Advertisement

ಶಿಲಾನ್ಯಾಸ ನಡೆದು 12 ವರ್ಷ ಕಳೆದರೂ ಮುಗಿಯದ ರಸ್ತೆ ಕಾಮಗಾರಿ

10:54 AM Apr 04, 2022 | Team Udayavani |

ಬೆಳ್ಮಣ್‌: ಮುಂಡ್ಕೂರು ಗ್ರಾ.ಪಂ. ನೇತೃತ್ವ ದಲ್ಲಿ ನಡೆಸಲುದ್ದೇಶಿಸಿದ್ದ ಸಂಕಲಕರಿಯ -ಪೊಸ್ರಾಲು ದೇಗುಲ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆದು ಬರೋಬ್ಬರಿ 12 ವರ್ಷಗಳೇ ಕಳೆದರೂ ಈ ವರೆಗೂ ಯಾವುದೇ ಪ್ರಗತಿ ಉಂಟಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

Advertisement

ಪೊಸ್ರಾಲು ಮಹಾಲಿಂಗೇಶ್ವರ ದೇಗುಲಕ್ಕೆ ಹತ್ತಿರದ ರಸ್ತೆ

ಸಂಕಲಕರಿಯದಿಂದ ಐತಿಹಾಸಿಕ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಈ ಉದ್ದೇಶಿತ ರಸ್ತೆ ಬಹಳ ಹತ್ತಿರವಾಗಿದ್ದು ಇಲ್ಲವಾದಲ್ಲಿ 10ರಿಂದ 15 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಈ ಬವಣೆಯ ಬಗ್ಗೆ ಮನಗಂಡ ಮುಂಡ್ಕೂರು ಗ್ರಾ.ಪಂ.ನ ಹಾಲಿ ಸದಸ್ಯ ಸತ್ಯಶಂಕರ ಶೆಟ್ಟಿ ಈ ರಸ್ತೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರಲ್ಲದೆ ಪಂಚಾಯತ್‌ನ 1 ಲಕ್ಷ ರೂ. ಅನುದಾನದಿಂದ ಎರಡು ಮೋರಿಗಳ ನಿರ್ಮಾಣದ ಜತೆ ಕಚ್ಛಾ ರಸ್ತೆಯನ್ನು ನಿರ್ಮಿಸಿ ಈ ರಸ್ತೆ ನಿರ್ಮಾಣಕ್ಕೆ ಮಹೂರ್ತ ಇರಿಸಿದ್ದರು.

ಜನ ಜಮೀನು ಬಿಟ್ಟು ಕೊಟ್ಟಿದ್ದರು

ಸತ್ಯಶಂಕರ ಶೆಟ್ಟಿಯವರ ವಿನಂತಿಗೆ ಮನ್ನಣೆಯಿತ್ತ ಕಲ್ಲಾಡಿ, ಉಗ್ಗೆದಬೆಟ್ಟು, ಪೆರ್ಗೊಟ್ಟು, ಪೇರುಗುತ್ತು, ಪೊಸ್ರಾಲು ಭಾಗದ ಜನ ತಮ್ಮ ಭೂಮಿಯ ಪಕ್ಕದಲ್ಲಿ ದೇಗುಲಕ್ಕೊಂದು ರಸ್ತೆ ನಿರ್ಮಾಣವಾಗುತ್ತದೆ ಎಂಬ ಆಶಯದಿಂದ ಸ್ವಯಂ ಇಚ್ಛೆಯಿಂದ ತಂತಮ್ಮ ಜಮೀನು ಬಿಟ್ಟು ಕೊಟ್ಟಿದ್ದರು.

