Advertisement

10 ಲಕ್ಷ ಬಚ್ಚಿಟ್ಟು ದರೋಡೆ ನಾಟಕವಾಡಿದ ವ್ಯಾಪಾರಿ!

09:56 AM Jan 21, 2023 | Team Udayavani |

ಬೆಂಗಳೂರು: ಸಿಸಿಬಿ ಪೊಲೀಸರ ಸೋಗಿನಲ್ಲಿ ವ್ಯಾಪಾರಿಯನ್ನು ದರೋಡೆ ಮಾಡಿ 10 ಲಕ್ಷ ರೂ. ದೋಚಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಅಸಲಿಗೆ ಸಾಲ ತೀರಿಸುವ ಉದ್ದೇಶದಿಂದ ಉದ್ಯಮಿಯೊಬ್ಬರಿಗೆ ಸೇರಿದ 10 ಲಕ್ಷ ರೂ. ಅನ್ನು ಲಪಟಾಯಿಸಲು ದೂರುದಾರನೇ ದರೋಡೆ ನಾಟಕವಾಡಿರುವುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ದೂರು ಸಲ್ಲಿಸಿದ್ದ ಪಾದರಕ್ಷೆ ಅಂಗಡಿ ಮಾಲೀಕ ಮೂಲರಾಮ್‌(37) ನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಭಾರತ ಮೂಲದ ಮೂಲರಾಮ್‌ ನಗರದ ಮನವರ್ತಪೇಟೆಯಲ್ಲಿ “ಮೆಟ್ರೋ ಶೂ ಏಜೆನ್ಸಿ’ ಪಾದರಕ್ಷೆ ಮಾರಾಟ ಮಳಿಗೆ ಹೊಂದಿದ್ದ. ಮೂಲರಾಮ್‌ನ ನೆರೆಯ ಊರಿನ ರಮೇಶ್‌ ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು, ಪರಿಚಿತ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಡ್ಡಿಗೆ ಹಣ ನೀಡುತ್ತಾರೆ. ಅವರು ವ್ಯಾಪಾರಿಗಳಿಗೆ ಕೊಡುತ್ತಿದ್ದ ಹಣವನ್ನು ಮೂಲರಾಮ್‌ ಸಂಗ್ರಹಿಸಿ ವಾಪಸ್‌ ರಮೇಶ್‌ ಅವರಿಗೆ ನೀಡುತ್ತಿದ್ದ. ಅದರಂತೆ ರಮೇಶ್‌ ಜ.13ರಂದು ಸಂಜೆ 4.30ಕ್ಕೆ ಮೂಲರಾಮ್‌ಗೆ ಕರೆ ಮಾಡಿ ಕೆಲವು ವ್ಯಾಪಾರಿಗಳಿಂದ ಹಣ ಸಂಗ್ರಹಿಸಿಕೊಂಡು ಬರುವಂತೆ ಸೂಚಿಸಿದ್ದರು. ಮೂಲರಾಮ್‌ ವ್ಯಾಪಾರಿಗಳಿಂದ 10 ಲಕ್ಷ ರೂ. ಸಂಗ್ರಹಿಸಿದ್ದ. ಆ ಹಣವನ್ನು ರಮೇಶ್‌ಗೆ ತಲುಪಿಸುವ ಬದಲು ತನ್ನ ಅಂಗಡಿಯ ಗೋದಾಮಿನಲ್ಲಿ ಬಚ್ಚಿಟ್ಟಿದ್ದ. ಬಳಿಕ ಮನೆಯಲ್ಲಿದ್ದ ಬ್ಯಾಗ್‌ನಲ್ಲಿ ಹಳೆ ಬಟ್ಟೆ ತುಂಬಿಕೊಂಡು ಮೈಸೂರು ರಸ್ತೆಯ ಸಿರ್ಸಿ ಸರ್ಕಲ್‌ ಬಳಿ ಬೈಕ್‌ ನಲ್ಲಿ ಬಂದು ಖಾಲಿ ಜಾಗದಲ್ಲಿ ಬ್ಯಾಗ್‌ ಎಸೆದಿದ್ದ. ಬಳಿಕ ತನ್ನ ಕೈಗೆ ತಾನೇ ಬ್ಲೇಡ್‌ನಿಂದ ಗಾಯಗೊಳಿಸಿದ್ದ.

ಅಲ್ಲಿಂದ ನೇರವಾಗಿ ಪೊಲೀಸ್‌ ಠಾಣೆಗೆ ಬಂದು “ಸಿಸಿಬಿ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ನನ್ನನ್ನು ಅಡ್ಡಗಟ್ಟಿ ಹಲ್ಲೆಗೈದು 10 ಲಕ್ಷ ರೂ.ದರೋಡೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಸುಳ್ಳು ದೂರು ನೀಡಿದ್ದ.

ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಧಾವಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಮೂಲರಾಮ್‌ನನ್ನು ದರೋಡೆ ಮಾಡಿದ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಅನುಮಾನದ ಮೇರೆಗೆ ಮೂಲರಾಮ್‌ನನ್ನೇ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕತೆ ಬೆಳಕಿಗೆ ಬಂದಿದೆ.

Advertisement

ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದೆ. ಹೀಗಾಗಿ 10 ಲಕ್ಷ ರೂ. ಅನ್ನು ತನ್ನದಾಗಿಸಿಕೊಳ್ಳಲು ದರೋಡೆ ನಾಟಕವಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next