Advertisement
ಬೈಕಂಪಾಡಿಯ ಕೈಗಾರಿಕಾ ಪ್ರದೇಶ, ಸುರತ್ಕಲ್ ಕಾನದಿಂದ ಎಂಆರ್‌ಪಿಎಲ್ ಕಾರ್ಗೊಗೇಟ್, ಅಲ್ಲಿಂದ ಜನತಾ ಕಾಲನಿ ಕ್ರಾಸ್ ರಸ್ತೆ, ಕೂಳೂರು ಸೇತುವೆಯಿಂದ ಬಲಭಾಗದಲ್ಲಿ ಎಸ್‌ಇಝಡ್ ರಸ್ತೆ ಸೇರಿದಂತೆ ಎಲ್ಲ ಉದ್ದಿಮೆ ಸಂಪರ್ಕ ರಸ್ತೆಗಳು ಇದೀಗ ಹೊಂಡ ಗುಂಡಿಗಳಾಗಿ ಬದಲಾಗಿವೆ. ರಸ್ತೆಯು ತೀರಾ ಹದಗೆಟ್ಟಿರುವ ಬಗ್ಗೆ ಬಾಳ ಗ್ರಾ.ಪಂ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ವಾಹನ ಚಾಲಕರು ಈ ರಸ್ತೆಯಲ್ಲಿ ನಿತ್ಯ ಸರ್ಕಸ್ ಮಾಡಬೇಕಾದ ಅನಿವಾರ್ಯ. ರಸ್ತೆ ರಿಪೇರಿ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೆ, ಎಂಆರ್‌ಪಿಎಲ್ ವಾಹನಗಳು ಇಲ್ಲಿ ಓಡುತ್ತಿವೆ. ಹೀಗಾಗಿ ಅವರೇ ಇದನ್ನು ಸರಿಪಡಿಸಬೇಕು ಎಂಬ ಉತ್ತರ ಬರುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಕೊಟ್ಟಾರದಿಂದ ಸುರತ್ಕಲ್‌ವರೆಗೆ ತೆರಳುವ ರಸ್ತೆಗಳು ಹೊಂಡ ಗುಂಡಿಗಳಾಗಿ ಪರಿಣಮಿಸಿವೆ. ಕಾನದಿಂದ ಎಂಆರ್‌ಪಿಎಲ್ ಕಾರ್ಗೋಗೇಟ್‌ವರೆಗಿನ ರಸ್ತೆಗಳದ್ದು ಕೂಡ ಇದೇ ಪರಿಸ್ಥಿತಿ. ಇತ್ತೀಚೆಗೆ ಈ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು. ಆದರೆ, ಬೃಹತ್ ಗಾತ್ರದ ಟ್ಯಾಂಕರ್‌ಗಳು ಪ್ರತಿನಿತ್ಯ ಓಡಾಡುವವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸೆಪ್ಟಂಬರ್‌ನಲ್ಲಿ ಸ್ಥಳೀಯರು ಹಾಗೂ ಸಂಘ-ಸಂಸ್ಥೆಗಳ ಹೋರಾಟಕ್ಕೆ ಮಣಿದು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿತ್ತು. ಕೆಲವು ಕಡೆಗಳಲ್ಲಿ ಪ್ಯಾಚ್ ವರ್ಕ್ ಮಾಡಲಾಗಿತ್ತು. ಆದರೆ ಈಗ ಎಲ್ಲ ಕಿತ್ತು ಹೋಗಿದೆ. ನೆಮ್ಮದಿಯ ವಿಚಾರ
ಒಂದು ನೆಮ್ಮದಿಯ ವಿಚಾರವೆಂದರೆ ಕುಲಗೆಟ್ಟ ರಸ್ತೆಯಾಗಿ ಪರಿವರ್ತಿತವಾಗಿದ್ದ ಬೈಕಂಪಾಡಿ ಕೈಗಾರಿಕಾ ವಲಯದ ರಸ್ತೆಯ ಕೆಲವು ಭಾಗಗಳನ್ನು ಮಾತ್ರ ಈಗಾಗಲೇ ಮೇಲ್ದರ್ಜೆಗೇರಿಸಲಾಗಿದೆ. ಬೈಕಂಪಾಡಿ ಕೈಗಾರಿಕಾ ವಲಯದ ಸುಮಾರು 3.2 ಕಿ.ಮೀ.ವ್ಯಾಪ್ತಿಯಲ್ಲಿ 7.5 ಮೀ. ಅಗಲದ ಕಾಂಕ್ರೀಟ್ ರಸ್ತೆ ಕಾಮಗಾರಿ ಸುಮಾರು 10 ಕೋ.ರೂ. ವೆಚ್ಚದಲ್ಲಿ ನಡೆದಿದೆ. ಕೆಐಎಡಿಬಿ ವತಿಯಿಂದ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ರಾಜ್ಯದ ಮೊದಲ ಪ್ರತಿಷ್ಠಿತ ಕಾಂಕ್ರೀಟ್ ರಸ್ತೆ ಎಂಬ ಹಿರಿಮೆ ಈ ರಸ್ತೆಗಿದೆ.
