ಆಳಂದ: ಪಟ್ಟಣದಲ್ಲಿ ಹಲವಾರು ಕುಟುಂಬಗಳು ಕಳೆದ ಮೂರು ದಶಕಗಳಿಂದ ವಿವಿಧ ಧಾನ್ಯಗಳನ್ನು ಮಾರಿ ತಮ್ಮ ಬದುಕು ಕಟ್ಟಿಕೊಂಡಿವೆ. ಮದುವೆಯಾಗಿ ಮೂರು ವರ್ಷದಲ್ಲೇ ಪತಿಯನ್ನು ಕಳೆದುಕೊಂಡಿರುವ ಚನ್ನಮ್ಮ ಸ್ವಾಮಿ ಕಳೆದ 17 ವರ್ಷಗಳಿಂದ ಛಲ ಬಿಡದೇ ಧಾನ್ಯಗಳ ವ್ಯಾಪಾರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಬಂದ ಆದಾಯದಲ್ಲೇ ತನ್ನ ಇಬ್ಬರು
ಪುತ್ರಿಯರಿಗೆ ಶಿಕ್ಷಣ ಕೊಡಿಸಿ, ವಿವಾಹ ಮಾಡಿದ್ದಾರೆ. ಅಲ್ಲದೇ ಸಹೋದರನ ಪುತ್ರನಿಗೂ ಬಿಇಡಿ ವರೆಗೂ ಶಿಕ್ಷಣ ಕೊಡಿಸಿದ್ದಾರೆ. ಹೀಗೆ ಧಾನ್ಯಗಳ ವ್ಯಾಪಾರದಲ್ಲೇ ಮಹಿಳೆಯರು ತಮ್ಮ
ಬದುಕು ಕಟ್ಟಿಕೊಂಡಿದ್ದಾರೆ.
ವೃದ್ಧ ಮಹಿಳೆಯರು, ವಯಸ್ಸಾದವರು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಈ ವ್ಯಾಪಾರದಲ್ಲಿ ತೊಡಗಿಸಿದ್ದಾರೆ. ಶಿವಾನಂದ ದೊಡ್ಡಮನಿ, ಶಂಕರಯ್ಯ ಸ್ವಾಮಿ, ರವಿಕುಮಾರ ಹರುಣೆ, ರೇವಣಸಿದ್ಧ ಸುಣದ ಮತ್ತಿತರರು ವಿದ್ಯಾಭ್ಯಾಸ ಮಾಡಿದ್ದರೂ ಬೀದಿ ವ್ಯಾಪಾರದಲ್ಲೇ ತಮ್ಮ ಭವಿಷ್ಯ ಕಂಡುಕೊಳ್ಳುತ್ತಿದ್ದಾರೆ.
ಧಾನ್ಯಗಳ ತವರು: ಆಳಂದ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳು ಸಿರಿ ಧಾನ್ಯಗಳನ್ನು ಜಿಲ್ಲೆಯ ವಿವಿಧೆಡೆಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರುತ್ತಾರೆ. ವಿಶೇಷವೆಂದರೆ ದೇಶದ ಬಹುತೇಕ ಕಡೆ ತೂಕದ ಮೂಲಕ ಧಾನ್ಯಗಳ ಮಾರಾಟ ನಡೆದರೆ, ಇಲ್ಲಿ ಸೇರು (ಸ್ವಲಗೆ) ಮೂಲಕ ನಡೆಯುತ್ತದೆ. ಒಂದು ಸೇರಿನಲ್ಲಿ ಒಂದೂವರೆ ಕೆಜಿಯಿಂದ 1.50ಕೆ.ಜಿ ವರೆಗೆ ಧಾನ್ಯ ದೊರೆಯುತ್ತದೆ. ಹೀಗಾಗಿ ಇಲ್ಲಿನ ಬೀದಿ ವ್ಯಾಪಾರ ಭಿನ್ನವಾಗಿ ಕಾಣುತ್ತದೆ.
ಇದನ್ನೂ ಓದಿ : ಯುದ್ಧದಿಂದ ಭಾರತದ ಕೃಷಿ ಕ್ಷೇತ್ರದ ಮೇಲೆ ಪರಿಣಾಮದ ಬಗ್ಗೆ ಚಿಂತೆ
ಸೇರಿನ ಬೆಲೆ: ಎಳ್ಳು ಸೇರಿಗೆ 180ರೂ. (ಒಂದು ಕೆಜಿ), ನವಣೆ ಸೇರಿಗೆ 140ರೂ. (1.700ಗ್ರಾಂ), ಕರಿನೆಲ್ (ಕಪ್ಪು ಅಕ್ಕಿ) 150ರೂ. ಹೀಗೆ ಸಾಸಿವೆ, ಕಡಲೆ, ಉದ್ದಿನ ಬೇಳೆ, ಉದ್ದು, ಚಂಡರಕಿ ಬೇಳೆ, ಅಲಸಂದಿ, ಹುರುಳಿ, ಮಾಕಣಿ, ಕಾರೆಳ್ಳು, ಹೆಸರು, ಶೇಂಗಾ, ಕಡಲೆ, ಕಡಲೆ ಬೇಳೆ, ತೊಗರಿ ಬೇಳೆ, ಅಗಸಿ ಹಾಗೂ ಸಿರಿ ಧಾನ್ಯಗಳಾದ ಹಾರಕ, ಬರಗ, ನವಣೆ ಮತ್ತಿತರ ಧಾನ್ಯಗಳು ಸೇರಿನ ಲೆಕ್ಕದಲ್ಲೇ ಮಾರಾಟ ನಡೆಯುತ್ತದೆ.
ಬೀದಿ ಬದಿ ವ್ಯಾಪಾರಕ್ಕೆ ಪರವಾನಗಿ ನೀಡಲಾಗಿದೆ.
ಶಿಸ್ತು, ನಿಯಮ ಪಾಲನೆ, ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ, ಸ್ವತ್ಛತೆ ಕಾಪಾಡುವಂತೆ ತಿಳಿಸಲಾಗಿದೆ. ಅಲ್ಲದೇ, ಬೀದಿ ವ್ಯಾಪಾರದ ಕೌಶಲ ತರಬೇತಿ ನೀಡಿ, ಹಣದ ಉಳಿತಾಯ, ಬ್ಯಾಂಕ್ ಸಾಲ ಸೌಲಭ್ಯ ಕುರಿತು ಮಾಹಿತಿ ನೀಡಲಾಗಿದೆ.
– ವಿಜಯ ಮಹಾಂತೇಶ ಹೂಗಾರ, ಮುಖ್ಯಾಧಿಕಾರಿ, ಪುರಸಭೆ
– ಮಹಾದೇವ ವಡಗಾಂವ