Advertisement

ರಸ್ತೆ ಅಗಲೀಕರಣಕ್ಕೆ ಗಿಡಗಳು ಅಡ್ಡಿ

05:53 PM Mar 04, 2021 | Team Udayavani |

ತೇರದಾಳ: ಸ್ಥಳೀಯ ಪುರಸಭೆ ನಗರೋತ್ಥಾನ ಮೂರನೇ ಹಂತದ ಅನುದಾನದಲ್ಲಿ ಇಲ್ಲಿನ ಅಂಬೇಡ್ಕರ್‌  ವೃತ್ತದಿಂದ ಕುಡಚಿ ರಸ್ತೆಯ ರಾಯಲ್‌ ರೆಸಿಡೆನ್ಸಿ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಾಕಿಕೊಳ್ಳಲಾಗಿದೆ. ಅದರಂತೆ ಕಾಮಗಾರಿಯೂ ಪ್ರಾರಂಭಗೊಂಡಿದೆ. ಆದರೆ ಕಾಮಗಾರಿ ಸ್ಥಳದಲ್ಲಿ ಗಿಡ-ಮರಗಳು ಅಡ್ಡ ಆಗಿದ್ದರಿಂದ ಆ ಸ್ಥಳವನ್ನು ಬಿಟ್ಟು ಮುಂದೆ ಕೆಲಸ ಮಾಡಲಾಗುತ್ತಿದೆ.

Advertisement

ಗಿಡ-ಮರಗಳ ಅಕ್ಕ-ಪಕ್ಕ ರಸ್ತೆಯನ್ನು ಅಗೆದ ಪರಿಣಾಮ ಗಿಡ-ಮರಗಳು ಬಾಗಿವೆ. ಇದರಿಂದ ಯಾವಾಗ ಬೇಕಾದರೂ ಬೀಳುವ ಸಾಧ್ಯತೆ ಇದ್ದು, ಅನಾಹುತಕ್ಕೆ ಕಾದು ಕುಳಿತಂತಾಗಿದೆ. ಗಿಡ-ಮರಗಳು ಬಾಗಿದ ಪರಿಣಾಮ ಆ ಕಡೆಗೆ ವಾಹನಗಳು ಹೋಗಲು ಹಿಂದೇಟು ಹಾಕುತ್ತಿವೆ. ಒಂದಡೆ ವಾಹನಗಳು ಓಡಾಟ ಮಾಡುತ್ತಿರುವುದರಿಂದ ಸಂಚಾರಕ್ಕೂ ತೀವ್ರ ತೊಂದರೆ ಆಗಿದೆ.

ಇನ್ನು ರಸ್ತೆ ಪಕ್ಕದ ಗಿಡ-ಮರಗಳನ್ನು ತೆರವುಗೊಳಿಸುವಂತೆ ಪುರಸಭೆ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಿಖೀತವಾಗಿ ಪತ್ರ ಬರೆದಿದ್ದಾರೆ. ಅದರಂತೆ ಅರಣ್ಯ ಇಲಾಖೆ ಒಂದು ಮರಕ್ಕೆ ಹತ್ತು ಸಸಿಗಳನ್ನು ಬೇರೆ ಕಡೆಗೆ ನೆಟ್ಟು ಪ್ರತಿ ಮರಕ್ಕೆ 373 ಹಣ ಅರಣ್ಯ ಇಲಾಖೆಗೆ ಸಂದಾಯ ಮಾಡಬೇಕೆಂದು ತಿಳಿಸಿದೆ. ಒಟ್ಟು 2.27 ಲಕ್ಷ ಹಣವನ್ನು ಪುರಸಭೆ ಪಾವತಿಸಬೇಕಾಗಿದೆ. ಆದರೆ ಪುರಸಭೆ 15 ದಿನಗಳ ಕಾಲಾವಕಾಶ ಕೇಳಿದ್ದು, ಎಸ್‌ಎಫ್‌ಸಿ ಅಥವಾ 14ನೇ ಇಲ್ಲವೇ 15ನೇ ಹಣಕಾಸು ಯೋಜನೆಯಡಿ ಅನುದಾನ ಮೀಸಲಿಟ್ಟು, ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಬಳಿಕ ಹಣ ಪಾವತಿಸುವುದಾಗಿ ತಿಳಿಸಿದೆ.

ಅಲ್ಲಿಯವರೆಗೆ ಕಾಮಗಾರಿ ಮಾಡಲು ತೊಂದರೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕಾಮಗಾರಿ ಮಾಡುವ ಸ್ಥಳದ ಗಿಡ-ಮರಗಳನ್ನು ತೆರವುಗೊಳಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪುರಸಭೆ ಲಿಖೀತ ಪತ್ರ ನೀಡಿ ಮನವಿ ಮಾಡಿದೆ. ಆದರೆ ಇದುವರೆಗೆ ಅರಣ್ಯ  ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರ ಜತೆಗೆ ಗಿಡ-ಮರಗಳು ಬಾಗಿದ್ದರಿಂದ ಅವಘಡ ಸಂಭವಿಸಬಹುದಾಗಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next