Advertisement

ವರ್ಷ ಕಳೆದರೂ ಕಾಮಗಾರಿ ಅಪೂರ್ಣ

05:07 PM Jun 17, 2021 | Team Udayavani |

ವರದಿ: ಗೋವಿಂದಪ್ಪ ತಳವಾರ

Advertisement

ಮುಧೋಳ: ರೈತರ ಹಾಗೂ ಜನರ ಅನುಕೂಲಕ್ಕಾಗಿ ವರ್ಷದ ಹಿಂದೆ ಆರಂಭಗೊಂಡಿದ್ದ ರಸ್ತೆ ದುರಸ್ತಿ ಕಾಮಗಾರಿಯೊಂದು ಇದೂವರೆಗೂ ಮುಕ್ತಾಯಗೊಳ್ಳದೇ ಇರುವುದರಿಂದ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.

ಸಮೀಪದ ಹಲಗಲಿ ಗ್ರಾಮದ ಸರಹದ್ದಿನ ಶ್ರೀನಿವಾಸ ನ್ಯಾಮಗೌಡರ ತೋಟದಿಂದ ಅಂದಾಜು 1 ಕಿ.ಮೀ ರಸ್ತೆಯನ್ನು ಪಂಚಾಯತ್‌ ರಾಜ್‌ ಇಲಾಖೆಯಿಂದ ದುರಸ್ತಿಗೊಳಿಸಿ ಡಾಂಬರೀಕರಣ ಮಾಡಲು ವರ್ಷದ ಹಿಂದೆಯೇ ಕಾರ್ಯಾರಂಭ ಮಾಡಲಾಗಿತ್ತು. ಆದರೆ ಅ ಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇದೂವರೆಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಕಾರಣ ಈ ಮಾರ್ಗವಾಗಿ ತೋಟಕ್ಕೆ ಓಡಾಡುವ ರೈತರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಈ ಮಾರ್ಗದಲ್ಲಿ ಹೆಚ್ಚಿನ ನೀರಾವರಿ ತೋಟಗಳಿದ್ದು, ರೈತರ ಅನುಕೂಲಕ್ಕಾಗಿ ಮೊದಲಿದ್ದ ಕಚ್ಚಾ ರಸ್ತೆಯನ್ನು ಸುಧಾರಿಸಿ ಡಾಂಬರೀಕರಣ ಮಾಡಲು ವರ್ಷದ ಹಿಂದೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ನೀಡಿದಾಗಿನಿಂದ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ಈ ಮಾರ್ಗದ ರೈತರಿಗೆ ಕಿರಿಕಿರಿಯುಂಟಾಗಿದೆ.

ಕಡಿ ಹಾಕಿದ ರಸ್ತೆಯಲ್ಲಿ ನಿತ್ಯ ಸರ್ಕಸ್‌: ಹಲಗಲಿ-ಕಾತರಕಿ ಗ್ರಾಮದ ಸಂಪರ್ಕ ರಸ್ತೆಗೆ ಹೊಂದಿಕೊಂಡು ಆರಂಭವಾಗುವ ಈ ರಸ್ತೆಯಲ್ಲಿ ದುರಸ್ತಿಗಾಗಿ ಎರಡ್ಮೂರು ತಿಂಗಳ ಹಿಂದೆಯೇ ಕಡಿ ಸುರಿಯಲಾಗಿದೆ. ಕಡಿ ಸುರಿದ ಬಳಿಕ ಕಾಮಗಾರಿ ನಿಲ್ಲಿಸಿರುವುದರಿಂದ ರಸ್ತೆಗೆ ಹಾಕಿರುವ ಕಡಿಗಳು ಮೇಲೆದ್ದು ಸಾರ್ವಜನಿಕರು ಓಡಾಟದ ವೇಳೆ ನಿತ್ಯ ಸರ್ಕಸ್‌ ಮಾಡುವಂತಾಗಿದೆ.

Advertisement

ಪ್ರತಿನಿತ್ಯ ಈ ಮಾರ್ಗದಲ್ಲಿ ಹತ್ತಾರು ಬೈಕ್‌ ಸವಾರರು ಓಡಾಡುವುದರಿಂದ ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಸಂಭವಿಸಿವೆ. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುವ ಮೊದಲು ಶೀಘ್ರವೇ ರಸ್ತೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.

ಕಬ್ಬು ಕಟಾವು ಮೊದಲೇ ಪೂರ್ಣಗೊಳ್ಳಲಿ: ಪ್ರಸ್ತುತ ರಸ್ತೆ ಕಾಮಗಾರಿ ನಡೆದಿರುವ ಪ್ರದೇಶದಲ್ಲಿ ಹೆಚ್ಚಿನ ರೈತರು ಕಬ್ಬು ಬೆಳೆ ಬೆಳೆದಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಕಬ್ಬು ಕಟಾವು ಹಂಗಾಮು ಆರಂಭವಾಗಲಿದೆ. ಅಷ್ಟರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮುಂದೆ ತೀವ್ರ ತೊಂದರೆಯುಂಟಾಗಲಿದೆ. ಆದ್ದರಿಂದ ಅ ಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next