ಇತ್ತೀಚೆಗಿನ ಒಂದು ವರದಿಯ ಪ್ರಕಾರ ಕೋವಿಡ್ ಗಿಂತ ಹೆಚ್ಚಿನ ಸಂಖ್ಯೆಯ ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿರು ವಾಗ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವತ್ತ ಎಲ್ಲರೂ ಗಮನ ಹರಿಸಬೇಕಾಗಿದೆ. ಅದರಲ್ಲಿ ಮಹಾನಗರ ಅಥವಾ ಗ್ರಾಮೀಣ ಪ್ರದೇಶ ಎಂಬುದಿಲ್ಲ. ಎಲ್ಲೆಲ್ಲ ಅಪಘಾತ ವಲಯಗಳಿವೆಯೋ ಅಲ್ಲೆಲ್ಲ ಸುರಕ್ಷಾ ಕ್ರಮಗಳು ತುರ್ತು ಅನಿವಾರ್ಯವಾಗಿದೆ.
ರಸ್ತೆ ಉಬ್ಬುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸುವುದು, ವೇಗ ಮಿತಿಯ ಸೂಚನ ಫಲಕ ಇಲ್ಲದಿರುವುದು, ಸಂಜ್ಞಾ ಫಲಕಗಳಿಗೆ ರಾತ್ರಿ ಹೊಳೆಯುವ ಪಟ್ಟಿ ಅಂಟಿಸದೆ ಇರುವುದು, ತಪ್ಪಾದ ಲೈನ್ ಮಾರ್ಕಿಂಗ್, ಜೀಬ್ರಾ ಕ್ರಾಸಿಂಗ್ ಗುರುತು ಮಾಡದೆ ಇರುವುದು… ಹೀಗೆ ಪಟ್ಟಿ ಮುಂದುವರಿಯುತ್ತದೆ.
ರಸ್ತೆಗಳು ಕೂಡುವ ಜಂಕ್ಷನ್‌ಗಳು ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕಾದ ಪ್ರಮುಖ ತಾಣಗಳು. ಕಾರ್ಕಳ ತಾಲೂಕಿನ ನಗರದ ಆಸುಪಾಸಿನಲ್ಲಿಯೇ 10ಕ್ಕೂ ಅಧಿಕ ಅಪಾಯಕಾರಿ ಜಂಕ್ಷನ್‌ಗಳಿವೆ. ಇವು ಹೆಚ್ಚು ಅಪಘಾತ ಸಂಭವಿಸುವ ಕ್ರಾಸಿಂಗ್ ಜಂಕ್ಷನ್‌ಗಳಾಗಿವೆ. ಇಲ್ಲೆಲ್ಲ ವಾಹನಗಳ ವೇಗ ತಡೆಗೆ ಅಗತ್ಯ ವ್ಯವಸ್ಥೆಗಳು ಆಗಬೇಕಿವೆ.
ಜಂಕ್ಷನ್‌ಗಳಲ್ಲಿ ಸೂಕ್ತ ಸುರಕ್ಷಾ ವ್ಯವಸ್ಥೆಗಳನ್ನು ಕಲ್ಪಿಸುವುದು ವಾಹನ ಸವಾರರ, ಪಾದಚಾರಿಗಳ ಜೀವ ಸಂರಕ್ಷಣೆಯ ದೃಷ್ಟಿಯಿಂದ ಅತೀ ಆವಶ್ಯಕ. ಅಪಾಯಕಾರಿ ಜಂಕ್ಷನ್‌ಗಳಲ್ಲಿ ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಅಳವಡಿಸುವುದು ವಾಹನ ಚಾಲನೆ, ರಸ್ತೆ ದಾಟುವ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದರೂ ಸೂಕ್ತ ರಸ್ತೆ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳದೇ ಇದ್ದರೆ ನೀರಿನಲ್ಲಿ ಹೋಮ ಮಾಡಿದಂತೆ.
ಕಾರ್ಕಳವನ್ನೇ ತೆಗೆದುಕೊಂಡು ಹೇಳುವುದಾದರೆ, ನಗರದ ಹೊರ ವಲಯದ ಹೆಚ್ಚಿನ ಜಂಕ್ಷನ್‌ಗಳಲ್ಲಿ ರಾತ್ರಿ ಹೊತ್ತು ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಪಾದಚಾರಿಗಳು ಮಂದ ಬೆಳಕಿನಲ್ಲಿ ರಸ್ತೆ ಅಡ್ಡ ದಾಟುತ್ತಿರುವಾಗ ಗೋಚರಿಸದೆ ವಾಹನ ಅವಘಡಗಳು ಸಂಭವಿಸುತ್ತವೆ. ಜನರು ಹೆಚ್ಚು ಓಡಾಡುವ ಮತ್ತು ರಸ್ತೆ ದಾಟುವ ನೇರ ರಸ್ತೆ ಇರುವ ಕಡೆಗಳಲ್ಲಿಯೂ ಬ್ಯಾರಿಕೇಡ್, ಹಂಪ್‌ಗ್ಳನ್ನು ಅಳವಡಿಸಿ ಅಪಘಾತ ತಪ್ಪಿಸಬಹುದು. ಶಾಲಾ ಕಾಲೇಜುಗಳಿರುವ ಸ್ಥಳಗಳಲ್ಲಿ ಮಕ್ಕಳು ರಸ್ತೆಯಲ್ಲಿ ಓಡಾಡುವುದು, ದಾಟುವುದು ಮಾಡುತ್ತಿರುತ್ತಾರೆ. ಇಂತಹ ಕಡೆಗಳಲ್ಲಿ ವೇಗ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ.
ಹೆಚ್ಚು ಅಪಘಾತವಾಗುವ ಜಂಕ್ಷನ್ ಮತ್ತು ರಸ್ತೆಗಳಿರುವ ಕಡೆಗಳಲ್ಲಿ ಗೃಹರಕ್ಷಕ ದಳ, ಪೊಲೀಸ್ ಸಿಬಂದಿಯನ್ನು ವಾಹನ, ಜನ ಸಂಚಾರ ಹೆಚ್ಚಿರುವ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಾದರೂ ನಿಯೋಜಿಸಿದಲ್ಲಿ ಬಹಳಷ್ಟು ಅನುಕೂಲವಾಗುತ್ತದೆ.
ಹೆಚ್ಚು ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ, ಸುರಕ್ಷಾ ಲೋಪಗಳನ್ನು ಸರಿಪಡಿಸಲು ಸಂಬಂದಿಸಿದ ಇಲಾಖೆಗಳು ಯೋಜನೆ ರೂಪಿಸುವು ಅಗತ್ಯ. ಗ್ರಾಮೀಣ ರಸ್ತೆಗಳ ಪೈಕಿ ಕೆಲವೆಡೆ ಗುಂಡಿ ಬಿದ್ದಿದ್ದು, ಅಪಘಾತ ಸಂಭವಿಸಲು ಕಾರಣವಾಗುತ್ತಿದೆ. ಇವೆಲ್ಲದರ ಕಡೆ ಸಂಬಂಧಿಸಿದ ಇಲಾಖೆಗಳು ಗಮನ ಹರಿಸದೆ ಹೋದಲ್ಲಿ ಅಪಘಾತ, ಸಾವು-ನೋವು ಮುಂದುವರಿಯುತ್ತದೆ. ಹಾಗಾಗದಿರಲಿ, ಅದಕ್ಕಾಗಿ ಇಲಾಖೆಗಳು ಈಗಿಂದೀಗಲೇ ಕಾರ್ಯೋನ್ಮುಖವಾಗಲಿ.
-ಸಂ.