Advertisement

ರಸ್ತೆ ಸುಸ್ಥಿತಿ: ಹೀಗೊಂದು ಸಾರ್ವಜನಿಕ ಸಹಭಾಗಿತ್ವ

10:08 PM Sep 21, 2019 | mahesh |

ಡಾಂಮರು ರಸ್ತೆಯಲ್ಲಿ ಗುಂಡಿ, ಕಾಂಕ್ರೀಟ್‌ ರಸ್ತೆಗಳಾದರೆ ರಸ್ತೆಯ ಎರಡು ಬದಿಗಳಲ್ಲಿ ಹೊಂಡಗಳು ಬೀಳುವುದು, ಮಳೆ ನೀರು ಚರಂಡಿ ಉಕ್ಕೇರಿ ನೀರು ರಸ್ತೆಯಲ್ಲೇ ಹರಿಯುವುದು ಇವೆಲ್ಲಾ ಪ್ರತಿಯೊಂದು ನಗರ, ಪಟ್ಟಣಗಳಲ್ಲಿ ಬಹುತೇಕ ಕಂಡು ಬರುವ ಸಾಮಾನ್ಯ ಸಮಸ್ಯೆ. ಮಳೆಗಾಲದಲ್ಲಂತೂ ಈ ಸಮಸ್ಯೆ ತೀವ್ರತೆಯನ್ನು ಪಡೆಯುತ್ತದೆ. ರಸ್ತೆಯಲ್ಲಿ ವಾಹನಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಬಹಳಷ್ಟು ಅಪಘಾತಗಳು, ಪ್ರಾಣಹಾನಿಗಳು ಸಂಭವಿಸಿವೆ. ಅವರನ್ನು ನಂಬಿರುವ ಕುಟುಂಬಗಳು ಬೀದಿಪಾಲಾಗುತ್ತವೆ. ಇದಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಹೊಣೆಯಾಗಿಸಿ ಒಂದಷ್ಟು ಆಕ್ರೋಶ ವ್ಯಕ್ತವಾಗಿ ತಣ್ಣಾಗುತ್ತದೆ.

Advertisement

ರಸ್ತೆ ಸುಸ್ಥಿತಿ ಆಡಳಿತ ವ್ಯವಸ್ಥೆಯ ಹೊಣೆಗಾರಿಕೆ ನಿಜ. ಆದರೆ ಕೇವಲ ಆಡಳಿತ ವ್ಯವಸ್ಥೆಯನ್ನು ಹೊಣೆಯಾಗಿಸಿ ದೂರುವ ಬದಲು ರಸ್ತೆ ಸುಸ್ಥಿತಿ ಕಾರ್ಯದಲ್ಲಿ ಸಾರ್ವಜನಿಕರೂ ಕೈಜೋಡಿಸುವುದು ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ನೆೆರವಾಗುತ್ತದೆ . ಸ‌ುಗಮ ಸಂಚಾರದ ಜತೆಗೆ ಅಪಘಾತಗಳನ್ನು ಕೂಡಾ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಈ ರೀತಿಯ ಮಾದರಿ ಸಾರ್ವಜನಿಕ ಸಹಭಾಗಿತ್ವವನ್ನು ಬೆಂಗಳೂರಿನ ಪಾಟ್‌ಹೋಲ್‌ ರಾಜ ಎಂಬ ಸ್ವಯಂ ಸೇವಾ ಸಂಸ್ಥೆ ನೀಡುತ್ತಿದೆ.

