ಹಳೆಯಂಗಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಕದಿಕೆ ಎಂಬಲ್ಲಿನ ಮೂರು ದೈವಸ್ಥಾನ ಮತ್ತು ಎರಡು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನ-ಬೆಳ್ಳಿಯ ಆಭರಣ, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಕಳ್ಳರ ಪಾಲಾಗಿದೆ.
ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದ ಒಳಗೆ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು, ಬೆರಳಚ್ಚು, ಶ್ವಾನದಳ ಭೇಟಿಕೊಟ್ಟಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕದಿಕೆಯಲ್ಲಿರುವ ಸುವರ್ಣ ಮೂಲಸ್ಥಾನ, ಸಾಲ್ಯಾನ್ ಮೂಲಸ್ಥಾನ ಹಾಗೂ ಎರಡು ಮನೆಯೊಂದರ ಕುಟುಂಬಕ್ಕೆ ಸೇರಿದ ದೈವಸ್ಥಾನಕ್ಕೆ ಕಳ್ಳರು ಲಗ್ಗೆಯಿಟ್ಟಿದ್ದಾರೆ. ಸಾಲ್ಯಾನ್ ಮೂಲಸ್ಥಾನ ಎರಡು ತಿಂಗಳ ಹಿಂದಷ್ಟೇ ನೂತನವಾಗಿ ಜೀರ್ಣೋದ್ಧಾರಗೊಂಡಿತ್ತು. ಸುವರ್ಣ ಮೂಲಸ್ಥಾನದಲ್ಲಿ ದೈವಗಳಿಗೆ ಇತ್ತೀಚೆಗೆ ನೇಮೋತ್ಸವ ನಡೆದಿದ್ದು ಕಾಣಿಕೆಡಬ್ಬಿಯಲ್ಲಿ ಹಣ ಸಂಗ್ರಹವಾಗಿತ್ತು. ಮುಂದಿನ ವಾರ ಕಾಣಿಕೆ ಡಬ್ಬಿ ತೆರೆಯಲು ಕುಟುಂಭಿಕರು ನಿರ್ಧರಿಸಿದ್ದರು.
ಈ ಮಧ್ಯೆ ಕಳ್ಳತನವಾಗಿದ್ದು ಹಣವನ್ನು ತೆಗೆದುಕೊಂಡು ಹೋಗಿರುವ ಕಳ್ಳರು ಡಬ್ಬಿಯನ್ನು ಪಕ್ಕದ ಗದ್ದೆಯಲ್ಲಿ ಎಸೆದುಹೋಗಿದ್ದಾರೆ. ಇಲ್ಲೇ ಪಕ್ಕದ ಇನ್ನೊಂದು ದೈವಸ್ಥಾನಕ್ಕೂ ಕಳ್ಳರು ನುಗ್ಗಿದ್ದು ಬೆಳ್ಳಿಯ ಮೂರ್ತಿಯನ್ನು ಕದ್ದೊಯ್ದಿದ್ದಾರೆ. ಚಿನ್ನದ ಕರಿಮಣಿ ಸರ, ಬೆಳ್ಳಿಯ ಸಾಮಾಗ್ರಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈಯಲಾಗಿರುವುದು ಕೃತ್ಯದಲ್ಲಿ ಸ್ಥಳೀಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕಳುವ ಮಾಡಿದ ವಸ್ತುಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.