ಹಾಸನ: ನಗರದ ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ಕಾಮಗಾರಿ ಒಂದು ತಿಂಗಳ ಹಿಂದೆ ಭರದಿಂದ ಆರಂಭವಾಗಿತ್ತಾದರೂ ಕಾಮಗಾರಿ ಸ್ಥಗತವಾಗಿ ಮೂರು ವಾರಗಳೇ ಕಳೆದಿವೆ.
ಉದ್ದೂರು ಗ್ರಾಮದ ಬಳಿ ವರ್ತುಲ ರಸ್ತೆ ಕಾಮಗಾರಿಗೆ ಬಳಸಿಕೊಳ್ಳುವ ಭೂಮಿಗೆ ಪರಿಹಾರ ನೀಡದಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದೇ ಕಾರಣಕ್ಕೆ ಕಳೆದ ಒಂದು ದಶಕದಿಂದಲೂ ವರ್ತುಲ ರಸ್ತೆ ಕಾಮಗಾರಿ ಸ್ಥಗಿತವಾಗಿತ್ತು. ಈಡೇರದ ಭರವಸೆ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರ್ಕೆ ಬಂದ ನಂತರ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ನನೆಗುದಿಗೆ ಬಿದ್ದಿದ್ದ ವರ್ತುಲ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿ ಕಾಮಗಾರಿಗೆ 10 ಕೋಟಿ ರೂ. ಮಂಜೂರು ಮಾಡಿಸಿರುವುದಾಗಿ ಹೇಳಿದ್ದರು. ಮಾರ್ಚ್ ಅಂತ್ಯದ ವೇಳೆಗೆ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದೂ ಹೇಳಿದ್ದರು. ರಸ್ತೆ ನಿರ್ಮಾಣಕ್ಕೆ ಪ್ರಮುಖ ಅಡ್ಡಿಯಾಗಿದ್ದ ಉದ್ದೂರು ಗ್ರಾಮದ ಭೂ ಮಾಲೀಕರನ್ನು ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸದೆ ಭೂಮಿಯನ್ನು ಬಿಟ್ಟುಕೊಡಿ ಭೂ ಪರಿಹಾರದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು.
ರೈತರಿಂದ ಕಾಮಗಾರಿಗೆ ಅಡ್ಡಿ: ಶಾಸಕರ ಭರವಸೆ ನಂಬಿದ ಉದ್ದೂರು ಮತ್ತು ತಮ್ಲಾಪುರ ಗ್ರಾಮಸ್ಥರು ರಸ್ತೆ ನಿರ್ಮಾಣಕ್ಕೆ ಅಡಚಣೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಹಾಗಾಗಿ ನವೆಂಬರ್ – ಡಿಸೆಂಬರ್ ನಲ್ಲಿ ಕಾಮಗಾರಿ ಭರದಿಂದ ನಡೆದಿತ್ತು. ಆದರೆ ರಸ್ತೆ ನಿರ್ಮಾಣವಾದ ನಂತರ ನಮಗೆ ಭೂ ಪರಿಹಾರ ಸಿಗುವುದು ಕಷ್ಟ ಎಂದು ಭಾವಿಸಿದ ಉದ್ದೂರು ಮತ್ತು ತಮ್ಲಾಪುರ ಗ್ರಾಮಸ್ಥರು ರಸ್ತೆ ನಿರ್ಮಾಣ ಕಾಮಗಾರಿಗೆ ತಡೆ ಯೊಡ್ಡಿದ ಪರಿಣಾಮ ಈಗ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ರಸ್ತೆಯ ಒಂದು ಬದಿಯಲ್ಲಿ ಜೆಸಿಬಿ ಯಂತ್ರಗಳ ಮೂಲಕ ಚರಂಡಿಯನ್ನು ನಿರ್ಮಿಸಿದ ಮಣ್ಣನ್ನೇ ರಸ್ತೆಗೆ ಎಳೆದು ಸಮತಟ್ಟು ಮಾಡಿದ್ದರಿಂದ ರಸ್ತೆ ರೂಪುಗೊಂಡಿದೆ. ಆದರೆ ಒಂದು ಭಾಗದಲ್ಲಿ ಚರಂಡಿ ನಿರ್ಮಿಸಿಲ್ಲ.
ರಸ್ತೆ ದೂಳಮಯ: ಒಂದೆರಡು ವಾರಗಳ ಕಾಲ ರಸ್ತೆ ನಿರ್ಮಾಣದ ಕಾಮಗಾರಿ ನಡೆದು ಒಂದು ಭಾಗದಲ್ಲಿನ ಚರಂಡಿಯ ಮಣ್ಣನ್ನು ರಸ್ತೆಗೆ ಹರಡಿದ್ದರಿಂದ ಮಣ್ಣಿನ ರಸ್ತೆಯಲ್ಲಿ ವಾಹನಗಳು ಪ್ರಯಾಸಪಟ್ಟು ಸಂಚರಿಸಬಹುದು. ಆದರೆ ದೂಳಿನ ಆಪೋಷನ ಮಾಡಿಕೊಂಡೇ ವರ್ತುಲರ ರಸ್ತೆಯಲ್ಲಿ ಉದ್ದೂರು ಮೂಲಕ ವಾಹನಗಳ ಚಾಲಕರು ಬೇಲೂರು ರಸ್ತೆ ತಲಉಪಬಹುದು. ದ್ವಿಚಕ್ರ ವಾಹನ ಸವಾರರಂತೂ ದೂಳಿನಲ್ಲಿ ಮಿಂದುಕೊಂಡೇ ಸಂಚರಿವಂತಾಗಿದೆ. ಲಾರಿಗಳು ಸಂಚರಿಸಿರೆ ರಸ್ತೆ ಬದಿಯಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ದೂಳು ಆವರಿಸಿಕೊಳ್ಳುತ್ತದೆ.
ಚರಂಡಿ ಕಾಮಗಾರಿ ಸ್ಥಗಿತ: ತಮ್ಲಾಪುರದ ಸಮೀಪ ದಿಂದ ವರ್ತುಲ ರಸ್ತೆ ಬದಿ ಕಾಂಕ್ರೀಟ್ ಚರಂಡಿ ಕಾಮಗಾರಿ ಆರಂಭವಾಗಿತ್ತು. ರಸ್ತೆ ಕಾಮಗಾರಿ ಸ್ಥಗಿತವಾದ ಹಿನ್ನೆಲೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯೂ ಸ್ಥಗಿತವಾಗಿದೆ.ರಸ್ತೆಯಲ್ಲಿ ಜಲ್ಲಿ ಸಂಗ್ರಹಿಸಿರುವುದನ್ನು ಬಿಟ್ಟರೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗುವ ಯಾವ ಸೂಚನೆಯೂ ಕಾಣುತ್ತಿಲ್ಲ.