Related Articles
Advertisement
ದಿನಕ್ಕೆ 13,000 ವಾಹನಗಳ ಸಂಚಾರ…!ಸಮೀಕ್ಷೆಯೊಂದರ ಪ್ರಕಾರ, ಬೈಕಂಪಾಡಿ ಕೈಗಾರಿಕಾ ವಲಯದ ಹೆದ್ದಾರಿ ಪಕ್ಕದಿಂದ ಜೋಕಟ್ಟೆ ಕ್ರಾಸ್ ರಸ್ತೆ, ದೀಪಕ್ ಪೆಟ್ರೋಲ್ ಪಂಪ್ ಮೂಲಕದ ರಸ್ತೆ, ಎಂಆರ್‌ಪಿಎಲ್ ಒಡಿಸಿ ರಸ್ತೆ ಹಾಗೂ ಜೋಕಟ್ಟೆಯಿಂದ ಪ್ರವೇಶವಾಗುವ ರಸ್ತೆ ಸೇರಿದಂತೆ ಒಟ್ಟು 4 ರಸ್ತೆಗಳಲ್ಲಿ ಪ್ರತೀ ದಿನ 13,000 ವಾಹನಗಳು ಸಂಚರಿಸುತ್ತದೆ. ಇದರ ಪೈಕಿ 3,500 ಘನ ವಾಹನಗಳೇ ಇಲ್ಲಿ ನಿತ್ಯ ಸಂಚರಿಸುತ್ತಿದೆ. ಈಗ ಬೈಕಂಪಾಡಿ ವಲಯದಲ್ಲಿ ಸುಮಾರು 1,000ದಷ್ಟು ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಸಂಚಾರ ದುಸ್ತರ
ಸುರತ್ಕಲ್-ಎಂಆರ್‌ಪಿಎಲ್ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಾಗಿ ಪರಿವರ್ತನೆಗೊಂಡಿದ್ದು, ವಾಹನ ಸಂಚಾರ ಇಲ್ಲಿ ದುಸ್ತರವಾಗಿದೆ. ನೂರಾರು ಘನ ವಾಹನಗಳು ಇಲ್ಲಿ ಸಂಚರಿಸುವ ಮೂಲಕ ರಸ್ತೆ ಸಂಪೂರ್ಣ ಕೆಟ್ಟುಹೋಗಿದೆ. ಕಳೆದ 4-5 ವರ್ಷಗಳಿಂದ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
- ಸುರೇಶ್ ಕಾನ, ಸ್ಥಳೀಯರು ವಾಹನಗಳ ನಿತ್ಯ ಸರ್ಕಸ್
ಬೈಕಂಪಾಡಿಯಲ್ಲಿರುವ ಪಣಂಬೂರು ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕಾಂಕ್ರೀಟ್ ರಸ್ತೆ ಇದ್ದರೂ, ಅಲ್ಲಿಂದ ಸಂಪರ್ಕಿಸುವ ಒಳರಸ್ತೆಗಳು ಹೊಂಡಗಳಿಂದ ನಲುಗಿ ಹೋಗಿದೆ. ವಿವಿಧ ಕೈಗಾರಿಕೆಗಳಿಗೆ ತೆರಳುವ ಬೃಹತ್ ವಾಹನಗಳು ಇದೇ ಸಮಸ್ಯೆಯಿಂದ ನಲುಗುವಂತಾಗಿದೆ. ಸಾರ್ವಜನಿಕ ವಾಹನಗಳು ಕೂಡ ಇದೇ ರಸ್ತೆಯಲ್ಲಿ ಸಂಚರಿಸುವ ನಿತ್ಯ ಸರ್ಕಸ್ ಮಾಡಬೇಕಾಗಿದೆ.
– ಸಂಜೀವ ಶೆಟ್ಟಿ, ಸುರತ್ಕಲ್ ಕಟ್ಲ ದಿನೇಶ್ ಇರಾ