ನವದೆಹಲಿ: ನಾಲ್ವರು ದರೋಡೆಕೋರರು ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಸುಮಾರು 26 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಅಲ್ಲದೇ ತಮ್ಮ ಗುರುತು ಹಿಡಿಯಲು ಸಾಧ್ಯವಾಗಬಾರದು ಎಂದು ಅಂಗಡಿಯೊಳಗಿದ್ದ ಸಿಸಿಟಿವಿ ಡಿಜಿಟಲ್ ರೆಕಾರ್ಡರ್ ಅನ್ನು ಕೂಡಾ ತೆಗೆದುಕೊಂಡು ಹೋಗಿದ್ದ ಘಟನೆ ದೆಹಲಿಯ ಬೇಗಂಪೇಟ್ ನಲ್ಲಿ ನಡೆದಿತ್ತು. ಆದರೆ ಕಳ್ಳರು ಕೆಲವೇ ಹೊತ್ತಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು!
ಶನಿವಾರ ಮಧ್ಯಾಹ್ನ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾಲೀಕ ಗುಲ್ಶನ್ ಒಬ್ಬರೇ ಇದ್ದ ವೇಳೆ ಮೊದಲು ಇಬ್ಬರು ಗ್ರಾಹಕರ ರೀತಿ ಆಗಮಿಸಿದ್ದರು. ನಂತರ ಚಿನ್ನಾಭರಣ ನೋಡಲು ಆರಂಭಿಸಿದ್ದರು. ನಂತರ ಇನ್ನಿಬ್ಬರು ಜತೆಗೂಡಿದ್ದರು. ಆದರೆ ನಾಲ್ವರು ಮುಖಕ್ಕೆ ಯಾವುದೇ ರೀತಿಯಲ್ಲೂ ಮುಸುಕು ಧರಿಸಿರಲಿಲ್ಲವಾಗಿತ್ತು.
ನಾಲ್ವರು ಪಿಸ್ತೂಲ್ ಹಿಡಿದಿದ್ದು, ಅಂಗಡಿ ಮಾಲೀಕನನ್ನು ಥಳಿಸಿ ಸುಮಾರು 25 ಲಕ್ಷ ರೂಪಾಯಿ ಚಿನ್ನಾಭರಣ ಹಾಗೂ ಒಂದು ಲಕ್ಷ ರೂಪಾಯಿ ನಗದನ್ನು ದೋಚಿದ್ದರು. ಆದರೆ ಲಾಕರ್ ತೆಗೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉಳಿದ ಚಿನ್ನಾಭರಣಗಳು ಉಳಿದುಕೊಂಡಿರುವುದಾಗಿ ವರದಿ ತಿಳಿಸಿದೆ.
ದರೋಡೆ ಮಾಡಿ ಹೊರಡುವಾಗ ತರಾತುರಿಯಲ್ಲಿ ಸಿಸಿಟಿವಿಯ ಡಿವಿಆರ್ ತೆಗೆದು ಬ್ಯಾಗ್ ನೊಳಕ್ಕೆ ಹಾಕಿಕೊಂಡು ಹೋಗಿದ್ದರು. ಆದರೆ ಅದು ನಿಜಕ್ಕೂ ಸಿಸಿಟಿವಿ ಡಿವಿಆರ್ ಆಗಿರಲಿಲ್ಲವಾಗಿತ್ತು, ಅದು ಟಿವಿಯ ಸೆಟ್ ಆಫ್ ಬಾಕ್ಸ್ ಆಗಿತ್ತು!
ಸಿಸಿಟಿವಿಯ ನಿಜವಾದ ಡಿವಿಆರ್ ಅಲ್ಲಿಯೇ ಬಿಟ್ಟು ಹೋಗಿದ್ದರು. ಪೊಲೀಸರು ಕೂಡಲೇ ಸಿಸಿಟಿವಿ ಫೂಟೇಜ್ ಪರಿಶೀಲಿಸಿ, ಗುರುತು ಪತ್ತೆ ಹಚ್ಚಿದ ಪೊಲೀಸರು ಕೆಲವೇ ಹೊತ್ತಿನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದರು. ನಂತರ ಉಳಿದವರನ್ನೂ ಬಂಧಿಸಲಾಯಿತು ಎಂದು ಸಹಾಯಕ ಪೊಲೀಸ್ ಕಮಿಷನರ್ ಎಸ್ ಡಿ ಮಿಶ್ರಾ ತಿಳಿಸಿದ್ದಾರೆ.