ಕಾರ್ಯನಿರ್ವಹಣೆ
ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರು ಪಾಟ್‌ಹೋಲ್‌ ಸಂಸ್ಥೆಯ ಫೇಸ್‌ಬುಕ್‌, ವಾಟ್ಸಾಪ್‌ ಹಾಗೂ ವೆಬ್‌ಸೈಟ್‌ಗೆ ಚಿತ್ರಸಮೇತ ಅಪ್‌ಲೋಡ್‌ ಮಾಡುತ್ತಾರೆ. ದಾಖಲಾದ ರಸ್ತೆಗುಂಡಿಗಳ ವಿವರಗಳನ್ನು ಪಟ್ಟಿಮಾಡಿಕೊಂಡು ಅವುಗಳನ್ನು ಮುಚ್ಚಲು ಸಂಸ್ಥೆ ಕಾರ್ಯೋನ್ಮುಖವಾಗುತ್ತದೆ. ಗುಂಡಿ ಮುಚ್ಚಲು ಕೋಲ್ಡ್‌ ಅಸಾ#ಲ್ಟ್ ಎನ್ನುವ ಡಾಂಮರು ಬಳಸಲಾಗುತ್ತಿದೆ. ಇದು ಪರಿಸರಸ್ನೇಹಿ ಡಾಂಮರ್‌ ಆಗಿದ್ದು ಪ್ಲಾಸ್ಟಿಕ್‌, ರಬ್ಬರ್‌ ಮಿಶ್ರವಾಗಿರುತ್ತದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬಹುದಾಗಿದೆ. ಒಂದು ಮೀಟರ್‌ ರಸ್ತೆ ಗುಂಡಿ ಮುಚ್ಚುವುದಕ್ಕೆ ಸುಮಾರು 2500 ರೂ. ವೆಚ್ಚ ತಗಲುತ್ತದೆ. ಈ ಕಾರ್ಯದಲ್ಲಿ ಕಾರ್ಪೊರೇಟ್‌ ಸಂಸ್ಥೆಗಳು ಸಿಎಸ್‌ಆರ್‌ ಫಂಡ್‌ನ‌ಡಿಯಲ್ಲಿ ಆರ್ಥಿಕ ಸಹಕಾರವನ್ನು ನೀಡುತ್ತವೆ. ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 20 ಕ್ಕೂ ಅಧಿಕ ಕಾರ್ಪೊರೇಟ್‌ ಸಂಸ್ಥೆಗಳು ಈ ರೀತಿಯ ಆರ್ಥಿಕ ಸಹಯೋಗ ನೀಡಿವೆ. ಇದಲ್ಲದೆ ಸಂಸ್ಥೆಯ ಸೇವಾಕಾರ್ಯವನ್ನು ಗುರುತಿಸಿ ಸಾರ್ವಜನಿಕರೂ ಕೂಡಾ ಗುಂಡಿ ಮುಚ್ಚುವ ಕಾರ್ಯಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ.

ಗುಂಡಿ ಮುಚ್ಚುವ ಸೇವಾಕಾರ್ಯದ ಜತೆಗೆ ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಪಾಟ್‌ಹೋಲ್‌ ರಾಜ ಸಂಸ್ಥೆ ನಿರತವಾಗಿದೆ. ರಸ್ತೆಗಳಲ್ಲಿ ಸುರಕ್ಷತಾ ಫಲಕ ಅಳವಡಿಕೆ,ಕ್ರಾಸ್‌ಗಳಲ್ಲಿ ನಿರ್ದಿಷ್ಟ ಬಣ್ಣ ಬಳಿದು ಜಾಗೃತಿ ಕಾರ್ಯವನ್ನು ಸಂಸ್ಥೆ ಹಮ್ಮಿಕೊಂಡು ಬರುತ್ತಿದೆ. ಈ ರೀತಿಯ ಸಹಭಾಗಿತ್ವ ಮಂಗಳೂರು ನಗರ ಸೇರಿದಂತೆ ಇತರ ನಗರಗಳಲ್ಲಿ ಆರಂಭಗೊಂಡಾಗ ನಗರದ ರಸ್ತೆ ಸುಸ್ಥಿತಿಗೆ ಇದು ಪೂರಕವಾಗಬಹುದಾಗಿದೆ.

