ಬೆಂಗಳೂರು: ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಸಾಫ್ಟ್ ವೇರ್ ಎಂಜಿನಿಯರ್ ಜತೆ ಜಗಳ ತೆಗೆದು, ಆತನನ್ನು ಬೈಕ್‌ನಲ್ಲಿ ಅಪಹರಿಸಿ ದರೋಡೆ ಮಾಡಿದ್ದ 7 ಮಂದಿ ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಾಡುಬೀಸನಹಳ್ಳಿಯ ರೂಪೇಶ್, ಪ್ರಶಾಂತ್, ಅಭಿ, ಪುನೀತ್, ಪಣತ್ತೂರಿನ ನವೀನ್, ಮೋಹನ್, ಸುದರ್ಶನ್ ಬಂಧಿತರು. ಆರೋಪಿಗಳು ಆ.20ರಂದು ರಾತ್ರಿ 10.30ರ ಸುಮಾರಿಗೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಪೆಟ್ಟಿಗೆ ಅಂಗಡಿ ಬಳಿ ಆಂಧ್ರಪ್ರದೇಶ ಮೂಲದ ಟೆಕಿ ಮಹೇಶ್(24) ಎಂಬಾತನನ್ನು ಅಪಹರಿಸಿ, ದರೋಡೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.
ಆಂಧ್ರ ಮೂಲದ ಮಹೇಶ್, ನಗರದ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರೊಂದಿಗೆ ವರ್ತೂರಿನ ಮಧುರನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಆ.20ರಂದು ಕಂಪನಿಗೆ ರಜೆ ಇದ್ದ ಕಾರಣ ಸ್ನೇಹಿತರಾದ ಗಣೇಶ್, ಹೇಮಂತ, ವೆಂಕಟೇಶ್, ತರುಣ್ ಜತೆ ಮೂರು ಬೈಕ್‌ಗಳಲ್ಲಿ ಮೆಜೆಸ್ಟಿಕ್‌ನ ಮಂಡಿ ಹೋಟೆಲ್‌ಗೆ ಬಂದು ಊಟ ಮಾಡಿ ರಾತ್ರಿ 10.30ರ ಸುಮಾರಿಗೆ ಮನೆಗೆ ವಾಪಸ್ ತೆರಳುತ್ತಿದ್ದರು. ಮಾರ್ಗ ಮಧ್ಯೆ ಕಾಡುಬೀಸನಹಳ್ಳಿಯ ಕ್ರೋಮಾ ರಸ್ತೆಯ ಪೆಟ್ಟಿಗೆ ಅಂಗಡಿಯಲ್ಲಿ ಬಾಳೆಹಣ್ಣು ತಿನ್ನಲು ಬೈಕ್ ನಿಲ್ಲಿಸಿದ್ದಾರೆ. ಅದೇ ವೇಳೆ ಆರೋಪಿ ರೂಪೇಶ್, ಪೆಟ್ಟಿಗೆ ಅಂಗಡಿ ಮಾಲೀಕನ ಜತೆಗೆ ಜಗಳ ಮಾಡುತ್ತಿದ್ದ.
ಈ ನಡುವೆ ಮಹೇಶ್ ಮಧ್ಯಪ್ರವೇಶಿಸಿ ಬಾಳೆಹಣ್ಣಿಗೆ ಎಷ್ಟು ದುಡ್ಡು ಎಂದು ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಕೋಪಗೊಂಡ ರೂಪೇಶ್, “ನಾವಿಬ್ಬರು ಮಾತನಾಡುವಾಗ ನೀನು ಮಧ್ಯಪ್ರವೇಶಿಸಿ ಡಿಸ್ಟರ್ಬ್ ಮಾಡುತ್ತಿಯಾ’ ಎಂದು ಮಹೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಪಕ್ಕದ ಸ್ಮಶಾನದಲ್ಲಿ ಸ್ನೇಹಿತನೊಬ್ಬನ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಇತರೆ ಆರೋಪಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಮಹೇಶ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ. ಅದರಿಂದ ಗಾಬರಿಗೊಂಡ ಮಹೇಶ್ ಸ್ನೇಹಿತರು ಬೈಕ್‌ಗಳಲ್ಲಿ ತಪ್ಪಿಸಿಕೊಂಡಿದ್ದರು. ಆಗ ಮಹೇಶ್‌ನನ್ನು ಹಿಡಿದುಕೊಂಡ ಆರೋಪಿಗಳು, ದ್ವಿಚಕ್ರ ವಾಹನ ಸಮೇತ ಸ್ಮಶಾನಕ್ಕೆ ಕರೆದೊಯ್ದಿದ್ದಾರೆ. ಬಳಿಕ ಪೆಟ್ಟಿಗೆ ಅಂಗಡಿ ಬಳಿಯಿಂದ ತಪ್ಪಿಸಿಕೊಂಡು ಹೋದ ಸ್ನೇಹಿತರನ್ನು ಕರೆಸು ಎಂದು ಬಿಯರ್ ಬಾಟಲಿಯಿಂದ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಮಹೇಶ್‌ನನ್ನು ಹಲವೆಡೆ ಸುತ್ತಾಡಿಸಿ ಮಧ್ಯರಾತ್ರಿ 1.30ರ ಸುಮಾರಿಗೆ ಗುಂಜೂರು ರಸ್ತೆಗೆ ಕರೆದೊಯ್ದು ಮತ್ತೂಮ್ಮೆ ಹಲ್ಲೆ ನಡೆಸಿ, ಮೊಬೈಲ್ ಗಳು ಹಾಗೂ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಮಹೇಶ್ ನಡೆದುಕೊಂಡು ಮನೆಗೆ ಬಂದು ಸ್ನೇಹಿತರೊಂದಿಗೆ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಹಲ್ಲೆ, ಅಪಹರಣ, ದರೋಡೆ ಆರೋಪದಡಿ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.