Advertisement

ಮಾರುಕಟ್ಟೆಯಿದ್ದರೂ ರಸ್ತೆಬದಿಯಲ್ಲೇ ಮೀನು ಮಾರಾಟ

11:54 PM Jun 17, 2019 | Sriram |

ಕಾಸರಗೋಡು: ಹಲವು ವರ್ಷಗಳ ಬಳಿಕ ನಗರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದ್ದರೂ, ಮಾರುಕಟ್ಟೆಯಲ್ಲಿ ಮೀನು ಮಾರಾಟವಾಗುತ್ತಿಲ್ಲ. ಬದಲಾಗಿ ರಸ್ತೆಬದಿಯಲ್ಲೇ ಮೀನು ಮಾರಾಟ ನಡೆಯುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಿರುವುದರಿಂದಾಗಿ ಮೀನು ಮಾರಾಟ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮೀನು ಮಾರಾಟಗಾರರು ಸಾರ್ವತ್ರಿಕವಾಗಿ ಅಭಿಪ್ರಾಯಪಡುತ್ತಿದ್ದಾರೆ. ರಸ್ತೆಯಲ್ಲೇ ಮೀನು ಮಾರಾಟ ನಡೆಯುತ್ತಿರುವುದರಿಂದ ವಿವಿಧ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಿದೆ. ರಸ್ತೆ ತ್ಯಾಜ್ಯ ಕೊಂಪೆಯಾಗಿದ್ದು, ಸಾಂಕ್ರಾಮಿಕ ರೋಗ ಭೀತಿಗೆ ಕಾರಣವಾಗಿದೆ. ಮೀನು ಮಾರುಕಟ್ಟೆಯಿಂದ ಸಮಸ್ಯೆ ಕಡಿಮೆಯಾಗುವ ಬದಲಾಗಿ ಸಮಸ್ಯೆ ಇಮ್ಮಡಿಯಾಗಿದೆ.

Advertisement

ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ವಾಗುವಂತೆ ನಗರದಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗಿತ್ತು. ಆದರೆ ಕಿಡಿಗೇಡಿಗಳಿಂದಾಗಿ ಮೀನು ಮಾರುಕಟ್ಟೆಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮೀನು ಮಾರುಕಟ್ಟೆ ಇಂದು ಕಿಡಿಗೇಡಿಗಳಿಗೆ ವರದಾನವಾಗಿ ಪರಿಣಮಿಸಿದೆ.

ನಗರದ ಹಳೆ ಬಸ್‌ ನಿಲ್ದಾಣದಿಂದ ಕೆಲವೇ ಅಂತರದ ದೂರದಲ್ಲಿರುವ ಮಾರ್ಕೆಟ್‌ ಗುಡ್ಡೆ ಎಂದೇ ಕರೆಯಲ್ಪಡುವ ಸ್ಥಳದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆಯನ್ನು ನಿರ್ಮಿಲಾಗಿತ್ತು. ಕಾಸರಗೋಡು ನಗರಸಭಾ ಅಧಿವೇಶನದಲ್ಲಿ ಪ್ರತಿ ಬಾರಿಯೂ ಮೀನು ಮಾರುಕಟ್ಟೆ ಚರ್ಚೆಗೆ ಗ್ರಾಸವಾಗುತ್ತಲೇ ಇತ್ತು. ನಿರಂತರವಾದ ಬೇಡಿಕೆಯ ಪರಿಣಾಮವಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣವಾಗಿದ್ದು, ಹಲವು ವರ್ಷಗಳ ಕನಸು ನನಸಾಗಿತ್ತು. ಆದರೂ ಮೀನು ಮಾರುಕಟ್ಟೆಯಲ್ಲಿ ಸಮಸ್ಯೆ ಪರಿಹಾರವಾಗಲೇ ಇಲ್ಲ.