“ಪಾಟ್‌ಹೋಲ್‌ ರಾಜ ‘


“ಪಾಟ್‌ಹೋಲ್‌ರಾಜ ‘ ವಾಯುಸೇನೆಯ ನಿವೃತ್ತ ಪೈಲೆಟ್‌ ಪ್ರತಾಪ್‌ ಭೀಮಸೇನ ರಾವ್‌ರಿಂದ ಸಾಮಾಜಿಕ ಕಳಕಳಿಯ ಫಲವಾಗಿ ಹುಟ್ಟಿಕೊಂಡಿರುವ ಸಂಸ್ಥೆ. ಇದರಲ್ಲಿ ಸೇವೆ ನೀಡುವವರು ಬಹುಪಾಲು ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿಗಳು. ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವ ನೀಡುವುದು ಈ ಸಂಸೆœ ಸ್ಥಾಪನೆಯ ಪ್ರಮುಖ ಉದ್ದೇಶ. ರಸ್ತೆಗುಂಡಿಯಿಂದ ಆದ ಒಂದು ಮಾರಣಾಂತಿಕ ಅಪಘಾತ ಈ ಸಂಸ್ಥೆಯನ್ನು ಹುಟ್ಟು ಹಾಕಲು ಅವರಿಗೆ ಪ್ರೇರಣೆಯಾಯಿತು. 2014 ರಲ್ಲಿ ಅವರ ಸ್ನೇಹಿತರೋರ್ವರ ಮಗಳು ರಸ್ತೆಗುಂಡಿ ತಪ್ಪಿಸಲು ಹೋಗಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು.ಈ ಘಟನೆ ಅವರಿಗೆ ತುಂಬಾ ದುಃಖ ತಂದಿತ್ತು. ಈ ರೀತಿಯ ಘಟನೆ ಬೇರೆ ಯಾರಿಗೂ ಆಗಬಾರದು. ಗುಂಡಿ ಮುಚ್ಚುವ ಕಾರ್ಯಕ್ಕೆ ಆಡಳಿತ ವ್ಯವಸ್ಥೆಯನ್ನೇ ಕಾಯುವ, ದೂರುತ್ತಾ ಕುಳಿತುಕೊಳ್ಳುವ ಬದಲು ನಾವೇಕೆ ಕೈಜೋಡಿಸ ಬಾರದು ಎಂಬ ಉದ್ದೇಶದಿಂದ 2016 ರಲ್ಲಿ ಅವರು ಪಾಟ್‌ಹೋಲ್‌ ರಾಜ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ರಸ್ತೆ ಗುಂಡಿ ಮುಚ್ಚುವ ಜತೆಗೆ ಸುಗಮ ಸಂಚಾರಕ್ಕೆ ಪೂರಕವಾಗಿ ಇತರ ಕಾರ್ಯಗಳನ್ನು ಕೂಡಾ ನಡೆಸುತ್ತಿದೆ. “ಪಾಟ್‌ಹೋಲ್‌ರಾಜ ‘ ಸಂಸ್ಥೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಹೈದರಾಬಾದ್‌, ಮುಂಬಯಿಯಲ್ಲೂ ಕಾರ್ಯನಿರ್ವಹಿಸುತ್ತಿದೆ. ಐಟಿ-ಬಿಟಿ ಸಂಸ್ಥೆಯ ಉದ್ಯೋಗಿಗಳನ್ನು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗುವ ಬದಲು ರಸ್ತೆಯ ಗುಂಡಿ ಮುಚ್ಚುವ ಕಾರ್ಯದಲ್ಲಿ ಸಹಯೋಗ ನೀಡುತ್ತಿದ್ದಾರೆ.ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಈ ಸಂಸ್ಥೆ 5000 ಕ್ಕೂ ಅಧಿಕ ರಸ್ತೆಗುಂಡಿಗಳನ್ನು ಮುಚ್ಚಿದೆ.

Advertisement

-  ಕೇಶವ ಕುಂದಾರ್‌

Advertisement

Udayavani is now on Telegram. Click here to join our channel and stay updated with the latest news.

Next