Advertisement

ರಸ್ತೆ ಕಾಮಗಾರಿಗಳು ವರ್ಷಾಂತ್ಯದೊಳಗೆ ಪೂರ್ಣ

10:53 AM Sep 16, 2019 | Suhan S |

ಧಾರವಾಡ: ಕೇಂದ್ರ ಸರಕಾರದ ಆರ್ಥಿಕ ನೆರವಿನಲ್ಲಿ ಜ್ಯುಬಿಲಿ ಸರ್ಕಲ್ನಿಂದ ನರೇಂದ್ರ ಕ್ರಾಸ್‌ವರೆಗಿನ 5.62 ಕಿಮೀ ರಸ್ತೆ ಅಗಲೀಕರಣ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ನಗರದಲ್ಲಿ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜ್ಯುಬಿಲಿ ಸರ್ಕಲ್ನಿಂದ ನರೇಂದ್ರ ಬೈಪಾಸ್‌ ವರೆಗಿನ ರಸ್ತೆಯಲ್ಲಿ ವಾಹನದಟ್ಟಣೆ ಹಾಗೂ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ಸುಮಾರು 5.62 ಕಿಮೀ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ರೂಪಿಸಿ ಮೇಲ್ದರ್ಜೆಗೆ ಉನ್ನತೀಕರಿಸಲು ಕೇಂದ್ರ ಸರಕಾರದಿಂದ ವಿಶೇಷ ಅನುದಾನ ಪಡೆಯಲಾಗಿದೆ. 2017ರ ಏಪ್ರಿಲ್ನಲ್ಲಿ 71.48 ಲಕ್ಷ ರೂ. ಯೋಜನಾ ಮೊತ್ತದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಈ ವರ್ಷದ ಅಂತ್ಯದೊಳಗೆ ಮುಕ್ತಾಯಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದು, ಡಿಸೆಂಬರ್‌ಒಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ ಕೆಲ ಇಲಾಖೆಗಳೊಂದಿಗೆ ಆಗಿರುವ ಸಮನ್ವಯ ಕೊರತೆ ನೀಗಿಸಲು ಸಭೆ ಕೈಗೊಳ್ಳುವಂತೆ ಶಾಸಕ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರಿಗೆ ಹೇಳಿರುವುದಾಗಿ ತಿಳಿಸಿದರು.

ಧಾರವಾಡದಲ್ಲಿ ನಡೆಯುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿ ಬಂದ್‌ ಆಗಿರುವ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಕಾಶೆಯಲ್ಲಿ ಕೆಲವು ಬದಲಾವಣೆ ಕಾರಣ ಬಂದ್‌ ಆಗಿದ್ದು ಸದ್ಯದಲ್ಲಿಯೇ ಎಲ್ಲವೂ ಸರಿಯಾಗಲಿದೆ ಎಂದರು.

ಇದೇ ವೇಳೆ ಕಿಲ್ಲರ್‌ ಕಟ್ಟಡದ ಪ್ರಕರಣದ ಸಂತ್ರಸ್ತರು ಸಚಿವರನ್ನು ಭೇಟಿ ಮಾಡಿ, ಪರಿಹಾರ ಲಭಿಸಿಲ್ಲ. ದಯವಿಟ್ಟು ಬೇಗ ನೀಡುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಕುಮಾರೇಶ್ವರ ನಗರದ ನಿವಾಸಿಗಳು, ನಗರದಲ್ಲಿ ಆಗಿರುವ ಕಳಪೆ ಮಟ್ಟದ ಯುಜಿಡಿ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಚಿವರ ಗಮನ ಸೆಳೆದರು.

Advertisement

ಇದಕ್ಕೂ ಮುನ್ನ ಸಚಿವರು ಕೆಲಗೇರಿ ರಸ್ತೆಯಲ್ಲಿನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ, ಸಾಯಿ ಬಾಬಾರ ದರ್ಶನ ಪಡೆದರು. ನಂತರ ಸಂಸ್ಥೆ ವತಿಯಿಂದ ಇತ್ತೀಚೆಗೆ ನಿರ್ಮಿಸಿದ ಅನ್ನಬ್ರಹ್ಮ ಮೂರ್ತಿಯನ್ನು ವೀಕ್ಷಿಸಿದರು. ಸಂಸ್ಥೆಯ ಪರವಾಗಿ ಸಚಿವರನ್ನು ಸತ್ಕರಿಸಲಾಯಿತು. ಇದಲ್ಲದೇ ಎಂಜಿನಿಯರ್‌ ದಿನಾಚರಣೆ ನಿಮಿತ್ತ ಲೋಕೋಪಯೋಗಿ ಇಲಾಖೆ ವೃತ್ತದಲ್ಲಿರುವ ಸರ್‌ ಎಮ್‌.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಿದರು. ಶಾಸಕ ಅರವಿಂದ ಬೆಲ್ಲದ, ಕಾರ್ಯಪಾಲಕ ಅಭಿಯಂತ ಎನ್‌.ಎಮ್‌.ಕುಲಕರ್ಣಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಮಹೇಶ ಶಟ್ಟಿ, ಮಾಜಿ ಸದಸ್ಯ ಈರೇಶ ಅಂಚಟಗೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next