾರೆ ಕೆಲಸ ಮಾಡುತ್ತಿದ್ದ ಮಾಗಡಿ ತಾಲೂಕಿನ ನಿವಾಸಿ ಸಂತೋಷ್ ಬಸವರಾಜ್ ಹಾನಗಲ್‌ನಲ್ಲಿರುವ ಮಾವನ ಮನೆಯಿಂದ ಯಶವಂತಪುರಕ್ಕೆ ಸೆ.2ರಂದು ಮುಂಜಾನೆ 5 ಗಂಟೆಗೆ ಬಂದಿದ್ದರು. ಸುಮನಹಳ್ಳಿ ಜಂಕ್ಷನ್ ಬಳಿ ಮಾಗಡಿಗೆ ತೆರಳುವ ಬಸ್‌ಗಾಗಿ ಕಾಯುತ್ತಿದ್ದರು. ಆ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಆರೋಪಿಗಳು ಬಸವರಾಜ್‌ನನ್ನು ಗಮನಿಸಿದ್ದರು. ನಾವೂ ಮಾಗಡಿಗೆ ಹೋಗುತ್ತಿದ್ದು, ಲಿಫ್ಟ್ ಕೊಡುವುದಾಗಿ ಬಸವರಾಜ್‌ನನ್ನು ಕಾರಿಗೆ ಹತ್ತಿಸಿಕೊಂಡಿದ್ದರು. ಕಾರು ಕೊಂಚ ದೂರ ಹೋಗುತ್ತಿದ್ದಂತೆ ಮೂವರ ಪೈಕಿ ಓರ್ವ ಆರೋಪಿಯು ಚೂರಿ ತೋರಿಸಿ ದುಡ್ಡು ಕೊಡುವಂತೆ ಬೆದರಿಸಿ ಹಲ್ಲೆ ನಡೆಸಿ ಬಸವರಾಜ್ ಜೇಬಿನಲ್ಲಿದ್ದ 2,500 ರೂ. ಕಸಿದುಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮೊಬೈಲ್‌ನಿಂದ ಆನ್ ಲೈನ್ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಬಸವರಾಜ್‌ನಿಂದ 2,500 ರೂ. ಹಾಕಿಸಿಕೊಂಡಿದ್ದಾರೆ. ಬಳಿಕ ನೆಲಮಂಗಲದ ಸೋಂಡೇಗೊಪ್ಪ ಬಳಿ ಮಾರ್ಗ ಮಧ್ಯೆ ಬಸವರಾಜ್‌ನನ್ನು ಇಳಿಸಿ ಪರಾರಿಯಾಗಿದ್ದರು. ಇತ್ತ ಬಸವರಾಜ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಕಾರ್ಯ ಪ್ರವೃತ್ತರಾದ ಪೊಲೀಸರು ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳ ಕಾರಿನ ನಂಬರ್ ಹಾಗೂ ಇನ್ನಿತರ ಮಾಹಿತಿ ಸಿಕ್ಕಿತ್ತು. ಕೂಡಲೇ ತಾಂತ್ರಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇದೀಗ ಆರೋಪಿಗಳು ಇದೇ ರೀತಿ ಎಷ್ಟು ಜನರನ್ನು ದರೋಡೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.