Advertisement

ಮುಖ್ಯರಸ್ತೆಯಲ್ಲಿ ಗೂಡಂಗಡಿ ಕಿರಿಕಿರಿ

09:14 AM Jul 16, 2019 | Team Udayavani |

ಅಫಜಲಪುರ: ಪಟ್ಟಣ, ನಗರ ಪ್ರದೇಶ, ತಾಲೂಕು ಕೇಂದ್ರಗಳು ಸುಂದರವಾಗಿ ಕಾಣಲು ಅಗಲವಾದ ರಸ್ತೆ, ಅಚ್ಚುಕಟ್ಟಾದ ಕಟ್ಟಡ, ವಿದ್ಯುತ್‌ ದೀಪದ ವ್ಯವಸ್ಥೆ ಇರಬೇಕು. ಆದರೆ ಅಫಜಲಪುರದಲ್ಲಿ ಇವ್ಯಾವು ಇಲ್ಲ. ಆದರೆ ಇರುವ ಮುಖ್ಯ ರಸ್ತೆ ಮೇಲೆ ಗೂಡಂಗಡಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ.

Advertisement

ಪಟ್ಟಣದ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳಲ್ಲಿ ಎರಡು ಬದಿಗಳಲ್ಲಿ ಗೂಡಂಗಡಿಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಈ ವ್ಯಾಪಾರಿಗಳು ಮುಖ್ಯ ರಸ್ತೆ ಬಿಟ್ಟು ದೂರದಲ್ಲಿ ಅಂಗಡಿಗಳನ್ನು ಹಾಕಿಕೊಂಡರೆ ಸಮಸ್ಯೆಯಾಗುವುದಿಲ್ಲ. ಆದರೆ ರಸ್ತೆಗೆ ಹೊಂದಿಕೊಂಡಿರುವ ಚರಂಡಿಗಳ ಮೇಲೆ ಅಂಗಡಿಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅದರಲ್ಲೂ ಫಾಸ್ಟ್‌ ಫುಡ್‌ ಮಳಿಗೆಗಳು, ಪಂಚರ್‌ ಅಂಗಡಿ, ಕಟಿಂಗ್‌ ಶಾಪ್‌, ಕಿರಾಣಿ ಅಂಗಡಿ, ಸಿಮೆಂಟ್ ಮಾರಾಟಗಾರರು, ಹಣ್ಣಿನ ವ್ಯಾಪಾರ ಸೇರಿದಂತೆ ಇತರ ಅಂಗಡಿಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡಲಾಗುತ್ತಿದೆ. ಎಲ್ಲಾ ಅಂಗಡಿಗಳ ಮುಂದೆ ಅಡ್ಡಾದಿಡ್ಡಿಯಾಗಿ ಬೈಕ್‌ ನಿಲ್ಲಿಸುವುದರಿಂದ ಪಾದಾಚಾರಿಗಳು ಮುಖ್ಯ ರಸ್ತೆಯ ಮೇಲಿಂದ ಹಾಯ್ದುಹೋಗಬೇಕಾದ ಪ್ರಸಂಗ ಬಂದಿದೆ.

ದೊಡ್ಡ ವಾಹನಗಳು, ಸಣ್ಣ ವಾಹನಗಳೆಲ್ಲ ರಸ್ತೆಯ ಮೇಲೆ ಹೋಗುವಾಗ ದ್ವಿಚಕ್ರ ವಾಹನಗಳ ಹಾವಳಿ ಹೆಚ್ಚಾಗಿದ್ದು ಅಡ್ಡಾದಿಡ್ಡಿ ವಾಹನ ಚಾಲನೆಯಿಂದ ಅನೇಕ ಅನಾಹುತಗಳಾಗುತ್ತಿವೆ. ಭಾರಿ ವಾಹನಗಳ ಅಡಿಗೆ ಸಿಲುಕಿ ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದಾರೆ. ಅನೇಕ ಬಾರಿ ಸಾಕಷ್ಟು ಅವಘಡಗಳಾಗುತ್ತಿವೆ.

