Advertisement

ರಸ್ತೆಗಿಳಿವ ವಾಹನ ಅಂದರ್‌

11:58 AM Mar 30, 2020 | Suhan S |

ಬಳ್ಳಾರಿ: ಕೋವಿಡ್ 19 ವೈರಸ್‌ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್‌ ವಿಧಿ ಸಿದ್ದರೂ, ವಿನಾಕಾರಣ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನ ಸವಾರರ ಮೇಲೆ ಪೊಲೀಸರು ಹೊಸ ಅಸ್ತ್ರವನ್ನು ವಿಧಿಸುತ್ತಿದ್ದು, ವಾಹನಗಳನ್ನು ವಶಕ್ಕೆ ಪಡೆದು, ಸವಾರರನ್ನು ಕಾಲ್ನಡಿಗೆ ಮೂಲಕ ಕಳುಹಿಸುತ್ತಿದ್ದಾರೆ. ಜತೆಗೆ ನಗರದ ಪ್ರಮುಖ ವೃತ್ತಗಳನ್ನೆಲ್ಲ ಕಟ್ಟಿಗೆಗಳಿಂದ ಕಟ್ಟಿ ಸಂಪೂರ್ಣವಾಗಿ ಲಾಕ್‌ ಮಾಡಲಾಗುತ್ತಿದೆ.

Advertisement

ಕೋವಿಡ್ 19 ವೈರಸ್‌ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಮೂರನೇ ಹಂತ ತಲುಪಲು ಹತ್ತಿರದಲ್ಲಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ವಾರವೇ ದೇಶಾದ್ಯಂತ ಲಾಕ್‌ ಡೌನ್‌ ಮಾಡಿ ಆದೇಶ ಹೊರಡಿಸಿದೆ. ಸಾರ್ವಜನಿಕರು ಹೊರಬರದೆ ಮನೆಯಲ್ಲೇ ಇರುವಂತೆ ನಿರ್ಬಂಧ ಹೇರಲಾಗಿದೆ. ಮೇಲಾಗಿ ಅಗತ್ಯ ವಸ್ತುಗಳಾದ ತರಕಾರಿ, ರೇಷನ್‌, ಪೆಟ್ರೋಲ್‌ ಇತರೆ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿ, ಸಮಯವನ್ನೂ ನಿಗದಿಪಡಿಸಲಾಗಿದೆ. ಆದರೂ, ಜನರು, ಯುವಕರು ಮನೆಗಳಲ್ಲೇ ಉಳಿಯದೆ ವಿನಾಕಾರಣ ಹೊರಗಡೆ ಸಂಚರಿಸುತ್ತಿರುವುದು ಕಂಡುಬರುತ್ತಿದೆ.

ಹೀಗಾಗಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮುಂದಾಗಿರುವ ಪೊಲೀಸ್‌ ಇಲಾಖೆ ಹೊಸ ಅಸ್ತ್ರವನ್ನು ಬಳಸಿದ್ದು, ಬೆಳಗ್ಗೆ 10 ಗಂಟೆ ನಂತರ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಕಂಡುಬಂದಲ್ಲಿ ವಾಹನಗಳನ್ನು ವಶಕ್ಕೆ ಪಡೆದು ಅಲ್ಲಿಂದಲೇ ಕಾಲ್ನಡಿಗೆ ಮೂಲಕ ಮನೆಗೆ ಕಳುಹಿಸಲಾಗುತ್ತದೆ. ಹಳೆ ಚಾಳಿಗೆ ಅಭ್ಯಾಸ ಬಿದ್ದ ಜನರು ಕೂಡಲೇ ಬದಲಾವಣೆಯಾಗಬೇಕಾದರೆ ಸ್ವಲ್ಪ ಸಮಯ ಬೇಕಾಗಲಿದೆ. ಹೀಗಾಗಿ ಲಾಕ್‌ಡೌನ್‌ ಆದೇಶ ಜಾರಿಯಾಗಿ ನಾಲ್ಕೈದು ದಿನಗಳು ಕಳೆದರೂ ಜನರು ಅನಾವಶ್ಯಕವಾಗಿ ತಿರುಗಾಡುವುದನ್ನು ನಿಲ್ಲಿಸಿಲ್ಲ.

ಹೀಗಾಗಿ ಲಾಕ್‌ಡೌನ್‌ ಆದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಗೊಳಿಸುವ ಸಲುವಾಗಿ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಅಲ್ಲಿಂದ ಅವರನ್ನು ಕಾಲ್ನಡಿಗೆ ಮೂಲಕ ಮನೆಗೆ ಕಳುಹಿಸಲಾಗುತ್ತದೆ. ಲಾಕ್‌ಡೌನ್‌ ಆದೇಶ ಮುಕ್ತಾಯಗೊಂಡ ಬಳಿಕ ಸವಾರರಿಗೆ ವಾಹನಗಳನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ ಮತ್ತು ಮತ್ತು ಭಾನುವಾರ ಸೇರಿ 117 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಸಿ.ಕೆ. ಬಾಬಾ ಸ್ಪಷ್ಟಪಡಿಸಿದರು.

ವೃತ್ತಗಳು ಬಂದ್‌: ಲಾಕ್‌ಡೌನ್‌ ಆದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ನಗರದ ಪ್ರಮುಖ ವೃತ್ತಗಳನ್ನು ಬ್ಯಾರಿಕೇಡ್‌ ಮತ್ತು ಕಟ್ಟಿಗೆಗಳಿಂದ ಕಟ್ಟಿ ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತಿದೆ. ನಗರದ ಗಡಗಿ ಚನ್ನಪ್ಪ ವೃತ್ತ, ಎಸ್‌ಪಿ ವೃತ್ತಗಳಲ್ಲಿನ ನಾಲ್ಕು ದಿಕ್ಕುಗಳಲ್ಲಿನ ರಸ್ತೆಗಳು, ಬೆಂಗಳೂರು ರಸ್ತೆ ಸೇರಿ ಇನ್ನಿತರೆ ರಸ್ತೆಗಳನ್ನು ಬ್ಯಾರಿಕೇಡ್‌ ಮತ್ತು ಕಟ್ಟಿಗೆಗಳಿಂದ ಕಟ್ಟಿ ಬಂದ್‌ ಮಾಡಲಾಗಿದ್ದು, ಯಾವುದೇ ವಾಹನ ಸೇರಿ ಜನರು ಸಹ ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ. ಜತೆಗೆ ಕೋವಿಡ್ 19  ವೈರಸ್‌ ಶಂಕಿತರನ್ನು ಗೃಹಬಂಧನದಲ್ಲಿರಿಸಿರುವ ಬಡಾವಣೆಗಳ ಪ್ರಮುಖ ರಸ್ತೆಗಳನ್ನು ಸಹ ಸಂಪೂರ್ಣ ಬಂದ್‌ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next