ಕಲಬುರಗಿ: ರಸ್ತೆ ಕಾಮಗಾರಿಗಳ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಏಕಕಾಲಕ್ಕೆ ಪ್ರತಿಭಟನೆ ನಡೆಸಿ, ಪರ- ವಿರೋಧ ಘೋಷಣೆ ಕೂಗಿದ ಘಟನೆ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿ ಮುಂದೆ ನಡೆಯಿತು.
ಆಳಂದ ಮತಕ್ಷೇತ್ರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಖಜೂರಿ, ಹೊದಲೂರ, ತಡಕಲ್, ಜಮಗಾ ಸೇರಿದಂತೆ ಸುಮಾರು 15 ಗ್ರಾಮಗಳಲ್ಲಿ ಅಂದಾಜು 2.5 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿ ಮಾಡದೆ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಆರ್.ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದಕ್ಕೆ ಪ್ರತಿಯಾಗಿ ಜಿಲ್ಲಾ ಪಂಚಾಯಿತಿಯ ಬಿಜೆಪಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಅವ್ಯವಹಾರ ನಡೆಯಲು ಹೀಗೆ ಸಾಧ್ಯ?. ಬಿ.ಆರ್.ಪಾಟೀಲ್ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಭಕ್ತಿ ಮಾತ್ರವಲ್ಲ ಎಚ್ಚರಿಕೆಯೂ ಅಗತ್ಯ; ದೇವಸ್ಥಾನದಲ್ಲಿ ಜೋರಾಗಿ ಘಂಟೆ ಬಾರಿಸಿದರೆ ಕೇಸ್
ಏಕಕಾಲಕ್ಕೆ ಎರಡು ಕಡೆಯವರು ಜಮಾವಣೆಗೊಂಡು ಪ್ರತಿಭಟನೆ, ಪರಸ್ಪರ ಘೋಷಣೆಗಳನ್ನು ಕೂಗಿದರು. ಆಗ ಸ್ಥಳಕ್ಕೆ ಆಗಮಿಸಿ ಸಿಇಓ ಡಾ.ದಿಲೀಷ್ ಸಸಿ ಅವರು ಮನವಿ ಪತ್ರಗಳನ್ನು ಸ್ವೀಕರಿಸಿ ನಿಖರ ಮಾಹಿತಿ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎರಡೂ ಕಡೆಯವರಿಗೆ ಭರವಸೆ ನೀಡಿದರು.