ಕುಮಟಾ: ತಾಲೂಕಿನ ಹೆಗಡೆ ಗ್ರಾ.ಪಂ. ವ್ಯಾಪ್ತಿಯ ಕಲ್ಕೋಡನಲ್ಲಿ ಕೈಗೊಂಡ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಪರಿಶೀಲಿಸಿ, ಕಾಮಗಾರಿಗೆ ಎದುರಾದ ಸಮಸ್ಯೆಯನ್ನು ನಿವಾರಿಸಿ ಶೀಘ್ರ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಹೆಗಡೆಯ ಕಲ್ಕೋಡ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ರಸ್ತೆ ಅಭಿವೃದ್ಧಿ ಪಡಿಸಲು ಶಾಸಕರ ನಿಧಿಯಿಂದ 3 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆ ಮುಂದಾದಾಗ ಸ್ಥಳೀಯ ರೈತರೊಬ್ಬರು ವಿರೋಧ ವ್ಯಕ್ತಪಡಿಸಿದ್ದರು.
ಇದರಿಂದ ಕಾಮಗಾರಿ ಮುಂದುವರೆಸಲು ಕಾನೂನಿನ ತೊಡಕು ಎದುರಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಕಲ್ಕೋಡ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಗಮನಕ್ಕೆ ತಂದು, ಎದುರಾದ ಕಾನೂನು ತೊಡಕುಗಳನ್ನು ನಿವಾರಿಸಿ ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ವಿನಂತಿಸಿದ್ದರು. ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ ಕಲ್ಕೋಡ ಗ್ರಾಮಕ್ಕೆ ಭೇಟಿ ನೀಡಿ ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿದರು. ಶಾಸಕರ ನಿಧಿಯಿಂದ 3 ಲಕ್ಷ ರೂ. ಮಂಜೂರಿ ಮಾಡಿದ್ದು, ಸದ್ಯದಲ್ಲೇ ಹದಗೆಟ್ಟ ಕಲ್ಕೋಡ ರಸ್ತೆ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಭರವಸೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ರಸ್ತೆ ಕಾಮಗಾರಿ ನಡೆಯುವ ಜಾಗದಲ್ಲಿ ರೈತರೊಬ್ಬರ ಜಮೀನಿದೆ ಎಂಬ ಕಾರಣಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಕಾಮಗಾರಿ ಸ್ಥಗೀತಗೊಳಿಸಲಾಗಿತ್ತು.
ಈ ಸಮಸ್ಯೆಗೆ 15 ದಿನಗಳೊಳಗೆ ಪರಿಹಾರ ಕಂಡುಕೊಂಡು ಕಾಮಗಾರಿ ಪುನರಾರಂಭಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಆರ್‌ಡಿಪಿಆರ್ ಇಲಾಖೆಗೆ ಸೂಚಿಸಿದ್ದೇನೆ. ಮತ್ತೆ ಆಕ್ಷೇಪ ವ್ಯಕ್ತವಾದರೆ ಕಾನೂನು ರೀತಿಯಲ್ಲಿ ರಸ್ತೆ ಕಾಮಗಾರಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. ಎಪಿಎಂಸಿ ಅಧ್ಯಕ್ಷ ಧೀರೂ ಶಾನಭಾಗ, ಹೆಗಡೆ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ ಹೆಗಡೆ, ಎಇಇ ಆರ್.ಜಿ.ಗುನಗಿ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.