ಕಾರ್ಕಳ: ದಾರಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತಿದ್ದ ವ್ಯಕ್ತಿಯನ್ನು ವಾಹನದಲ್ಲಿ ಬಂದವರು ಬಸ್ ಸ್ಟ್ಯಾಂಡ್ ಗೆ ಬಿಡುತ್ತೇವೆ ಎಂದು ನಂಬಿಸಿ ನಗದು, ಮೈಮೇಲಿನ ಚಿನ್ನಾಭರಣ ಕದ್ದೊಯ್ದ ಘಟನೆ ಜ.5ರಂದು ನಡೆದಿದೆ.
ರೆಂಜಾಳ ಕಡಂಬಾಕ್ಯಾರ್ ನಿವಾಸಿ ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದರು. ಪೂಜಾ ಕಾರ್ಯಕ್ರಮಕ್ಕೆಂದು ಊರಿಗೆ ಬಂದವರು.
ಜ.5ರಂದು ರಾತ್ರಿ ರೆಂಜಾಳದ ಮನೆಯಿಂದ ಹೊರಟು ಬಸ್ಸಿಗೆ ತಡವಿದೆ ಎಂದು ಬಾರಿಗೆ ಹೋಗಿ ಮದ್ಯ ಸೇವಿಸಿದ್ದರು. ಬಳಿಕ ಕಾಲ್ನಡಿಗೆಯಲ್ಲಿ ಕಾರ್ಕಳ ಬಸ್ ಸ್ಟ್ಯಾಂಡ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ವ್ಯಕ್ತಿಗಳು ವಾಹನದಲ್ಲಿ ಬಂದು ಎಲ್ಲಿಗೆ ಹೋಗುತ್ತಿದ್ದಿರಿ ಎಂದು ವಿಚಾರಿಸಿ ನಾವು ಬಸ್ ನಿಲ್ದಾಣಕ್ಕೆ ಬಿಡುತ್ತೇವೆಂದು ಹೇಳಿ ನಂಬಿಸಿ ಆತನ ಶರೀರದಲ್ಲಿದ್ದ ಚಿನ್ನ ಹಾಗೂ ಹಣವನ್ನು ಕದ್ದೊಯದ್ದಿದ್ದಾರೆ.
ಮದ್ಯದ ನಶೆ ಇಳಿಯುವ ಹೊತ್ತಿಗೆ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮೆಂತೆ ಚೈನ್, ಉಂಗುರ-1 ಮತ್ತು ನವರತ್ನ ಉಂಗುರ ಮತ್ತು ಕಿಸೆಯಲ್ಲಿದ್ದ ನಗದು ರೂಪಾಯಿ 1500 ಹಾಗೂ ಮೊಬೈಲ್ ಅನ್ನು ಎಗರಿಸಿದ್ದಾರೆ.
ಕಳವಾದ ನಗದು ಹಣ ಮತ್ತು ವಸ್ತುಗಳ ಒಟ್ಟು ಮೌಲ್ಯ 1,52,500 ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.