Advertisement

ಶಾಸಕರಿಂದ ಶಿಲಾನ್ಯಾಸ ನಡೆದಿತ್ತು, ಕಾಮಗಾರಿಯೂ ಪ್ರಾರಂಭಗೊಂಡಿತ್ತು ಅಂದಿನ ಶಾಸಕ, ಇಂದಿನ ಸಚಿವ ವಿ. ಸುನಿಲ್‌ ಕುಮಾರ್‌ ಈ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿದ್ದರು. ಜಮೀನು ಬಿಟ್ಟು ಕೊಟ್ಟಿದ್ದ ದಾನಿಗಳನ್ನು ಶಾಸಕರೇ ಸ್ವಯಂ ಗೌರವಿಸಿದ್ದರು. ಪಂಚಾಯತ್‌ ಸದಸ್ಯರೂ, ಗಣ್ಯರೂ ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಿದ್ದರು. ಬಳಿಕ ಶಾಸಕರ ಮುತುವರ್ಜಿಯಲ್ಲಿ ಗ್ರಾಮ ಸಡಕ್‌ನಲ್ಲಿ 1 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದರೂ ಜನಸಂಖ್ಯೆಯ ಕೊರತೆಯ ಕಾರಣದಿಂದ ಆ ಅನುದಾನ ಹಿಂದೆ ಹೋಗಿತ್ತು. ಒಂದಿಷ್ಟು ಅರೆಬರೆ ಕಾಮಗಾರಿಗಳು ನಡೆದು ಜನರಲ್ಲಿ ಭರವಸೆ ಮೂಡಿಸಿದ್ದರು. ಆದರೆ ಮತ್ತೆ ಕಾಮಗಾರಿ ಸ್ಥಗಿತಗೊಂಡು ಸುಮಾರು ವರ್ಷವೇ ಕಳೆದರೂ ಈ ರಸ್ತೆ ಇಲ್ಲಿನವರಿಗೆ ಗಗನ ಕುಸುಮವಾಗುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.

ಇದೀಗ ರಾಜ್ಯದ ಕ್ರಿಯಾಶೀಲ ಸಚಿವರೆನಿಸಿಕೊಂಂಡ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ಅವರ ಮೇಲೆ ಅತಿಯಾದ ಭರವಸೆ ಇಡಲಾಗಿದೆ. ಇಲಾಖೆಗಳ ಮೂಲಗಳ ಪ್ರಕಾರ ಮತ್ತೆ ಈ ಭಾಗದ ಜನರ ಒತ್ತಾಯದ ಮೇರೆಗೆ ಸಚಿವರು ಈ ರಸ್ತೆಗೆ ವಿಶೇಷ ಅನುದಾನ ಮೂಲಕ ಕಾಯಕಲ್ಪ ನೀಡಿ ಕಾಮಗಾರಿ ಮುಗಿಸುವ ಭರವಸೆ ಇದೆ.

ಒಂದು ಕೋ.ರೂ. ಅನುದಾನ ಅಗತ್ಯ

ವಿನಂತಿಯ ಮೇರೆಗೆ ಜನ ಸ್ವಯಂಪ್ರೇರಿತರಾಗಿ ಜಮೀನು ಬಿಟ್ಟು ಕೊಟ್ಟಿದ್ದರು. ಕಚ್ಚಾ ರಸ್ತೆಯನ್ನು ನಿರ್ಮಿಸಿ ರೂಪು ರೇಷೆ ಮಾಡಲಾಗಿದೆ. ಸಚಿವರ ಮುತುವರ್ಜಿಯಲ್ಲಿ ಮುಂದೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಿರು ಸೇತುವೆ ಬೇಕಾಗಿದ್ದು ನೀರಿನ ಒರತೆ ಇರುವ ಜೌಗು ಪ್ರದೇಶಗಳನ್ನು ಎತ್ತರಗೊಳಿಸಿ ಸುಂದರ ರಸ್ತೆ ನಿರ್ಮಿಸಲು ಒಂದು ಕೋಟಿ ರೂ. ಗೂ ಮಿಕ್ಕಿ ಅನುದಾನದ ಅಗತ್ಯ ಇದೆ. ಪ್ರಯತ್ನ ಪ್ರಗತಿಯಲ್ಲಿದೆ. -ಸತ್ಯಶಂಕರ ಶೆಟ್ಟಿ, ಮುಂಡ್ಕೂರು ಗ್ರಾ.ಪಂ.ಮಾಜಿ ಅಧ್ಯಕ್ಷ

ಜನಪ್ರತಿನಿಧಿಗಳು ಸಹಕರಿಸಿ

ಪಂಚಾಯತ್‌ನಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಹೊಂದಿಸಲು ಅಸಾಧ್ಯವಾದ್ದರಿಂದ ಸಚಿವರ ಸಹಿತ ಇತರ ಜನಪ್ರತಿನಿಧಿಗಳ ಸಹಕಾರ ಕೇಳಲಾಗುವುದು. -ಭಾಸ್ಕರ ಶೆಟ್ಟಿ ಮುಂಡ್ಕೂರು, ಗ್ರಾ.ಪಂ.ಉಪಾಧ್ಯಕ್ಷ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next