Advertisement

ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತಾರತಮ್ಯ  

02:41 PM Feb 08, 2021 | Team Udayavani |

ಕೋಲಾರ: ನಗರದಲ್ಲಿ ನಡೆಯುತ್ತಿರುವ 10 ಕೋಟಿ ರೂ.ವೆಚ್ಚದ ರಸ್ತೆ ಅಗಲೀಕರಣದಲ್ಲಿ ತಾರತಮ್ಯ, ಅನ್ಯಾಯ, ಕಳಪೆ ಗುಣಮಟ್ಟದ ಕಾಮಗಾರಿ ನಡೆಸುತ್ತಿರುವುದನ್ನು ಒಂದು ವಾರದೊಳಗೆ ಸರಿಪಡಿಸದಿದ್ದರೆ ಕಾಮಗಾರಿ ನಿಲ್ಲಿಸಲಾಗುವುದು. ಆನಂತರವೂ ಎಚ್ಚೆತ್ತುಕೊಳ್ಳದಿದ್ದರೆ ಕೋಲಾರ ನಗರ ಬಂದ್‌ ಮಾಡಲಾಗುವುದು ಎಂದು ನೀರಾವರಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ರಸ್ತೆ  ಅಗಲೀಕರಣ ವಿಚಾರದಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬಂತೆ ತಾರತಮ್ಯ ಮಾಡಲಾಗುತ್ತಿರುವುದು ಸರಿಯಲ್ಲ. ಅಲ್ಲದೇ ಕಾಮಗಾರಿಯನ್ನು ಉತ್ತಮವಾಗಿ ನಡೆಸದೆಯೇ  ಡಾಂಬರೀಕರಣ ಮಾಡುತ್ತಿದ್ದು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಪ್ರಭಾವಿಗಳಿಗೆ ಮಣೆ: ನೀರಾವರಿ ಹೋರಾಟ ಸಮಿತಿ ಸಂಚಾಲಕ ಕುರುಬರಪೇಟೆ ವೆಂಕಟೇಶ್‌ ಮಾತನಾಡಿ, ನಗರದಲ್ಲಿ ರಸ್ತೆಗಳ ಅಗಲೀಕರಣದಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಮೋರಿಗಳ ನಿರ್ಮಾಣವಾಗದೆಯೇ ಡಾಂಬರೀಕರಣ ಮಾಡಲಾಗಿದೆ. ಕೇಬಲ್‌ ಡೆಕ್‌ ಅಳವಡಿಸುವಂತೆ ಡೀಸಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಿಗದಿತ ಅಳತೆಯಂತೆ ಅಗಲೀಕರಣ ಮಾಡದೆ ಪ್ರಭಾವಿಗಳಿರುವೆಡೆ ರಸ್ತೆ ಅಗಲವನ್ನು ಕಡಿಮೆ ಮಾಡಲಾಗಿದೆ. ಇವೆಲ್ಲವನ್ನು ವಾರದ ಒಳಗಾಗಿ ಸರಿಪಡಿಸಿ ಕೊಂಡು ಕೇಬಲ್‌ ಡೆಕ್‌ ಅಳವಡಿಸದಿದ್ದರೆ, ಡಾಂಬರೀಕರಣ ಕಾಮಗಾರಿ ನಿಲ್ಲಿಸಿ ಹೋರಾಟ ಆರಂಭಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ನೀಡಲಿಲ್ಲ: ಶಾಶ್ವತ ನೀರಾವರಿ ಹೋರಾಟ ವೇದಿಕೆ ಸಂಚಾಲಕ ಹೊಳಲಿ ಪ್ರಕಾಶ್‌ ಮಾತನಾಡಿ, ರಸ್ತೆ ಅಗಲೀಕರಣ ಗೊತ್ತಿದ್ದರೂ ಲೋಕೋಪಯೋಗಿ ಇಲಾಖೆ ಕೇವಲ ಮೂರು ವರ್ಷಗಳ ಹಿಂದಷ್ಟೇ ಪ್ರವಾಸಿ ಮಂದಿರದ ಕಾಂಪೌಂಡ್‌ ನಿರ್ಮಾಣ ಮಾಡಿ ಸಾರ್ವಜನಿಕ ಹಣ ಪೋಲು ಮಾಡಿದೆ. ಈ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು.

ಪದೇ ಪದೆ ರಸ್ತೆಗಳನ್ನು ಅಗೆಯಬಾರದು ಎನ್ನುವ ಉದ್ದೇಶದಿಂದ ಕೇಬಲ್‌ ಡೆಕ್‌ ಅಳವಡಿಸಿ ಎಂದರೂ ಕ್ರಮ ಕೈಗೊಳ್ಳುತ್ತಿಲ್ಲ. 5 ಕೋಟಿ ರೂ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವ ಪ್ರತಿ ನೀಡಲಿಲ್ಲ. ಕೆಜಿಎಫ್‌, ಬಂಗಾರಪೇಟೆಯಲ್ಲಿ ಮಾಡಿರುವಂತೆಯೇ ಜಿಲ್ಲಾ ಕೇಂದ್ರದಲ್ಲೂ ಅಭಿವೃದ್ಧಿ ಆಗಬೇಕು ಎಂದು ಆಗ್ರಹಿಸಿದರು.

Advertisement

 ಇದನ್ನೂ ಓದಿ :ಇಂದಿನಿಂದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಸಂಭ್ರಮ

ಸಂಸದರು ಪ್ರತಿದಿನವೂ ಇಲ್ಲಿನ ಅವ್ಯವಸ್ಥೆ ನೋಡುತ್ತಿದ್ದರೂ ಸರಿಪಡಿಸುತ್ತಿಲ್ಲ. ಜಿಲ್ಲಾಡಳಿತ ಮಾತು ಕೊಟ್ಟಿರುವಂತೆ ನಡೆದುಕೊಳ್ಳಲಿ. ಆಗದಿದ್ದರೆ  ನಾವು ಕೋಲಾರ ಬಂದ್‌ ಮಾಡುವ ಜತೆಗೆ ಸಂಬಂಧಪಟ್ಟ ಸಚಿವರೊಡನೆ ಚರ್ಚೆಗೆ ತೆರಳುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ವಿವಿಧ ಸಂಘಟನೆಗಳ ಮುಖಂಡರಾದ ಶ್ರೀನಿವಾಸ್‌, ಸುಧೀರ್‌, ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next