ಕೊಳಚೆ ನೀರು ಹರಿವಿಗೆ ವ್ಯವಸ್ಥೆಯಿಲ್ಲ
ಮಾರುಕಟ್ಟೆಯಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯ ವಿಲೇವಾರಿಗೆ ಸಮರ್ಪಕವಾಗಿ ಯಾವುದೇ ವ್ಯವಸ್ಥೆಯಿಲ್ಲ. ಅಲ್ಲಲ್ಲೇ ಕೊಳಚೆ ಮಡುಗಟ್ಟಿ ನಿಂತಿದ್ದು, ಮೀನು, ಮಾಂಸ ತ್ಯಾಜ್ಯ ಅಲ್ಲಲ್ಲೇ ಉಳಿದುಕೊಂಡಿದೆ. ಕೊಳಚೆ ಹರಿಯಲು ಚರಂಡಿಯನ್ನು ನಿರ್ಮಿಸ ಲಾಗಿದ್ದರೂ ಸುಗಮವಾಗಿ ಕೊಳಚೆ ನೀರು ಹರಿಯದೆ ಅಲ್ಲಲ್ಲಿ ಮಡುಗಟ್ಟಿ ನಿಂತು ಗಬ್ಬು ವಾಸನೆ ಬೀರುತ್ತಿದೆ. ಈ ಕಾರಣದಿಂದ ಮಾರ್ಕೆಟ್‌ ಅಂಗಣದಲ್ಲಿ ಮೀನು ಮಾರಾಟ ಮಾಡಲು ಸಾಧ್ಯವಾಗದೆ ರಸ್ತೆಯಲ್ಲೇ ಮೀನು ಇರಿಸಿ ಮಾರಾಟ ಮಾಡಲಾಗುತ್ತಿದೆ.

ಮಾರುಕಟ್ಟೆಯೊಳಗೂ ಅವ್ಯವಸ್ಥೆ
ಮೀನು ಮಾರುಕಟ್ಟೆಯಲ್ಲಿ ಸರಿಯಾಗಿ ಗಾಳಿ ಬರಲು ವ್ಯವಸ್ಥಿತವಾಗಿ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಇದು ಕೂಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊಳಚೆ ಅಲ್ಲಲ್ಲೇ ಮಡುಗಟ್ಟಿ ನಿಂತು ದುರ್ಗಂಧ ಬೀರುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ಮೀನು ಮಾರುಕಟ್ಟೆಗೆ ಹೋಗಲೂ ಸಾಧ್ಯವಾಗುವುದಿಲ್ಲ. ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಕೊಳಚೆ ಹಾಗೂ ತ್ಯಾಜ್ಯ ಅಲ್ಲಲ್ಲೇ ಮಡುಗಟ್ಟಿ ನಿಂತಿರುವುದರಿಂದ ಸೊಳ್ಳೆ ಕೇಂದ್ರವಾಗಿ ಪರಿಣಮಿಸಿದೆ. ಇದು ವಿವಿಧ ಮಾರಕ ರೋಗ ಹರಡಲೂ ಕಾರಣವಾಗುತ್ತಿದೆ. ಕಾಸರಗೋಡು ಜಿಲ್ಲೆ ಪ್ರತಿ ವರ್ಷವೂ ವಿವಿಧ ಮಾರಕ ರೋಗಗಳಿಗೆ ತುತ್ತಾಗುತ್ತಲೇ ಇದೆ. ಮಲೇರಿಯಾ, ಡೆಂಗ್ಯೂ ಮೊದಲಾದ ರೋಗಗಳಿಗೆ ಈ ಹಿಂದೆ ಕಾಸರಗೋಡಿನಲ್ಲಿ ಹಲವು ಮಂದಿ ಬಲಿಯಾಗಿದ್ದರು.