ಸಮಸ್ಯೆ ಅರಿವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು: ಪಟ್ಟಣದಲ್ಲಿ ಗೂಡಂಗಡಿಗಳಿಂದ ಆಗುತ್ತಿರುವ ಸಮಸ್ಯೆ ಪುರಸಭೆಯವರಿಗೆ ತಿಳಿದಿದೆ. ಆದರೂ ಅವುಗಳ ತೆರವಿಗೆ ಮತ್ತು ಪಟ್ಟಣದ ವ್ಯವಸ್ಥಿತ ಸಂಚಾರ, ವ್ಯಾಪಾರ ಸೇರಿದಂತೆ ಒಂದೊಳ್ಳೆಯ ವ್ಯವಸ್ಥೆ ಕೈಗೊಳ್ಳಲು ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಡೆ ಇದ್ದ ಚರಂಡಿಗಳನ್ನು ಮುಚ್ಚಿ ಅಂಗಡಿ-ಮುಂಗಟ್ಟುಗಳನ್ನು ಆರಂಭಿಸಲಾಗುತ್ತಿದೆ. ಇವುಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ.

ಜನಪ್ರತಿನಿಧಿಗಳ ನಿಷ್ಕಾಳಜಿ: ಸರ್ಕಾರ ತಾಲೂಕು ಕೇಂದ್ರಗಳ ಅಭಿವೃದ್ಧಿಗಾಗಿ ಬಿಡುಗಡೆಗೊಳಿಸುತ್ತಿರುವ ಅನುದಾನದಲ್ಲಿ ಅರ್ಧದಷ್ಟು ಖರ್ಚು ಮಾಡಿದರೂ ಇಲ್ಲಿಯವರೆಗೆ ಪಟ್ಟಣದ ಅಭಿವೃದ್ಧಿ ಆಗಬೇಕಾಗಿತ್ತು. ಆದರೆ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಇನ್ನು ಹಳೆ ಕಾಲದಂತೆ ಕಾಣುವ ಈ ಪಟ್ಟಣದಲ್ಲಿ ಸಾಮಾನ್ಯ ಸೌಕರ್ಯಗಳು ಇಲ್ಲದಂತಾಗಿದೆ. ಪಟ್ಟಣದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗಿದ್ದರೂ ಹೆದ್ದಾರಿಗಳು ಅಗಲವಾಗಿಲ್ಲ, ಪಟ್ಟಣದಲ್ಲಿ ಕಿರಿದಾದ ರಸ್ತೆಗಳು, ಫುಟ್ಪಾತ್‌ ವ್ಯವಸ್ಥೆ ಇಲ್ಲದಿರುವುದು, ಗಾರ್ಡನ್‌ ಇಲ್ಲದಿರುವುದು ಹೀಗೆ ಹಲವಾರು ಸಮಸ್ಯೆಗಳು ಪಟ್ಟಣಕ್ಕೆ ಕಾಡುತ್ತಿವೆ. ಇನ್ನಾದರೂ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ದಿಗೆ ಮುತುವರ್ಜಿ ವಹಿಸಿ ಪಟ್ಟಣವನ್ನು ಅಭಿವೃದ್ಧಿಗೊಳಿಸಬೇಕು. ಜೊತೆಗೆ ಅನಾಹುತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಮೇಲಿರುವ ಗೂಡಂಗಡಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

Advertisement

ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಘತ್ತರಗಿ ರಸ್ತೆ, ದುಧನಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಎರಡು ಬದಿಗಳಲ್ಲಿ ಗೂಡಂಗಡಿಗಳಿವೆ. ಹೀಗಾಗಿ ರಸ್ತೆ ಕಿರಿದಾಗಿ ಕಾಣುತ್ತಿದೆ. ಇದರಿಂದ ದಿನಾಲು ಅನಾಹುತಗಳಾಗುತ್ತಿವೆ. ಪುರಸಭೆಯವರು ಈ ಕುರಿತು ಕ್ರಮ ಕೈಗೊಳ್ಳಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.

•ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next