ಭೋಪಾಲ್: ರಾಜ್ಯದ ರಸ್ತೆ ಪರಿಸ್ಥಿತಿಗಳನ್ನು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಕೆನ್ನೆಗೆ ಹೋಲಿಸುವ ಮೂಲಕ ಮಧ್ಯಪ್ರದೇಶ ಸಚಿವ ಪಿ.ಸಿ. ಶರ್ಮಾ ಹೊಸ ವಿವಾದ ಸೃಷ್ಟಿಸಿದ್ದಾರೆ.
ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಕೆನ್ನೆಯಂತೆ ಇರುವ ಮಧ್ಯಪ್ರದೇಶದ ರಸ್ತೆಗಳನ್ನು ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಬಿಜೆಪಿ ಲೋಕಸಭಾ ಸಂಸದೆ ಹೇಮಾಮಾಲಿನಿ ಕೆನ್ನೆಯಂತೆ ಬದಲಾಯಿಸುತ್ತದೆ ಎಂದು ಸಚಿವ ಪಿ.ಸಿ. ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭೂಪಾಲ್ ನ ರಸ್ತೆ ಸ್ಥಿತಿಗತಿಗಳ ಬಗ್ಗೆ ಪರಶೀಲಿಸುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಸ್ತೆಗಳು ವಿಜಯವರ್ಗಿಯ ಕೆನ್ನೆಯಂತಿದ್ದು ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆಯಿದೆ. ಮಧ್ಯಪ್ರದೇಶದ ರಸ್ತೆಗಳನ್ನು ವಾಷಿಂಗ್ಟನ್‌ನ ರಸ್ತೆಗಳಂತೆ ನಿರ್ಮಿಸಲಾಗುವುದು. ಭಾರಿ ಮಳೆಯ ನಂತರ, ಎಲ್ಲೆಡೆ ಗುಂಡಿಗಳಿವೆ. ಪ್ರಸ್ತುತ ರಸ್ತೆಗಳ ಸ್ಥಿತಿ ಸಿಡುಬಿನ ಕಲೆಗಳಂತಿದೆ. ಕೈಲಾಶ್ ವಿಜಯವರ್ಗಿಯ ಕೆನ್ನೆಗಳಂತೆ ಮಾರ್ಪಟ್ಟಿದೆ ಎಂದು ಕಾಲೆಳೆದಿದ್ದಾರೆ.
ಹದಗೆಟ್ಟ ರಸ್ತೆಗಳನ್ನು 15 ದಿನಗಳಲ್ಲಿ ಸರಿಮಾಡಿ ಸಂಸದೆ ಹೇಮಾಮಾಲಿನಿ ಕೆನ್ನೆಗಳಂತೆ ನಯವಾಗಿ ಮಾಡಲಾಗುವುದು ಎಂದು ಇದೇ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 2007ರಲ್ಲಿ ಅಧಿಕಾರದಲ್ಲಿದ್ದಾಗ ಮಧ್ಯಪ್ರದೇಶದ ರಸ್ತೆಗಳ ಬಗ್ಗೆ ಮಾತನಾಡಿ, ವಾಷಿಂಗ್ಟನ್ಗಿಂತ ನಮ್ಮ ರಸ್ತೆಗಳು ಉತ್ತಮವಾಗಿವೆ ಎಂದಿದ್ದರು. ನಾನು ವಾಷಿಂಗ್ಟನ್ಗೆ ಪ್ರಯಾಣ ಬೆಳೆಸಿ, ಅಲ್ಲಿನ ವಿಮಾನ ನಿಲ್ದಾಣದಿಂದ ಇಳಿದು ರಸ್ತೆಯಲ್ಲಿ ಸಾಗುವಾಗ ಅಮೆರಿಕಗಿಂತ ನಮ್ಮ ರಸ್ತೆಗಳೇ ಚೆನ್ನಾಗಿವೆ ಎಂದು ಭಾಸವಾಯಿತು ಎಂದು ಹೇಳಿಕೊಂಡಿದ್ದರು.
ಆದರೆ, ಈಗ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯೇ ಕಮಲ್ನಾಥ್ ಸರ್ಕಾರದ ವಿರುದ್ಧ ಸಿಡಿದೆದ್ದು, ರಸ್ತೆಗಳು ಸರಿಯಾಗಿಲ್ಲ. ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಕೆಲಸ ಮಾಡದೆ ಕೇಂದ್ರ ಸರ್ಕಾವನ್ನು ದೂಷಿಸುವುದು ಸರಿಯಲ್ಲ. ಆದಷ್ಟು ಬೇಗ ರಸ್ತಗಳನ್ನು ಸರಿಪಡಿಸಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರವನ್ನು ತಿವಿದಿದ್ದರು.
ಇದೀಗ ಸಚಿವ ಪಿ.ಸಿ.ಶರ್ಮಾ ಅವರು ಚೌಹಾಣ್ ಅವರ ಹಳೆಯ ಹೇಳಿಕೆಯನ್ನು ಮತ್ತೆ ನೆನಪಿಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.