Advertisement

ಈ ಹಿನ್ನೆಲೆಯಲ್ಲಿ ಮೀನು ಮಾರುಕಟ್ಟೆಯಲ್ಲಿ ಶುಚಿತ್ವ ಪಾಲಿಸಬೇಕೆಂಬ ತಿಳಿವಳಿಕೆಯೂ ಇಲ್ಲದಿರುವುದು ದುರಂತವೇ ಸರಿ. ಮೀನು ಮಾರುಕಟ್ಟೆಯಲ್ಲಿ ಶುಚಿತ್ವ ಪಾಲಿಸಿದರೆ ಮಾರಕ ರೋಗ ಹರಡುವುದನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಕಾಸರಗೋಡು ನಗರಸಭೆಯಲ್ಲಿ ಮೀನು ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸಬೇಕೆಂದು ಬಿಜೆಪಿ ಸದಸ್ಯರು ಬೇಡಿಕೆಯನ್ನು ಮುಂದಿಡುತ್ತಲೇ ಬಂದಿದ್ದರು. ಬಿಜೆಪಿ ನಿಯೋಗ ಮಾರುಕಟ್ಟೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿತ್ತು. ಹೀಗಿದ್ದು ಮಾರುಕಟ್ಟೆಯ ಸಮಸ್ಯೆಯನ್ನು ಪರಿಹರಿಸಲು ನಗರಸಭೆ ಮುಂದಾಗಲಿಲ್ಲ. ನಗರಸಭೆಯ ಅನಾಸ್ಥೆಯನ್ನು ಪ್ರತಿಭಟಿಸಿ 2016 ಫೆ.15 ರಂದು ನಗರಸಭೆಗೆ ಬಿಜೆಪಿ ಕಾಸರಗೋಡು ನಗರ ಸಮಿತಿ ನೇತೃತ್ವದಲ್ಲಿ ಜಾಥಾ ನಡೆದಿತ್ತು.

ಕೆಟ್ಟು ನಿಂತ ಫ್ಯಾನ್‌, ಟ್ಯೂಬ್‌ಲೈಟ್‌
ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಮೀನು ಮಾರಕಟ್ಟೆ ಕಟ್ಟಡ ನಿರ್ಮಿಸಿದ್ದರೂ, ಗಾಳಿ, ಬೆಳಕು ಸರಿಯಾಗಿ ಪ್ರವೇಶಿಸದೆ ಸಮಸ್ಯೆಗೆ ಕಾರಣವಾಗಿದೆ. ಕಟ್ಟಡದೊಳಗೆ ಹಲವು ಫ್ಯಾನ್‌, ಟ್ಯೂಬ್‌ಲೈಟ್‌ ಅಳವಡಿಸಿದ್ದರೂ ಇವೆಲ್ಲವೂ ಕೆಟ್ಟು ನಿಂತಿವೆೆ. ಬೆಳಕಿನ ವ್ಯವಸ್ಥೆಯಿಲ್ಲದಿರುವುದರಿಂದನ ಸಂಜೆ 5 ರಿಂದ ಮೀನು ವ್ಯಾಪಾರಿಗಳು ಕಟ್ಟಡದಿಂದ ಹೊರಕ್ಕೆ ತೆರಳಬೇಕಾಗುತ್ತದೆ.

ಸಾಂಕ್ರಾಮಿಕ ರೋಗ ಭೀತಿ
ದೊಡ್ಡ ಮೊತ್ತದಲ್ಲಿ ಮೀನು ಮಾರುಕಟ್ಟೆಗೆ ಕಟ್ಟಡ ನಿರ್ಮಾಣವಾಗಿದ್ದರೂ ಅದರ ಪ್ರಯೋಜನ ಲಭಿಸಿಲ್ಲ. ಈ ಕಾರಣದಿಂದ ಮೀನು ಮಾರಾಟ ರಸ್ತೆಯಲ್ಲೇ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೀನು ಮಾರುಕಟ್ಟೆ ಪರಿಸರ ಪ್ಲಾಸ್ಟಿಕ್‌ ಮತ್ತು ಮೀನಿನ ತ್ಯಾಜ್ಯದಿಂದ ತುಂಬಿರುವುದರಿಂದ ಸಾಂಕ್ರಾಮಿಕ ರೋಗ ಭೀತಿಯೂ ಆವರಿಸಿದೆ.
– ಕಾವೇರಿ
ಮೀನು ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next